ಬೆಂಗಳೂರು: ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಟ್ಟಡಗಳ ತ್ಯಾಜ್ಯ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಎಸೆಯುವವರಿಗೆ ಬಿಬಿಎಂಪಿ ಖಡಲ್ ಎಚ್ಚರಿಕೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳು, ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಇಕ್ಕೆಲಗಳು ಹಾಗೂ ಹೊರವಲಯದಲ್ಲಿ ಅನಧಿಕೃತವಾಗಿ ಕಟ್ಟಡದ ಅವಶೇಷಗಳು ಮತ್ತು ಇತರೆ ಭಗ್ನಾವಶೇಷಗಳನ್ನು ಹಾಕುವಂತಿಲ್ಲ. ಹಾಕಿದರೆ ಅಂತವರ ಮೇಲೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಪ್ರತಿ ಟನ್ ಕಟ್ಟಡಗಳ ತ್ಯಾಜ್ಯಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಬಿಬಿಎಂಪಿ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಜಂಟಿ ನಿರ್ದೇಶಕರು (SWM) ಹೊರಡಿಸಿದ ಆದೇಶದಲ್ಲಿ ಏಜೆನ್ಸಿಗಳು ಅನಧಿಕೃತವಾಗಿ ಕಟ್ಟಡಗಳ ಅವಶೇಷಗಳನ್ನು ಮತ್ತು ಇತರೆ ಭಗ್ನಾವಶೇಷದ ತ್ಯಾಜ್ಯವನ್ನು ನಗರದ ಹೊರವಲಯದಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ನಗರದೊಳಗೆ ಪ್ರವೇಶಿಸುವ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತಂತೆ ನಕಾರಾತ್ಮಕ ಮನೋಭಾವ ಮೂಡುತ್ತಿದೆ. ಅಲ್ಲದೆ, ನಗರದ ಘನತೆಗೆ ಧಕ್ಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.