• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ-ಭಾಗ 3

ಪ್ರತಿಧ್ವನಿ by ಪ್ರತಿಧ್ವನಿ
September 1, 2023
in ಅಂಕಣ, ಅಭಿಮತ
0
ಭಾಗ-೧:  ದೇಶವನ್ನು ಖಾಸಗೀಕರಣಗೊಳಿಸುತ್ತಿರುವ ಅರ್ಬನ್ ಮತ್ತು ಅಗ್ರಹಾರ ನಾಜಿಗಳು
Share on WhatsAppShare on FacebookShare on Telegram

ಚಂದ್ರಯಾನದ ಸಂಭ್ರಮದಲ್ಲಿ ಆರಂಭದ ಹೆಜ್ಜೆ ಮೂಡಿಸಿದವರು ವಿಸ್ಮೃತಿಗೆ ಜಾರಕೂಡದು

ADVERTISEMENT

( ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ ಲೇಖನಗಳ ಮುಂದುವರೆದ ಭಾಗ)

–ನಾ ದಿವಾಕರ

2019ರ ಸೆಪ್ಟಂಬರ್‌ 6, ಭಾರತದ ವಿಜ್ಞಾನಿಗಳಿಗೆ ಒಂದು ಮಹಾನ್‌ ಸಾಧನೆಯ ದಿನ ಆಗುತ್ತದೆ ಎಂಬ ಮಹತ್ವಾಕಾಂಕ್ಷೆ ಗರಿಗೆದರಿತ್ತು.
ಬಾಹ್ಯಾಕಾಶದ ನಡಿಗೆಯಲ್ಲಿ ಅಪ್ರತಿಮ ಸಾಧನೆಗೈದಿದ್ದ ಭಾರತ ಚಂದ್ರನ ಮೇಲೆ ಕಾಲಿಸಿರುವ ಕನಸನ್ನು ಸಾಕಾರಗೊಳಿಸುವ ವಿಜ್ಞಾನಿಗಳ ನಿರೀಕ್ಷೆಗೆ
ಅಂದು ಅಗ್ನಿಪರೀಕ್ಷೆಯ ಗಳಿಗೆಯಾಗಿತ್ತು. ಅಂದು ಚಂದ್ರನ ಅಂಗಳದ ಮೇಲೆ ಕಾಲಿಸಿರಲು ನಿಯೋಜಿಸಿದ್ದ ವಿಕ್ರಂ ಲ್ಯಾಂಡರ್‌ ತನ್ನ ಅಂತಿಮ ಗುರಿ
ತಲುಪಲು 2.1 ಕಿಲೋಮೀಟರ್‌ ದೂರವಷ್ಟೇ ಬಾಕಿ ಉಳಿದಿತ್ತು. ಆದರೆ ಅಂದು ಇಸ್ರೋ ಕಂಡ ಕನಸು ನನಸಾಗಲಿಲ್ಲ. ಲ್ಯಾಂಡರ್‌ ವಿಕ್ರಂ
ಚಂದ್ರನ ಮೇಲೆ ಇಳಿಯುವ ಹಂತದಲ್ಲೇ ತನ್ನ ಸಂಪರ್ಕವನ್ನು ಕಳೆದುಕೊಂಡಿತ್ತು. ಬೂಸ್ಟರ್‌ಗಳು ಹಾಗೂ ಸಂವೇದಕಗಳಲ್ಲಿ ಸಮಸ್ಯೆ
ಉಂಟಾದ ಕಾರಣ ಲ್ಯಾಂಡರ್‌ ವಿಕ್ರಂ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸುವ ಮೂಲಕ ಭಾರತದ ವಿಜ್ಞಾನಿಗಳನ್ನು, ಇಸ್ರೋ ಸಂಸ್ಥೆಯನ್ನು
ನಿರಾಸೆಗೊಳಿಸಿತ್ತು.

