2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ದೋಸ್ತಿ ಮಾಡಿಕೊಂಡಿದ್ದ ಜೆಡಿಎಸ್, 2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜೊತೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳು ಇದ್ದು, ಅದರಲ್ಲಿ ಹಳೇ ಮೈಸೂರು ಭಾಗದ 6 ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು, ಉಳಿದ 22 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿ ಎನ್ನುವ ಮಾತುಕತೆ ಆಗಿದೆ ಎನ್ನಲಾಗ್ತಿದೆ. ಆದರೆ ಬಿಜೆಪಿ ಮಾತ್ರ ಜೆಡಿಎಸ್‌ಗೆ ನಾಲ್ಕು ಕ್ಷೇತ್ರಗಳಲ್ಲಿ ಸ್ಥಾನ ಬಿಟ್ಟುಕೊಡಬಹುದು ಎಂದು ಬಹಿರಂಗವಾಗಿಯೇ ಹೇಳಿರುವುದು ಮೈತ್ರಿ ಹೆಚ್ಚು ಕಡಿಮೆ ಅಂತಿಮವಾಗಿದೆ ಅನ್ನೋದನ್ನು ಸೂಚಿಸುತ್ತಿದೆ.

ಹಳೇ ಮೈಸೂರು ಭಾಗದಲ್ಲಿ ಕಾರುಬಾರಿಗೆ ಜೆಡಿಎಸ್ ಯತ್ನ..!
ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗು ಜೆಡಿಎಸ್ ತಲಾ ಒಂದೊಂದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ರೆ, ಹಾಸನ ಲೋಕಸಭಾ ಕ್ಷೆತ್ರದಲ್ಲಿ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ಇನ್ನುಳಿದಂತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಗೆಲುವು ಸಾಧಿಸಿದ್ರೆ ಇನ್ನುಳಿದ 25 ಕ್ಷೆತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಗೆಲುವಿನ ಕೇಕೆ ಹಾಕಿದ್ದರು. ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿದಂತೆ ಈ ಬಾರಿ ಕಾಂಗ್ರೆಸ್ ಜಯದ ನಾಗಾಲೋಟ ನಡೆಸಲು ಕಾಂಗ್ರೆಸ್ ತಯಾರಿ ಮಾಡಿಕೊಳ್ತಿದೆ. ಈ ನಡುವೆ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲು ಮುಂದಾಗಿರುವ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸಲು ಮುಂದಾಗಿದೆ. ಅದರಲ್ಲೂ ಕಳೆದ ಬಾರಿ ಸೋಲುಂಡು, ವಿಧಾನಸಭಾ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಿದ್ದ ಜೆಡಿಎಸ್, ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಮೆರೆಯಲು ಹಣಿಯಾಗ್ತಿದೆ. ಇದೇ ಕಾರಣಕ್ಕೆ ಜೆಡಿಎಸ್ ಪಕ್ಷದ ಗಟ್ಟಿ ನೆಲೆ ಆಗಿರುವ ಹಾಸನ, ತುಮಕೂರು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು ಕ್ಷೇತ್ರವನ್ನು ಕೇಳಿದ್ದಾರೆ ಎನ್ನಲಾಗಿದೆ.

BJP – JDS ಮೈತ್ರಿಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ..?
BJP – JDS ಮೈತ್ರಿ ಬಗ್ಗೆ ಒಂದೆರಡು ದಿನದಲ್ಲಿ ಅಧಿಕೃತ ಘೋಷಣೆ ಆಗುತ್ತದೆ ಎನ್ನಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಸುವ ಬಗ್ಗೆ ಚರ್ಚೆಯಾಗಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕರೂ ಕೂಡ ಮೈತ್ರಿ ಮಾತುಕತೆಯನ್ನು ಸ್ವಾಗತ ಮಾಡಿದ್ದಾರೆ. ಆದರೆ ಈ ಬಗ್ಗೆ ತೀರಾ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿ ಮಾಡಿಕೊಳ್ಳೋರು ಮಾಡಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ. ಇನ್ನು ಇಬ್ಬರ ಸಿದ್ಧಾಂತ ಯಾವ ರೀತಿ ಹೊಂದಾಣಿಕೆ ಆಗುತ್ತದೆ ನೋಡೋಣ ಎಂದು ಡಿಕೆಶಿ ಹೇಳಿದ್ದಾರೆ. ಆದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಕನಿಷ್ಟ ಐದತ್ತು ಸಾವಿರ ಮತಗಳನ್ನು ಹೊಂದಿದ್ದರೂ ಇಬ್ಬರ ಮತಗಳು ಕ್ರೂಢೀಕರಣ ಆದರೆ, ಕಾಂಗ್ರೆಸ್‌ನಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವುದರಲ್ಲಿ ಅಭ್ಯಂತರ ಇಲ್ಲ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಇತ್ತೀಚಿಗೆ ಬಿಜೆಪಿ ಕೂಡ ನೆಲೆ ಕಂಡುಕೊಂಡಿದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲೂ ಜೆಡಿಎಸ್ ಸಣ್ಣ ಪ್ರಮಾಣದಲ್ಲಿ ಶಕ್ತಿ ಹೊಂದಿದೆ. ಇವರಿಬ್ಬರ ಮೈತ್ರಿ ಬಗ್ಗೆ ಕಾಂಗ್ರೆಸ್ ಚಿಂತಿಸಬೇಕಾದ ಅನಿವಾರ್ಯತೆ ಇದೆ.

ಜಾತ್ಯಾತೀತ – ಧರ್ಮಾಧಾರಿತ ಹೊಂದಾಣಿಕೆ ಆಗುತ್ತಾ..?
ಜೆಡಿಎಸ್ ಜಾತ್ಯಾತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದು, ಎಲ್ಲಾ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾತನಾಡುತ್ತದೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಇದ್ದಾರೆ. ಆದರೆ ಮುಸ್ಲಿಮರ ಮತಗಳೇ ಬೇಡ, ನಮಗೆ ಹಿಂದೂಗಳು ಮತ ಹಾಕಿದ್ರೆ ಸಾಕು ಅನ್ನೋದು ಬಿಜೆಪಿ ಮನಸ್ಥಿತಿ. ಹೀಗಿರುವಾಗ ಇವರಿಬ್ಬರ ಹೊಂದಾಣಿಕೆ ಎಷ್ಟು ಸಾಧ್ಯ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರ ಶೇಕಡ 85ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದು, ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ಮತಗಳಿಗೆ ಆಗಿಲ್ಲ. ಹೀಗಾಗಿ ಮುಸ್ಲಿಮರ ಮತಗಳನ್ನು ಜೆಡಿಎಸ್ ನಂಬಿಕೊಳ್ಳುವ ಪರಿಸ್ಥಿತಿ ಇಲ್ಲ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಜೆಡಿಎಸ್ ಬಿಜೆಪಿ ಜೊತೆಗೆ ದೋಸ್ತಿ ಮಾತುಕತೆಗೆ ಮುಂದಾಗಿದ್ದು, ಅಂತಿಮವಾಗಿ ಘೋಷಣೆ ಆದ ಬಳಿಕ ಅಭ್ಯರ್ಥಿ ಆಯ್ಕೆ ಕಸರತ್ತು ಶುರುವಾಗಲಿದೆ.
ಕೃಷ್ಣಮಣಿ