2018 ರಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥೆ ತಮಿಳಿಸೈ ಸೌಂದರರಾಜನ್ ಅವರಿದ್ದ ವಿಮಾನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಮಹಿಳೆಯ ವಿರುದ್ಧದ ದಾಖಲಾಗಿದ್ದ ಎಫ್‌ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ತಮಿಳಿಸೈ ಸಂಚರಿಸುತ್ತಿದ್ದ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು “ಫ್ಯಾಸಿಸ್ಟ್ ಬಿಜೆಪಿ, ಡೌನ್ ಡೌನ್” ಎಂಬ ಘೋಷಣೆಗಳನ್ನು ಕೂಗಿದ್ದರು. ಈ ರೀತಿಯ ಘೋಷಣೆಯನ್ನು ಕೂಗುವುದು ಅಪರಾಧವಲ್ಲ ಎಂದು ಹೇಳಿದ ಹೈಕೋರ್ಟ್, ಅದನ್ನು ʼಕ್ಷುಲ್ಲಕ ವಿಷಯʼ ಪರಿಗಣಿಸಿದೆ.
ಸಂಶೋಧನಾ ವಿದ್ಯಾರ್ಥಿನಿ ಲೋಯಿಸ್ ಸೋಫಿಯಾ ಅವರು ತೂತುಕುಡಿ ಈಗಿನ ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಸೌಂದರರಾಜನ್ ಅವರಿದ್ದ ವಿಮಾನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ್ದರು. ಘಟನೆಯ ನಂತರ ಸೋಫಿಯಾ ಅವರನ್ನು ಬಂಧಿಸಲಾಗಿದ್ದು, ಮರುದಿನ ಅವರಿಗೆ ಜಾಮೀನು ನೀಡಲಾಯಿತು.
ತೂತುಕುಡಿ ಪೊಲೀಸರು ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್ ಅನ್ನು ರದ್ಧು ಪಡಿಸುವಂತೆ 2019 ರಲ್ಲಿ ಸೋಫಿಯಾ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ಸೋಫಿಯಾ ವಿರುದ್ಧ ಮದ್ರಾಸ್ ಸಿಟಿ ಪೊಲೀಸ್ ಕಾಯಿದೆಯ ಸೆಕ್ಷನ್ 290 ಮತ್ತು 75 (1) (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಧುರೈ ಪೀಠದ ನ್ಯಾಯಮೂರ್ತಿ ಪಿ ಧನಬಾಲ್ ಅವರು, ಸೋಫಿಯಾ ಅವರ ನಡೆಯಲ್ಲಿ ಸಾರ್ವಜನಿಕ ಉಪದ್ರವವನ್ನು ಪ್ರಚೋದಿಸುವ ಯಾವುದೂ ಇಲ್ಲ ಎಂದು ಹೇಳಿದ್ದಾರೆ.
“ಪ್ರಥಮ ಮಾಹಿತಿ ವರದಿ ಮತ್ತು ಚಾರ್ಜ್ ಶೀಟ್ ನಲ್ಲಿ ಅರ್ಜಿದಾರರು ಕೇವಲ ‘ಫ್ಯಾಸಿಸ್ಟ್ ಬಿಜೆಪಿ’ ಎಂದು ಘೋಷಣೆಯನ್ನು ಎತ್ತಿದ್ದಾರೆ ಮತ್ತು ಆ ಪದಗಳು ಯಾವುದೇ ಅಪರಾಧವನ್ನು ಒಳಗೊಂಡಿಲ್ಲ ಮತ್ತು ಇದು ಕ್ಷುಲ್ಲಕ ಸ್ವಭಾವವನ್ನು ಬಹಿರಂಗಪಡಿಸುತ್ತದೆ ಆದ್ದರಿಂದ ತೂತುಕುಡಿ ಪೊಲೀಸರು ದಾಖಲಿಸಲಾದ ಪ್ರಕರಣವನ್ನು ರದ್ದುಗೊಳಿಸಲಾಗುವುದು” ಎಂದು ಹೈಕೋರ್ಟ್ ಆದೇಶಿಸಿದೆ.