ಚಂದ್ರಯಾನ 3
ಚಂದ್ರಯಾನ 3


ಆದರೆ 50 ವರ್ಷಗಳ ಸುದೀರ್ಘ ಇತಿಹಾಸ ಇರುವ ಇಸ್ರೋ ಈ ವೈಫಲ್ಯದಿಂದ ಎದೆಗುಂದಲಿಲ್ಲ. ಮರಳಿ ಯತ್ನವ ಮಾಡು ಎಂಬ
ನಾಣ್ಣುಡಿಗೆ ಅನುಗುಣವಾಗಿ ಇಸ್ರೋ ಚಂದ್ರಯಾನ-2ರಲ್ಲಿ ಆದ ತಪ್ಪುಗಳು ತಮ್ಮ ಮುಂದಿನ ಹೆಜ್ಜೆ, ಚಂದ್ರಯಾನ-3 ರಲ್ಲಿ ಆಗುವುದಿಲ್ಲ
ಎಂಬ ವಾಗ್ದಾನವನ್ನು ನೀಡಿತ್ತು. ಆ ವಾಗ್ದಾನವನ್ನು ಇಸ್ರೋ 2023ರ ಆಗಸ್ಟ್‌ 23 ರಂದು ಈಡೇರಿಸಿದೆ. ಜುಲೈ 23ರಂದು ಮಧ್ಯಾಹ್ನ
2.30ಕ್ಕೆ ರಾಕೆಟ್‌ ಉಡಾವಣೆಯಾದ ಗಳಿಗೆಯಿಂದ ಅಂತಿಮ ಕ್ಷಣದವರೆಗೂ ಕಾತರದಿಂದಿದ್ದ ವಿಜ್ಞಾನಿಗಳಲ್ಲಿ ಚಂದ್ರಯಾನದ ಯಶಸ್ಸಿನ ಬಗ್ಗೆ
ಯಾವುದೇ ಅನುಮಾನಗಳು ಇರಲಿಲ್ಲ. “ ಈ ಬಾರಿ ಕಪ್‌ ನಮ್ದೇ ” ಎನ್ನುವ ಉತ್ಸಾಹದ ಚಿಲುಮೆ ಇಸ್ರೋ ಸಂಸ್ಥೆಯ ಪ್ರತಿಯೊಬ್ಬ
ವಿಜ್ಞಾನಿಯಲ್ಲೂ ಜಾಗೃತವಾಗಿತ್ತು. ಅದರಂತೆಯೇ ಭಾರತ ಚಂದ್ರನ ಮೇಲೆ ದಕ್ಷಿಣ ಧೃವದಲ್ಲಿ ಕಾಲಿಸಿರಿದ ಪ್ರಪ್ರಥಮ ರಾಷ್ಟ್ರವಾಗಿ ದಾಖಲೆ
ನಿರ್ಮಿಸಿದೆ


ಈಗ ಶಿವಶಕ್ತಿ ಎಂದು ನಾಮಕರಣಗೊಂಡಿರುವ ವಿಕ್ರಂ ಲ್ಯಾಂಡರ್‌ ಸ್ಪರ್ಶಿಸಿದ ಆ ನಿರ್ದಿಷ್ಟ ಸ್ಥಳದಲ್ಲಿ ನಾವು ಅತೀತ ಶಿವನ ಅಮೂರ್ತ
ಶಕ್ತಿಗಿಂತಲೂ ಹೆಚ್ಚಾಗಿ ಭಾರತದ ಬಾಹ್ಯಾಕಾಶ ನಡಿಗೆಯನ್ನು ಸಾರ್ಥಕಗೊಳಿಸಿದ ಮೂರ್ತ ಸ್ವರೂಪದ ವಿಜ್ಞಾನಿಗಳ ಚೈತನ್ಯ ಮತ್ತು ವಿಜ್ಞಾನದ
ಶಕ್ತಿಯನ್ನು ಹೆಮ್ಮೆಯಿಂದ ನೆನೆಯಬೇಕಿದೆ. ಭಾರತದ ಬಾಹ್ಯಾಕಾಶ ನಡಿಗೆ ಆರಂಭವಾದದ್ದು ಶೀತಲ ಯುದ್ಧದ ಸಂದರ್ಭದಲ್ಲಿ. ಜಾಗತಿಕವಾಗಿ
ಸೋವಿಯತ್‌ ರಷ್ಯಾ ಮತ್ತು ಅಮೆರಿಕ ತಮ್ಮದೇ ಆದ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳೊಂದಿಗೆ ಬಾಹ್ಯಾಕಾಶದಲ್ಲೂ, ಅನ್ಯ ಗ್ರಹಗಳಲ್ಲೂ
ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಹವಣಿಕೆಯಲ್ಲಿದ್ದಾಗ ಭಾರತ ತನ್ನ ಪುಟ್ಟ ಹೆಜ್ಜೆಯನ್ನಿರಿಸಲು ನಿರ್ಧರಿಸಿತ್ತು. ಈ ಸಿಕ್ಕುಗಳ ನಡುವೆಯೇ
ಸ್ವತಂತ್ರ ಭಾರತದ ಪ್ರಾರಂಭಿಕ ದಿನಗಳಲ್ಲಿದ್ದ ದಾರ್ಶನಿಕ ನಾಯಕತ್ವ ಹಾಗೂ ಸಂವಿಧಾನದತ್ತ ವೈಜ್ಞಾನಿಕ ಧೋರಣೆ ಇಸ್ರೋದಂತಹ ಸಂಸ್ಥೆಗಳ
ಉಗಮಕ್ಕೆ ಕಾರಣವಾಗಿತ್ತು.


ಮೊದಲ ನಡಿಗೆಯ ಸಿಕ್ಕುಗಳು


ವಿಕ್ರಂ ಸಾರಾಭಾಯ್‌ ಮತ್ತು ಹೋಮಿ ಜೆ ಭಾಭಾ ಅವರ ಕನಸಿನ ಇಸ್ರೋ ಎಂಬ ಸಂಸ್ಥೆಯ ಪೂರ್ವಾಪರಗಳನ್ನು ಶೋಧಿಸುತ್ತಾ
ಹೋದಂತೆ ನಮಗೆ ಹಲವಾರು ಆಸಕ್ತಿದಾಯಕ ವಿಚಾರಗಳು ಎದುರಾಗುತ್ತವೆ. ಉಡಾವಣೆಗೆ ಸಿದ್ಧವಾಗಿರುವ ರಾಕೆಟ್‌ ಒಂದನ್ನು ಬಣ್ಣಿಸುವಾಗ
ನಮಗೆ ಆ ಅಪೂರ್ವ ಉಪಕರಣದ ಹಿಂದೆ ಅಡಗಿರುವ ನೂರಾರು ಶ್ರಮಿಕರ ಬೆವರಿನ ವಾಸನೆ ತಟ್ಟದೆ ಹೋದರೆ ಅದು ಆತ್ಮವಂಚನೆಯಾಗುತ್ತದೆ.
ಬಾಹ್ಯಾಕಾಶ ನೌಕೆಯಲ್ಲಿರುವ ಒಂದೊಂದು ಮೊಳೆಯೂ, ಒಂದೊಂದು ಪದರವೂ ಹಲವಾರು ಶ್ರಮಿಕರ ದಣಿವರಿಯದ ಪರಿಶ್ರಮದ ಆತ್ಯಂತಿಕ
ಫಲವೇ ಆಗಿರುತ್ತದೆ. ಸಾಂಸ್ಥಿಕವಾಗಿಯೂ ಇಸ್ರೋ ನಡೆದುಬಂದ ಹಾದಿಯನ್ನು ಗಮನಿಸುವಾಗ ನಮಗೆ ಈ ಸಂಸ್ಥೆಯ ಬೆನ್ನೆಲುಬಾಗಿ ನಿಂತ ಇತರ

ಸಂಸ್ಥೆಗಳೂ ಗೋಚರಿಸುವುದು ಸಹಜ. ಇಂತಹ ಸಂಸ್ಥೆಗಳ ಪೈಕಿ TERLS (Tumba Equatorial Rocket Launching
Station) ಒಂದು.


ಚಂದ್ರಯಾನದ ಯಶಸ್ಸಿನ ಸಂಭ್ರಮದ ನಡುವೆಯೇ ಐದು ದಶಕಗಳ ಹಿನ್ನೋಟದೊಂದಿಗೆ ಹೊರಳಿದಾಗ ನಮಗೆ ಈ TERLS
ಕೇಂದ್ರದ ಉಗಮ, ಬೆಳವಣಿಗೆ ಮತ್ತು ಸಾಧನೆಗಳ ಪರಿಚಯವೂ ಆಗುತ್ತದೆ. 1963ರ ನವಂಬರ್‌ 21ರಂದು ವಿಕ್ರಂ ಸಾರಾಭಾಯ್‌ ಅವರ
ಅಪೇಕ್ಷೆಯ ಮೇರೆಗೆ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಜನಕ ಇಸ್ರೋ ಸಂಸ್ಥೆಯಾಗಿತ್ತು. ಕೇರಳದ ತಿರುವನಂತಪುರಂ ಜಿಲ್ಲೆಯ ತುಂಬಾ ಎಂಬ
ಗ್ರಾಮದಲ್ಲಿ ಸ್ಥಾಪನೆಯಾದ ಈ ಉಡಾವಣಾ ಕೇಂದ್ರಕ್ಕೆ ನೂರಾರು ಎಕರೆ ಭೂಮಿಯ ಅವಶ್ಯಕತೆ ಎದುರಾಗಿತ್ತು. ಈ ಸಂದರ್ಭಲ್ಲಿ ಇಸ್ರೋ
ಸಂಸ್ಥೆಗೆ ನೆರವಾದದ್ದು ತಿರುವನಂತಪುರಂನ ಸ್ಥಳೀಯ ಬಿಷಪ್‌ ಆಗಿದ್ದ ರೆವರೆಂಡ್‌ ಪೀಟರ್‌ ಬರ್ನಾರ್ಡ್‌ ಪೆರೇರಾ ಮತ್ತು ಬೆಲ್ಜಿಯನ್‌
ಪ್ರಜೆಯಾಗಿದ್ದ ವಿನ್ಸೆಂಟ್‌ ವಿಕ್ಟರ್‌ ಡರೀರೆ.


