~ ಡಾ. ಜೆ ಎಸ್ ಪಾಟೀಲ
ಗೌರಿ ಲಂಕೇಶ್ ಅವರ ಅಮಾನುಷ ಹತ್ಯೆ ಘಟಿಸಿ ಈಗ ಏಳು ವರ್ಷಗಳು ಮುಗಿಯುತ್ತದೆ. ಖ್ಯಾತ ಸಂಶೋಧಕ ಡಾ. ಎಂ ಎಂ ಕಲಬುರಗಿಯವರ ಹತ್ಯೆಯ ನಡೆದ ವರ್ಷದ ಅಂತರದಲ್ಲಿ ಸೆ. ೦೫ˌ ೨೦೧೭ ರಂದು ಗೌರಿ ಕೊಲೆ ನಡೆದುಹೋಗಿತ್ತು. ಈ ಎರಡೂ ಕೊಲೆಗಳ ಹಿಂದೆ ಕೆಲಸ ಮಾಡಿದ ಮಹಾರಾಷ್ಟ್ರದ ಮತಾಂಧ ಭಯೋತ್ಪಾದ ಗುಂಪು ತಾವು ಮಾಡಿಸಬೇಕಾದ ಕೊಲೆಗಳ ಒಂದು ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿತ್ತೆನ್ನುವ ಸಂಗತಿ ತನಿಖೆಯ ವೇಳೆ ಬಯಲಾಗಿತ್ತು. ಪ್ರೊ. ಕೆ ಎಸ್ ಭಗವಾನ್ˌ ಗಿರೀಶ್ ಕಾರ್ನಾಡˌ ವೀರಭದ್ರ ಚೆನ್ನಮಲ್ಲ ಸ್ವಾಮಿˌ ಡಾ. ಕಲಬುರಗಿ ಮತ್ತು ಗೌರಿ ಇವರೆಲ್ಲರ ಕೊಲೆಗೆ ಯೋಜನೆ ರೂಪಿಸಿದ್ದ ಭಯೋತ್ಪಾದಕರು ಡಾ. ಕಲಬುರಗಿ ಮತ್ತು ಗೌರಿ ಕೊಲೆ ಮಾಡುವಲ್ಲಿ ಸಫಲರಾಗಿದ್ದರು. ಮಹಾರಾಷ್ಟ್ರದಲ್ಲಿ ಮೊದಲು ಅಲ್ಲಿನ ಖ್ಯಾತ ವಿಚಾರವಾದಿ ನರೇಂದ್ರ ದಾಬೋಲ್ಕರ್ ಮತ್ತು ಕಾಮ್ರೇಡ್ ಗೋವಿಂದ್ ಪನ್ಸಾರೆಯವರ ಕೊಲೆಗಳ ಹಿಂದೆಯೂ ಇದೇ ಹಂತಕ ಪಡೆಯ ಕೈವಾಡವಿರುವ ಸಂಗತಿ ತನಿಖಾ ತಂಡ ಊಹಿಸಿದ್ದನ್ನು ನಾವು ಸ್ಮರಿಸಬಹುದು.
ಬುದ್ದಿಜೀವಿˌ ಚಿಂತಕರು ಹಾಗು ವಿಚಾರವಾದಿಗಳನ್ನು ಧರ್ಮಾಂಧರು ದ್ವೇಷಿಸುವ ಮತ್ತು ಮುಗಿಸುವ ಪ್ರಕ್ರೀಯೆ ಪುರಾಣಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಪುರಾಣಗಳ ಕಾಲದಲ್ಲಿ ನಡೆಯುತ್ತಿದ್ದ ಅನ್ಯಾಯˌ ಅತ್ಯಾಚಾರಗಳನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಮತ್ತು ಅವನ್ನು ತಮ್ಮ ಅಸೀಮ ಬಲದಿಂದ ಹತ್ತಿಕ್ಕುತ್ತಿದ್ದ ದ್ರಾವಿಡ ರಾಜರುಗಳನ್ನು ರಾಕ್ಷಸರೆಂದು ಕರೆಯುತ್ತ ˌ ಧರ್ಮ ಅಧರ್ಮಗಳ ಹುಸಿ ಕಥೆಗಳನ್ನು ಹೆಣೆಯುತ್ತ ಸನಾತನಿಗಳು ಅವರನ್ನು ಮುಗಿಸಲು ಠಕ್ಕ ಹುನ್ನಾರಗಳು ಮಾಡಿದ ದೃಷ್ಟಾಂತಗಳು ನಮ್ಮ ಕಣ್ಣೆದುರಿಗಿವೆ. ದೇವ-ದಾನವರ ಯುದ್ಧ ಮುಂತಾದ ಕಲ್ಪಿತ ಕತೆಗಳು ಅಂದಿನ ಕಾಲದ ಜನಾಂಗೀಯ ಕಲಹಗಳಲ್ಲದೆ ಬೇರೆನೂ ಅಲ್ಲ. ಅದುನಿಕ ಕಾಲದಲ್ಲಿ ಈಗ ನಡೆಯುತ್ತಿರುವ ವಿಚಾರವಾದಿಗಳ ಕೊಲೆಯ ಸಣಿಗಳು ಪುರಾಣಗಳಲ್ಲಿನ ಸನಾತನಿಗಳ ಪುಂಡಾಟದ ಮುಂದುವರೆದ ಭಾಗಗಳು. ಹಾಗಾಗಿ ಇಡೀ ಜಗತ್ತಿನಲ್ಲಿ ಈ ಧರ್ಮಾಂಧರದ್ದು ಬಹು ದೊಡ್ಡ ಮತ್ತು ಅತ್ಯಂತ ಪುರಾತನವಾದ ಭಯೋತ್ಪಾದಕ ಸಂಘಟನೆ ಎಂದರೆ ತಪ್ಪಾಗಲಿಕ್ಕಿಲ್ಲ.
*ಧರ್ಮಾಂಧರು ವಿಚಾರವಾದಿಗಳನ್ನು ಏಕೆ ದ್ವೇಷಿಸುತ್ತಾರೆ?*
ನಮಗೆಲ್ಲ ತಿಳಿದಂತೆ ಮೂಲಭೂತವಾದಿ ಧರ್ಮಾಂಧರು ಚಿಂತಕರನ್ನು ˌ ಪ್ರಗತಿಪರರನ್ನು ˌ ವಿಚಾರವಾದಿಗಳನ್ನು ನಖಶಿಖಾಂತ ದ್ವೇಷಿಸುತ್ತಾರೆ. ಮರ್ಧಾಂಧರಿಗೆ ಸಮಾಜ ಸುಧಾರಿಸುವುದಾಗಲಿˌ ಸಮಾಜದೊಳಗೆ ಜನರು ಬುದ್ದಿವಂತರಾಗುವುದಾಗಲಿ ಬೇಡವಾದ ಸಂಗತಿ. ಜನರ ಮೌಢ್ಯವನ್ನೇ ಬಂಡವಾಳವಾಗಿಸಿಕೊಂಡು ಪರಾವಲಂಬಿ ಬದುಕು ನಡೆಸುವ ಪುರೋಹಿತಶಾಹಿಗಳು ಜನರು ಜಾಗೃತರಾಗುವುದನ್ನು ಎಂದಿಗೂ ಸಹಿಸುವುದಿಲ್ಲ. ಪುರೋಹಿತರುˌ ಜ್ಯೋತಿಷಿಗಳು ಈಗಲೂ ಕೂಡ ಆ ಪೂಜೆˌ ಈ ಹೋಮಗಳನ್ನು ಮಾಡಲು ಹೇಳುತ್ತಾರೆಯೆ ಹೊರತು ಸುಶಿಕ್ಷತರಾಗಿರಿˌ ಶಾಲೆ ಕಲೆಯಿರಿ ಎಂದು ಜನರನ್ನು ಎಂದಿಗೂ ಹೇಳುವುದಿಲ್ಲ. ಅದರ ಬದಲಾಗಿ ಗುಡಿ ಗುಂಡಾರಗಳನ್ನು ಕಟ್ಟಲುˌ ಹೋಮˌ ಹವನˌ ಪರಿಹಾರ ಪೂಜೆಗಳನ್ನು ನೆರವೇರಿಸಲು ಹೇಳುತ್ತಾರೆ. ಜನರು ಸುಶಿಕ್ಷಿತರಾದರೆ ಧರ್ಮಾಂಧರ ಪರಾವಲಂಬಿ ಹೊಟ್ಚೆ ತುಂಬುವುದಾದರೂ ಹೇಗೆ? ಕಾಲ್ಪನಿಕ ಚಾಣಕ್ಯ ಅಥವಾ ಕೌಟಿಲ್ಯನ ಅರ್ಥಶಾಸ್ತ್ರವೆ ಆರ್ಥಿಕ ಲಾಭಕ್ಕಾಗಿ ಮಂದಿರಗಳನ್ನು ನಿರ್ಮಿಸಬೇಕು ಎನ್ನುತ್ತದೆ.
