ಮೂರು ದಿನಗಳ ಹಿಂದಷ್ಟೇ ಗೃಹ ಬಳಕೆ ಎಲ್ಪಿಜಿ ದರವನ್ನು ಪ್ರತಿ ಸಿಲಿಂಡರ್ಗೆ 200 ರೂಪಾಯಿಯಷ್ಟು ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿಯೂ ಕಡಿತಮಾಡಿದೆ ಎಂದು ಶುಕ್ರವಾರ (ಸೆಪ್ಟೆಂಬರ್ 1) ವರದಿ ಮಾಡಿದೆ.
19 ಕೆಜಿ ತೂಕದ ವಾಣಿಜ್ಯ ಬಳಕೆಯ ಪ್ರತಿ ಎಲ್ಪಿಜಿ ಸಿಲಿಂಡರ್ ದರ 158 ರೂ.ಗಳಷ್ಟು ಇಳಿಕೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ಮೂಲಕ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಹೊಸ ದರ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.
ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷ ಮಾರ್ಚ್ 1 ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 350.50 ರೂ. ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 50 ರೂ. ಹೆಚ್ಚಿಸಿದ್ದವು. ಜುಲೈನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಮತ್ತೆ 7 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಆಗಸ್ಟ್ನಲ್ಲಿ 99.75 ರೂಪಾಯಿಯಷ್ಟು ಕಡಿತಗೊಳಿಸಲಾಗಿತ್ತು.
ರಕ್ಷಾಬಂಧನದ ಮುನ್ನಾ ದಿನ (ಆಗಸ್ಟ್ 29) 14 ಕೆಜೆ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೇ ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯುವ ಫಲಾನುಭವಿಗಳಿಗೆ ಮತ್ತೆ 200 ರೂಪಾಯಿ ಸಬ್ಸಿಡಿ ಘೋಷಿಸಿತ್ತು. ಈಗಾಗಲೆ ಉಜ್ವಲ ಯೋಜನೆ ಫಲಾನುಭವಿಗಳು 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದು, ಇದೀಗ 400 ರೂಪಾಯಿಗೆ ಹೆಚ್ಚಳವಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾ ಕಂಗಾಲಾಗಿದ್ದ ಜನರಿಗೆ ಸಿಲಿಂಡರ್ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ. ಈ ವರ್ಷ ಭಾರತದ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆ ಇಳಿಕೆ ತಂತ್ರ ಅನುಸರಿಸಿದೆ ಎಂಬ ಚರ್ಚೆಮುನ್ನೆಲೆಗೆ ಬಂದಿದೆ.