ಡಾ ಅಬ್ದುಲ್‌ ಕಲಾಂ, ಅಂದಿನ ಜಿಲ್ಲಾಧಿಕಾರಿ ಲಕ್ಷ್ಮೀ ಮೆನನ್‌ ಹಾಗೂ ಜಿಲ್ಲಾಧಿಕಾರಿ ಮಾಧವನ್‌ ನಾಯರ್‌ ಒಂದಾಗಿ ಚರ್ಚ್‌ನ
ಧಾರ್ಮಿಕ ನಾಯಕರೊಡನೆ ನಡೆಸಿದ ಸಮಾಲೋಚನೆಗಳ ಫಲವಾಗಿ ಕರಾವಳಿಯಲ್ಲಿ ನೆಲೆಸಿದ್ದ ಕ್ರೈಸ್ತ ಸಮುದಾಯದಿಂದ ಚರ್ಚ್‌ಗೆ ಸೇರಿದ್ದ
600 ಎಕರೆ ಭೂಮಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿತ್ತು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಈ ಜಾಗವನ್ನು
ಪಡೆದುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಪೆರೇರಾ ಅವರು ತಮ್ಮ ಪ್ರಾರ್ಥನಾ ಪ್ರಾಂಗಣವನ್ನು ಹಾಗೂ
ಸ್ಥಳೀಯ ಚರ್ಚ್‌ ಒಂದರಲ್ಲಿ ಬಿಷಪ್‌ ಬಳಸುವ ಕೋಣೆಯನ್ನು ವೈಜ್ಞಾನಿಕ ಚಟುವಟಿಕೆಗಳಿಗಾಗಿ ಬಿಟ್ಟುಕೊಟ್ಟಿದ್ದರು. ಸಂತ ಫ್ರಾನ್ಸಿಸ್‌
ಕ್ಸೇವಿಯರ್‌ ಅವರಿಂದ ಸ್ಥಾಪಿಸಲಾಗಿದ್ದ ಚರ್ಚ್‌ ಇಂದು ವಿಕ್ರಂ ಸಾರಾಭಾಯ್‌ ಬಾಹ್ಯಾಕಾಶ ಕೆಂದ್ರದ ವಸ್ತುಸಂಗ್ರಹಾಲಯವಾಗಿದೆ.
ಸ್ಮರಣೀಯ ವಿಜ್ಞಾನಿ – ರಾವ್‌