ಹೀಗೆ ಅನಾದಿ ಕಾಲದಿಂದಲೂ ಸಮಾಜವನ್ನು ಸದಾ ಮೌಢ್ಯದಲ್ಲಿಡುತ್ತ ಬಂದಿರುವ ಧರ್ಮಾಂಧರು ಆಗಾಗ ಜನರನ್ನು ಜಾಗೃತೆಗೊಳಿಸಲು ಪ್ರಯತ್ನಿಸುವ ವಿಚಾರವಾದಿಗಳನ್ನು ಸಹಿಸುವುದಿಲ್ಲ. ವಿಚಾರವಾದಿಗಳು ತಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಾರೆ ಎನ್ನುವ ಆತಂಕ ಅವರಿಗೆ ಸದಾ ಕಾಡುತ್ತಲೆ ಇರುತ್ತದೆ. ಆ ಕಾರಣದಿಂದಲೇ ಅವರು ಮಾತೆತ್ತಿದರೆ ಸಾಕುˌ ದೇವರುˌ ಧರ್ಮˌ ಸಂಪ್ರದಾಯˌ ಸಂಸ್ಕೃತಿಗಳ ಮುಖವಾಡದಲ್ಲಿ ಸಮಾಜವನ್ನು ಅಂಧಕಾರದಲ್ಲಿ ಇಡಲು ಹವಣಿಸುತ್ತಾರೆ. ಅದಕ್ಕೆ ಕಾಲ್ತೊಡಕಾಗುವ ವಿಚಾರವಾದಿಗಳನ್ನು ಕೊಂದು ಮುಗಿಸುತ್ತಾರೆ. ಮಹಾರಾಷ್ಟ್ರದಲ್ಲಿ ಪುರೋಹಿತಶಾಹಿಗಳು ಬಿತ್ತುತ್ತಿದ್ದ ಮೌಢ್ಯಗಳ ವಿರುದ್ಧ ಸಮರ ಸಾರಿದ್ಧ ದಾಬೋಲ್ಕರ್ ˌ ಹಾಗು ತಮ್ಮ ವೈಚಾರಿಕ ಚಿಂತನೆಗಳಿಂದ ಜನರನ್ನು ಜಾಗೃತಗೊಳಿಸುತ್ತಿದ್ದ ಗೋವಿಂದ ಪನ್ಸಾರೆಯವರ ಹತ್ಯೆಗಳು ನಡೆದದ್ದು ಈ ಹಿನ್ನೆಲೆಯಲ್ಲೆ. ಅದರ ಮುಂದುವರೆದ ಭಾಗವೆ ಕರ್ನಾಟಕದಲ್ಲಿ ಡಾ. ಕಲಬುರಗಿ ಮತ್ತು ಗೌರಿ ಲಂಕೇಶ್ ಹತ್ಯೆಗಳು.