TERLS ಸಂಸ್ಥೆಯ ನಡಿಗೆಯೂ ಸಹ ಹಲವು ಕೌತುಕಗಳಿಂದ ಕೂಡಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. 1972ರಲ್ಲಿ
ಬೆಂಗಳೂರಿನ ಹೊರವಲಯದಲ್ಲಿದ್ದ ಆರು ಕೈಗಾರಿಕಾ ಷೆಡ್‌ಗಳಲ್ಲಿ ಆರಂಭವಾದ ಭಾರತದ ಉಪಗ್ರಹದ ಪಯಣವೂ ಸಹ ಹಲವು
ತೊಡಕುಗಳನ್ನು ದಾಟಿಕೊಂಡೇ ಬಂದಿದೆ. 1966ರಲ್ಲಿ INCOSPAR ನಿರ್ದೇಶಕರಾಗಿದ್ದ ವಿಕ್ರಂ ಸಾರಾಭಾಯ್‌ ಅಹಮದಾಬಾದ್‌ನಲ್ಲಿದ್ದ
ಭಾರತೀಯ ಭೌತಿಕ ಸಂಶೋಧನಾ ಪ್ರಯೋಗಾಲದಲ್ಲಿ (PRL- Physical Research Laboratories)̤ ಬಾಹ್ಯಾಕಾಶ ಶೋಧಕಗಳು
ಹಾಗೂ ಎಕ್ಸ್‌ಪ್ಲೋರರ್‌ ಉಪಗ್ರಹಗಳ ಬಗ್ಗೆ ಅಧ್ಯಯನ-ಸಂಶೋಧನೆ ನಡೆಸುವ ಮೂಲಕ ಸೌರ ಕಾಸ್ಮಿಕ್‌ ಕಿರಣದ ವಿದ್ಯಮಾನಗಳ ಬಗ್ಗೆ
ಸಂಶೋಧನೆ ನಡೆಸುತ್ತಿದ್ದ ಯು.ಆರ್.‌ ರಾವ್‌ ಅವರನ್ನು ತಮ್ಮ ಉಪಗ್ರಹ ನಿರ್ಮಾಣದ ತಂಡದ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. 34
ವರ್ಷದ, ಕರ್ನಾಟಕದ ಉಡುಪಿ ಜಿಲ್ಲೆಯ ಯು. ರಾಮಚಂದ್ರರಾವ್‌ ಅವರಿಗೆ ಉಪಗ್ರಹ ನಿರ್ಮಾಣದ ತಂಡದ ನಾಯಕತ್ವ ವಹಿಸುವ
ಜವಾಬ್ದಾರಿಯನ್ನೂ ವಿಕ್ರಂ ಸಾರಾಭಾಯ್ ವಹಿಸಿದ್ದರು. ಈಗಲೂ ರಾಮಚಂದ್ರರಾವ್‌ ಅವರನ್ನು Indian Satellite Man ಎಂದೇ
ಗುರುತಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಇಸ್ರೋ ಉಪಗ್ರಹ ಕೇಂದ್ರವನ್ನು ಅವರ ಹೆಸರಿನಲ್ಲೇ ಗುರುತಿಸಲಾಗುತ್ತದೆ.
‌
ಆ ತಂಡದಲ್ಲಿ ಉಪಗ್ರಹವನ್ನು ಪ್ರತ್ಯಕ್ಷವಾಗಿ ನೋಡಿದ್ದ ಏಕೈಕ ವ್ಯಕ್ತಿ ಯು.ಆರ್.‌ ರಾವ್‌ ಅವರಾಗಿದ್ದರು. ಇದೇ ಸಂದರ್ಭದಲ್ಲಿ
ಉಪಗ್ರಹ ಇಂಜಿನಿಯರಿಂಗ್‌ ತಂಡವನ್ನು ತಿರುವನಂತಪುರಂ ಬಳಿ ಇರುವ TERLS ಮತ್ತು ಅಹಮದಾಬಾದ್‌ನಲ್ಲಿದ್ದ PRL ನಡುವೆ
ವಿಂಗಡಿಸಲಾಗಿತ್ತು. ಈ ನಡುವೆಯೇ 1969ರಲ್ಲಿ INCOSPAR ಸಂಸ್ಥೆಯನ್ನು ISRO ಎಂದು ನಾಮಕರಣ ಮಾಡಲಾಗಿತ್ತು. 1971ರಲ್ಲಿ
ವಿಕ್ರಂ ಸಾರಾಭಾಯ್‌ ಅವರ ಅಕಾಲಿಕ ಮರಣದ ನಂತರ ಸತೀಶ್‌ ಧವನ್‌ ಅವರನ್ನು ಇಸ್ರೋದ ಮುಂದಾಳತ್ವ ವಹಿಸಲು ನೇಮಿಸಲಾಗಿತ್ತು.
ಆದರೆ ಅದೇ ವೇಳೆಯಲ್ಲಿ ಬೆಂಗಳೂರಿನಲ್ಲಿದ್ದ ಭಾರತೀಯ ವಿಜ್ಞಾನ ಸಂಸ್ಥೆ (IISC) ನಿರ್ದೇಶಕ ಹುದ್ದೆಯನ್ನು ಬಿಟ್ಟುಕೊಡಲು ಸಿದ್ಧರಿಲ್ಲದ
ಸತೀಶ್‌ ಧವನ್‌ ಇಸ್ರೋ ಸಂಸ್ಥೆಯ ಕಾರ್ಯಾಚರಣೆಗಳನ್ನು ತುಂಬಾದ TERLS ಕೇಂದ್ರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಮಾತುಕತೆ
ನಡೆಸಿ ಯಶಸ್ವಿಯಾಗಿದ್ದರು. ಬೆಂಗಳೂರಿಗೆ ವರ್ಗಾವಣೆಯಾದ ಇಸ್ರೋ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯು.ಆರ್.‌ ರಾವ್‌
ಅವರಿಗೆ ನೀಡಲಾಯಿತು.


ಆದರೆ ಈ ವರ್ಗಾವಣೆಯ ಪ್ರಕ್ರಿಯೆ ಸುಲಭವಾಗಿರಲಿಲ್ಲ. TERLS ನಲ್ಲಿದ್ದ ಕಾರ್ಮಿಕ ಸಂಘಟನೆಗಳು ಉಪಕರಣಗಳ ಸ್ಥಳಾಂತರಕ್ಕೆ
ಅನುಮತಿ ನೀಡಲು ನಿರಾಕರಿಸಿದವು. ಬೆಂಗಳೂರಿನಲ್ಲೇ ಇಸ್ರೋ ಸಂಸ್ಥೆಯ ಸ್ಥಾಪನೆಗೆ ಸೂಕ್ತ ಜಾಗವನ್ ಹುಡುಕಬೇಕಾಗಿತ್ತು. ಆರಂಭದಲ್ಲಿ
IISC ಯ ಜಿಮ್‌ಖಾನಾ ಮೈದಾನವನ್ನು ಆಯ್ಕೆ ಮಾಡಲಾಗಿತ್ತು. ನಂತರದಲ್ಲಿ ಕರ್ನಾಟಕ ಸರ್ಕಾರವು ರಾವ್‌ ಅವರೊಂದಿಗೆ ಸಮಾಲೋಚನೆ
ನಡೆಸಿ ಬೆಂಗಳೂರಿನ ಹೊರವಲಯದಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿದ್ದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಶೆಡ್ಡುಗಳನ್ನು ನೀಡಲು
ಮುಂದಾಗಿತ್ತು. ಈ ಶೆಡ್‌ಗಳ ನಡುವೆಯೇ ಥರ್ಮೋಕೋಲ್‌, Vinyl ಮತ್ತು Duct Tape ಗಳನ್ನೊಳಗೊಂಡಿದ್ದ, Asbestos
ಛಾವಣಿಯನ್ನು ಹೊಂದಿದ್ದ ಒಂದು ಶೆಡ್ಡನ್ನು ಉಪಗ್ರಹ ಚಟುವಟಿಕೆಗೆ ಸೂಕ್ತವಾದ ಸ್ವಚ್ಚ ಕೋಣೆಯಾಗಿ ಮಾರ್ಪಡಿಸುವಲ್ಲಿ ಯು.ಆರ್.‌
ರಾವ್‌ ಯಶಸ್ವಿಯಾಗಿದ್ದರು.

ಸತತ ಪರಿಶ್ರಮ ಫಲಗೂಡಿದಾಗ
ಈ ಅರೆಬರೆ ಅನುಕೂಲಗಳನ್ನು ಹೊಂದಿದ್ದ ಶೆಡ್‌ಗಳಲ್ಲಿ ಯು.ಆರ್.‌ ರಾವ್‌ ನೇತೃತ್ವದ ತಂಡ 1972 ರಿಂದ 1975ರವರೆಗೆ ತಮ್ಮ
ಬಾಹ್ಯಾಕಾಶ ವಿಜ್ಞಾನದ ಚಟುವಟಿಕೆಗಳನ್ನು ಮುಂದುವರಿಸಿದ್ದವು. ಈ ತಂಡದಲ್ಲಿ ಸರಾಸರಿ 26 ವಯಸ್ಸಿನ ಅನನುಭವಿ ಇಂಜಿನಿಯರ್‌ಗಳೂ,
ವಿಜ್ಞಾನಿಗಳೂ ಹಾಗೂ ಇತರ ಸಿಬ್ಬಂದಿಯೂ ಅತ್ಯಂತ ಉತ್ಸಾಹದೊಂದಿಗೆ ಕಾರ್ಯೋನ್ಮುಖವಾಗಿದ್ದವು. ವಿಶ್ವದ ಇತರ ಯಾವುದೇ ದೇಶಗಳು

ಸಾಧಿಸದ ಒಂದು ದಾಖಲೆ ಈ ಶೆಡ್‌ಗಳಲ್ಲಿ ನಿರ್ಮಾಣವಾಗಿತ್ತು. ಕೇವಲ ಮೂರು ವರ್ಷಗಳ ಅವಿರತ ಪರಿಶ್ರಮದ ಮೂಲಕ ಯು.ಆರ್.‌ ರಾವ್‌
ನೇತೃತ್ವದ ತಂಡ ಆರ್ಯಭಟ ಉಪಗ್ರಹವನ್ನು ತಯಾರಿಸಿತ್ತು. ಈ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯನ್ನು ಎತ್ತಿನ ಗಾಡಿಯಲ್ಲಿ ಸಾಗಿಸುವ
ಚಿತ್ರವನ್ನು ಅಮೆರಿಕದ ಹಲವು ಪತ್ರಿಕೆಗಳು ವ್ಯಂಗ್ಯಚಿತ್ರಗಳ ಮೂಲಕ ಅಪಹಾಸ್ಯ ಮಾಡಿದ್ದುದೂ ಉಂಟು. ತನ್ಮೂಲಕ ಭಾರತದಂತಹ
ಬಡದೇಶದ ಬಾಹ್ಯಾಕಾಶ ಯೋಜನೆಗಳನ್ನೇ ಪ್ರಶ್ನಿಸಲಾಗಿತ್ತು. ಆದರೆ ವರ್ಷಗಳ ನಂತರ ಉಪಗ್ರಹದ ವಿದ್ಯುತ್ಕಾಂತೀಯ ಸಾಮರ್ಥ್ಯವನ್ನು
(Electromagetic Capability) ಮತ್ತು ತೆರೆದ ವಾತಾವರಣದ ಪ್ರದೇಶದಲ್ಲಿ ಅದರ ಇರುವಿಕೆಯನ್ನು ಪರೀಕ್ಷಿಸಬೇಕಾಗಿತ್ತು.