ಗೌರಿ ಹತ್ಯೆಯನ್ನು ರಾಷ್ಟ್ರೀಯ ಮತ್ತು ಅದರಲ್ಲೂ ವಿಶೇಷವಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವಸ್ತುನಿಷ್ಟವಾಗಿ ವರದಿ ಮಾಡುತ್ತಿದ್ದರೆ ಮತಾಂಧರಿಂದಲೇ ತುಂಬಿಕೊಂಡಿರುವ ಕರ್ನಾಟಕದ ಮಾಧ್ಯಮಗಳು ಘಟನೆಯ ನೈಜ ಕಾರಣಗಳನ್ನು ಮರೆಮಾಚಿˌ ಜನತೆಯನ್ನು ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸುವಂತ ವಿಕೃತ ವರದಿಗಳನ್ನು ಪ್ರಸಾರ ಮತ್ತು ಪ್ರಕಟಿಸುವ ಕೆಲಸ ವ್ಯವಸ್ಥಿತವಾಗಿ ಮಾಡಿದವು. ಜೀವಂತವಿರುವಾಗ ಗೌರಿ ಎದುರಿಗೆ ನಿಂತು ಮಾತನಾಡುವ ಯೋಗ್ಯತೆ ಮತ್ತು ಎದೆಗಾರಿಗೆ ಎರಡೂ ಇಲ್ಲದ ಅದೆಷ್ಟೊ ಅಯೋಗ್ಯ ಹಾಗು ಭ್ರಷ್ಟ ಸಂಪಾದಕರು ಆಕೆಯ ದಾರುಣ ಸಾವಿನಲ್ಲೂ ವಿಕೃತ ಆನಂದ ಅನುಭವಿಸಿ ವರದಿ ಬರೆದದ್ದನ್ನು ನಾವು ನೋಡಿದ್ದೇವೆ. ಇನ್ನು ಕನ್ನಡದ ದೃಶ್ಯ ಮಾಧ್ಯಮಗಳಂತೂ ಗೌರಿ ಕೊಲೆಯ ಹಿಂದಿರುವ ಸನಾತನಿ ಧರ್ಮಾಂಧ ಶಕ್ತಿಗಳ ರಕ್ಷಣೆಗೆ ಧಾವಿಸಿದ್ದಿಲ್ಲದೆ ಕೊಲೆಯಲ್ಲಿ ನಕ್ಸಲರ ಕೈವಾಡವಿರುವುದಾಗಿ ತಲೆಬುಡವಿಲ್ಲದ ಪೂರ್ವನಿಯೋಜಿತ ಕುಟಿಲ ಹಾಗು ಕಪೋಲಕಲ್ಪಿತ ಸುಳ್ಳು ವರದಿಗಳ ಪ್ರಸಾರ ನಿರಂತರವಾಗಿ ಮಾಡಿದವು.
ಕೇವಲ ಊಹೆಗಳ ಆಧಾರದಲ್ಲಿ ಈ ರೀತಿ ತನಿಖೆಯ ದಿಕ್ಕು ತಪ್ಪಿಸುವ ವರದಿಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಅಂದು ತನಿಖಾ ತಂಡ ಮೊಕದ್ದಮೆಯನ್ನು ದಾಖಲಿಸಿಕೊಂಡು ಅಂತಹ ಮಾಧ್ಯಮಗಳ ಮುಖ್ಯಸ್ಥರನ್ನು ಒದ್ದು ಒಳಗೆ ಹಾಕಿ ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಕನ್ನಡದ ಖ್ಯಾತ ಪತ್ರಕರ್ತ ದಿವಂಗತ ಲಂಕೇಶ್ ಅವರ ಮಗಳು ಮತ್ತು ಸ್ವತಃ ದಿಟ್ಟ ಪತ್ರಕರ್ತೆಯಾಗಿದ್ದ ಗೌರಿಯ ಕೊಲೆಯ ವಿರುದ್ಧ ಗಟ್ಟಿ ಧ್ವಿನಿಯಲ್ಲಿ ಪ್ರತಿಭಟಿಸಬೇಕಾಗಿದ್ದ ಕನ್ನಡದ ಮಾಧ್ಯಮಗಳು ಗೌರಿಯ ಕೊಲೆಯನ್ನು ಬಹಿರಂಗವಾಗಿಯೆ ಸಮರ್ಥಿಸುವˌ ಸಂಭ್ರಮಿಸುವ ಮತ್ತು ತನಿಖೆಯ ದಿಕ್ಕು ತಪ್ಪಿಸುವ ಸುಳ್ಳು ವರದಿಗಳನ್ನು ಪ್ರಕಟ/ಪ್ರಸಾರ ಮಾಡುವ ಖದೀಮತನ ಪ್ರದರ್ಶಿಸಿದವು. ದಿವಂಗತ ಲಂಕೇಶ್ ಅವರಾಗಲಿˌ ಗೌರಿ ಲಂಕೇಶ್ ಆಗಲಿ ಎಂದಿಗೂ ಆಡಳಿತದ ಚುಕ್ಕಾಣಿ ಹಿಡಿದವರ ಚಮಚಾಗಿರಿ ಮಾಡುವುದಾಗಲಿ ಅಥವಾ ಸ್ವಜಾತಿ ದುರಾಭಿಮಾನ ಪ್ರದರ್ಶಿಸಿಸುವುದಾಗಲಿ ಮಾಡದೆ ಸಮಾಜಮುಖಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದವರು.
ಅದೇ ರೀತಿ ಚಮಚಾಗಿರಿ ಮಾಡುವ ಜಾತಿವಾದಿ ಪತ್ರಕರ್ತರನ್ನು ಅವರು ದೂರವಿಟ್ಟಿದ್ದರು. ಆ ಸಿಟ್ಟನ್ನು ಜಾತಿವಾದಿ ಪತ್ರಕರ್ತರು ಗೌರಿಯ ಸಾವಿನ ಸಮಯದಲ್ಲಿ ತೋರ್ಪಡಿಸಿಕೊಂಡರು. ದಿವಂಗತ ಲಂಕೇಶ್ ಬರಹಗಳೆಂದರೆ ಧರ್ಮಾಂಧರ ಜಂಘಾಬಲ ಉಡುಗಿಹೋಗುತ್ತಿತ್ತು. ಅದೇ ಹಾದಿಯಲ್ಲಿ ಗೌರಿ ಕೂಡ ಸನಾತನಿಗಳ ಪುಂಡಾಟಗಳನ್ನು ವಿಶೇಷ ಕಾಳಜಿಯಿಂದ ವಿಶ್ಲೇಷಿಸುತ್ತಿದ್ದರು. ಕರಾವಳಿಯಲ್ಲಿ ಧರ್ಮಾಂಧರು ನಡೆಸುತ್ತಿದ್ದ ಅನೇಕ ಕಾನೂನು ಬಾಹಿರ ಚಟುವಟಿಗಳನ್ನು ಮತ್ತು ಸಮಾಜದ ಸಾಮರಸ್ಯ ಕೆಡಿಸುವ ಕಾರ್ಯಗಳನ್ನು ಗೌರಿ ಯಾವ ಭಯ ಅಥವಾ ಅಳುಕಿಲ್ಲದೆ ತಮ್ಮ ಪತ್ರಿಕೆಯಲ್ಲಿ ಬಹಿರಂಗಗೊಳಿಸುತ್ತಿದ್ದರು. ಕನ್ನಡದ ಬಹುತೇಕ ಮಾಧ್ಯಮಗಳ ಮುಖ್ಯಸ್ಥರು ಧರ್ಮಾಂಧರ ಜಾತಿ ಬಳಗಕ್ಕೆ ಸೇರಿದವರಾಗಿದ್ದು ಅವರೆಲ್ಲ ತಮ್ಮವರ ಅರಾಜಕ ಚಟುವಟಿಗಳನ್ನು ಎಂದಿಗೂ ಬಯಲಿಗೆಳೆಯುವ ಕೆಲಸ ಮಾಡುತ್ತಿರಲಿಲ್ಲ. ಆದರೆ ಗೌರಿ ಲಂಕೇಶ್ ಮಾತ್ರ ಈ ಕೋಮುವಾದಿಗಳ ಪ್ರತಿಯೊಂದು ಕಾನೂನು ಬಾಹಿರ ಚಟುವಟಿಕೆಗಳನ್ನು ಬಯಲುಗೊಳಿಸುತ್ತಿದ್ದರು.
ಇದರಿಂದ ಆ ಧರ್ಮಾಂಧರಿಗಿಂತ ಅವರ ಮಾಧ್ಯಮ ಬಂಧುಗಳಿಗೆ ಹೆಚ್ಚಿನ ಇರುಸುಮುರಿಸು ಆಗುತ್ತಿತ್ತು ಎನ್ನುವುದು ತಿಳಿಯಪಡಿಸಿದ್ದು ಗೌರಿ ಸಾವಿನ ನಂತರದ ಮಾಧ್ಯಮಗಳ ಪ್ರತಿಕ್ರೀಯೆಗಳು. ಗೌರಿ ಹತ್ಯೆಯ ನಂತರದಲ್ಲಿ ದೇಶ ವಿದೇಶ ಮತ್ತು ವಿಶೇಷವಾಗಿ ನಾಡಿನಲ್ಲಿ ವ್ಯಕ್ತವಾದ ಪ್ರತಿಭಟನೆಗಳುˌ “ನಾನು ಗೌರಿ” ಘೋಷವಾಕ್ಯದಡಿಯಲ್ಲಿ ಬೆಂಗಳೂರಿನಲ್ಲಿ ಸಮಾವೇಷಗೊಂಡ ಪ್ರತಿಭಟನಾ ಸಭೆಗೆ ಹರಿದುಬಂದ ಜನಸಾಗರವನ್ನು ನೋಡಿ ಈ ಧರ್ಮಾಂಧರು ಮತ್ತು ಅವರ ಆಪ್ತ ಮಾಧ್ಯಮ ಬಳಗ ಒಳಗೊಳಗೆ ಕನಲಿ ಹೋಗಿದ್ದವು. ಗೌರಿಯನ್ನು ದ್ವೇಷಿಸುತ್ತಿದ್ದ ಜಾತಿವಾದಿ ಮಾಧ್ಯಮಗಳು ಈ ಪ್ರತಿಭಟನೆಯ ವರದಿಯನ್ನು ತೋರಿಸಲು ಮರಮರ ಮರುಗಿದವು. ಬೆಂಗಳೂರು ಮೂಲದ ಸಜ್ಜನನೆಂದು ಬಿಂಬಿಸಲ್ಪಟ್ಟ ಒಬ್ಬ ಜಾತಿವಾದಿ ರಾಜಕಾರಣಿ ತನ್ನ ಫೇಸ್ಬುಕ್ ಗೋಡೆಯಲ್ಲಿ ಗೌರಿ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಭಿಕಳೊಬ್ಬಳು ತಲೆಕೆಳಗಾಗಿ ಹಿಡಿದಿದ್ದ ಫಲಕವನ್ನು ಪೋಸ್ಟ್ ಮಾಡಿ ವಿಕೃತ ಆನಂದ ಪಟ್ಟಿದ್ದ.
ಇನ್ನೊಂದೆರಡು ಪೀತ ಪತ್ರಿಕೆ/ಹಾಗು ದೃಶ್ಯ ಮಾಧ್ಯಮಗಳು ಈ ಪ್ರತಿಭಟನಾ ಸಮಾವೇಷ ವಿಫಲವಾವಿತೆಂದು ತೋರಿಸಲು ಪ್ರಯತ್ನಿಸಿದವು. ಕೊಲೆಯ ತನಿಖೆಗೆ ನೇಮಿಸಲಾಗಿದ್ದ ದಕ್ಷ ಎಸ್ ಐ ಟಿ ತಂಡವು ನಮ್ಮಲ್ಲಿನ ಜಾತಿವಾದಿ ಮಾಧ್ಯಮಗಳ ಪೂರ್ವನಿಯೋಜಿತ ದಿಕ್ಕು ತಪ್ಪಿಸುವ ಹುನ್ನಾರದಿಂದ ಕೂಡಿದ ‘ನಕ್ಸಲ್ ಕೈವಾಡ’ ಮುಂತಾದ ಸುದ್ಧಿಗಳನ್ನು ಸುಳ್ಳೆಂದು ಸಾಬೀತುಪಡಿಸಿದವು. ಗೌರಿ ಕೊಲೆಯ ಹಿಂದೆ ಈ ಜಾತಿವಾದಿ ಮಾಧ್ಯಮಗಳ ಮುಖ್ಯಸ್ಥರ ಪ್ರೀತಿಯ ಸನಾತನಿ ಸಂಘಟನೆಯ ಕೈವಾಡವಿರುವುದು ಬಹಿರಂಗಗೊಂಡಿತು. ಗೌರಿ ಲಂಕೇಶ್ ಬದುಕಿದ್ದಾಗಲೂ ಮತ್ತು ಸಾವಿನ ನಂತರವೂ ಯಾರಿಗೂ ತಲೆಬಾಗದೆˌ ಯಾರ ಚಮಚಾಗಿರಿಯೂ ಮಾಡದೆ ಗೌರವದ ವಿದಾಯ ತನ್ನದಾಗಿಸಿಕೊಂಡುˌ ಅಸಂಖ್ಯಾತ ಜಾತ್ಯಾತೀತ ಮನಸ್ಸುಗಳಲ್ಲಿ ಪ್ರೀತಿಯ ಸ್ಥಾನ ಪಡೆದರೆ ಈ ಜಾತಿವಾದಿˌ ಕೋಮುವಾದಿˌ ಚಮಚಾಗಿರಿ ಪತ್ರಕರ್ತರು ಇಂದಿಗೂ ಭಂಡ ಬಾಳು ಬಾಳುತ್ತಿದ್ದಾರೆ. ಗೌರಿಯಂತೆ ಸ್ವಾಭಿಮಾನಿ ಪತ್ರಕರ್ತರಾಗದೆ ಆಳುವ ಪಕ್ಷದ ಹಾಗು ಕೋಮುವಾದಿ ಸಿದ್ಧಾಂತದ ಸಾಕು ನಾಯಿಗಳಂತೆ ವರ್ತಿಸುತ್ತಿದ್ದಾರೆ.