ಬಾಹ್ಯಾಕಾಶ ನೌಕೆಯನ್ನು ತೆರೆದ ಪ್ರದೇಶಕ್ಕೆ ಸಾಗಿಸುವ ಸಂದರ್ಭದಲ್ಲಿ ಲೋಹದ ಟ್ರಕ್‌ಗಳು ಉಪಗ್ರಹದ ಆಂಟೆನಾಗಳಿಗೆ ಅಡ್ಡಿಪಡಿಸುವಂತಹ
ಪ್ರತಿಫಲನಗಳನ್ನು ಹೊರಸೂಸತೊಡಗಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲು ಕೆಲವರು ಎತ್ತಿನ ಗಾಡಿಯಲ್ಲಿ ಉಪಗ್ರಹವನ್ನು ಸಾಗಿಸುವ
ಸಲಹೆಯನ್ನು ನೀಡಿದ್ದರು. ಹಾಗೆಯೇ ಸಾಗಿಸಲಾಗಿತ್ತು. ಈ ರೀತಿಯಲ್ಲಿ ಯು.ಆರ್.‌ ರಾವ್‌ ಅಮೆರಿಕದ ವ್ಯಂಗ್ಯೋಕ್ತಿಗಳಿಗೆ ತಕ್ಕ ಉತ್ತರ
ನೀಡಿದ್ದರು.


ಅಂದಿನಿಂದ 2017ರಲ್ಲಿ ತಮ್ಮ 85ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವವರೆಗೆ ಯು.ಆರ್.‌ ರಾವ್‌ 18 ಉಪಗ್ರಹಗಳ
ವಿನ್ಯಾಸದಲ್ಲಿ ಮೇಲ್ವಿಚಾರಣೆ ವಹಿಸಿದ್ದರು. ಯು.ಆರ್.‌ ರಾವ್‌ ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿದ್ದ ಹತ್ತು ವರ್ಷಗಳಲ್ಲಿ ASLV ಮತ್ತು
PSLV ಗಳಂತಹ ಉಪಗ್ರಹ ಉಡಾವಣಾ ವಾಹನಗಳ ನಿರ್ಮಾಣವನ್ನು ತ್ವರಿತಗೊಳಿಸಿದ್ದರು. ಅಂತರ ರಾಷ್ಟ್ರೀಯ ಗಗನಯಾತ್ರಿ ಒಕ್ಕೂಟ
(International Astronautical Federation) ಗೌರವಪೂರ್ವಕವಾಗಿ ನೀಡುವ ಹಾಲ್‌ ಆಫ್‌ ಫೇಮ್‌ ಮನ್ನಣೆಗೆ ಪಾತ್ರದಾದ
ಪ್ರಪ್ರಥಮ ಭಾರತೀಯ ವಿಜ್ಞಾನಿಯಾಗಿ ಯು.ಆರ್.‌ ರಾವ್‌ ಮಾನ್ಯತೆ ಪಡೆದಿದ್ದರು. ಭಾರತದ ಬಾಹ್ಯಾಕಾಶ ನಡಿಗೆಗೆ ರೆಕ್ಕೆಗಳನ್ನು ಕಟ್ಟುವ
ಮೂಲಕ ದೇಶದ ವೈಜ್ಞಾನಿಕ ಮುನ್ನಡೆ ಹಾಗೂ ವಿಜ್ಞಾನ ಕ್ಷೇತ್ರದ ಕನಸುಗಳನ್ನು ಸಾಕಾರಗೊಳಿಸಲು ತಮ್ಮ ಅಂತಿಮ ಕ್ಷಣದವರೆಗೂ ಶ್ರಮಿಸಿದ
ಯು.ಆರ್.‌ ರಾವ್‌ 2017ರಲ್ಲಿ ಕೊನೆಯುಸಿರೆಳೆದರೂ ಅವರ ಹೆಸರಿನಲ್ಲೇ ಇರುವ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರ ಚಂದ್ರಯಾನದ
ಎಲ್ಲ ಉಪಗ್ರಹಗಳನ್ನೂ ನಿರ್ಮಾಣ ಮಾಡಿದ ಕೀರ್ತಿಯನ್ನು ಗಳಿಸಿದೆ.


ಚಂದ್ರಯಾನದ ಸಂದರ್ಭದಲ್ಲಿ ನಾಲ್ಕು ಗೋಡೆಗಳ ನಡುವೆಯೇ ತಮ್ಮ ಸಂಭ್ರಮಾಚರಣೆಯನ್ನು ಪೂರೈಸಿಕೊಂಡ ವಿಜ್ಞಾನಿಗಳ ತಂಡ
ಮತ್ತು ಈ ಅಪೂರ್ವ ಸಾಧನೆಯ ಹಿಂದೆ ಅಹರ್ನಿಶಿ ದುಡಿದಿರುವ ಅನೇಕಾನೇಕ ವಿಜ್ಞಾನಿಗಳು, ಇಂಜಿನಿಯರುಗಳು, ತಂತ್ರಜ್ಞರು, ಅಧಿಕಾರಿಗಳು
ಹಾಗೂ ತಳಮಟ್ಟದವರೆಗೂ ಉಪಗ್ರಹಗಳ ನಿರ್ಮಾಣದಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವ ಸಾವಿರಾರು ಕಾರ್ಮಿಕರು ಇಂದು
ಕರ್ನಾಟಕದ ವೈಜ್ಞಾನಿಕ ಕಣ್ಮಣಿ ಉಡುಪಿಯ ಯು. ರಾಮಚಂದ್ರರಾವ್‌ ಅವರನ್ನು ಹೆಮ್ಮೆಯಿಂದ ಸ್ಮರಿಸಲೇಬೇಕಿದೆ. ಇಂತಹ ಒಬ್ಬ ವಿದ್ವತ್‌
ಪೂರ್ಣ ವಿಜ್ಞಾನಿಯನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿದ ವಿಕ್ರಂ ಸಾರಾಭಾಯ್‌, ಅವರ ಬೆನ್ನುತಟ್ಟಿದ ಸತೀಶ್‌
ಧಾವನ್‌ ಮತ್ತು ಪ್ರೋತ್ಸಾಹಿಸಿದ ಇಂದಿರಾಗಾಂಧಿ ಸರ್ಕಾರದ ಕೊಡುಗೆಯನ್ನೂ ಇಂದು ಹೆಮ್ಮೆಯಿಂದ ನೆನೆಯಬೇಕಿದೆ.

ಸಂಭ್ರಮಾಚರಣೆಯ
ಸಂದರ್ಭದಲ್ಲಿ ಪೂರ್ವಸೂರಿಗಳನ್ನು ಮರೆತು ಮೆರೆಯುವುದು (ಇವತ್ತಿನ ಸಂದರ್ಭದಲ್ಲಿ ಅಲ್ಲಗಳೆಯುವುದು) ಕಂಡುಬಂದರೂ, ಚಂದ್ರಯಾನದ
ಅಭೂತಪೂರ್ವ ಯಶಸ್ಸಿನ ಸಂದರ್ಭದಲ್ಲಾದರೂ ಕನ್ನಡಿಗರಾದ ನಾವು ನಮ್ಮವರೇ ಆದ ಯು.ಆರ್.‌ ರಾವ್‌ ಅವರನ್ನು ಹೆಮ್ಮೆಯಿಂದ
ನೆನೆಯೋಣ. ನೆನೆಯುತ್ತಲೇ ಇಸ್ರೋ ನಡೆದುಬಂದ ಹಾದಿಯತ್ತ ಗಮನಹರಿಸೋಣ.
( ಇಸ್ರೋ – ಸವಾಲುಗಳ ನಡುವೆ ಬೆಳೆದ ಸಾರ್ವಜನಿಕ ಸಂಸ್ಥೆ – ಮುಂದಿನ ಭಾಗದಲ್ಲಿ)

Tags: BJPIndian Space Research OrganisationISRONASA
Previous Post

ಅಂಕಣ | ಮನುವಾದದ ವಿಸ್ತಾರ ಮತ್ತು ವಿಕಾಸ: ಮೋದಿ ಸರಕಾರದ ಮುಖ್ಯ ಗುರಿ

Next Post

ಬೆಂಗಳೂರು | ಒಂದೇ ರಾತ್ರಿ 64.8ಮಿಮೀ ದಾಖಲೆಯ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಬೆಂಗಳೂರು

ಬೆಂಗಳೂರು | ಒಂದೇ ರಾತ್ರಿ 64.8ಮಿಮೀ ದಾಖಲೆಯ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada