ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಕುಟುಂಬದ ವಿರುದ್ಧ ದ್ವೇಷಪೂರಿತ ಮತ್ತು ಅವಹೇಳನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಾಬುಲಾಲ್ ಮರಂಡಿ ವಿರುದ್ಧ ಕಂಕೆ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ ಎಂದು ಶುಕ್ರವಾರ (ಆಗಸ್ಟ್ 25) ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿ ನಡೆಸುತ್ತಿರುವ ‘ಸಂಕಲ್ಪ ಯಾತ್ರೆ’ ಸಂದರ್ಭದಲ್ಲಿ ಸೊರೇನ್ ಕುಟುಂಬದ ವಿರುದ್ಧ ಹೇಳಿಕೆ ನೀಡಲಾಗಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತ ಸೋನು ಟರ್ಕೀ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಆಗಸ್ಟ್ 23ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 500 (ಮಾನಹಾನಿ), ಸೆಕ್ಷನ್ 505 (ಸಾರ್ವಜನಿಕವಾಗಿ ನಿಂದನೆ) ಮತ್ತು 504/2 (ಉದ್ದೇಶಪೂರ್ವಕ ಮೂದಲಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಪಕ್ಷದ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಾಗಿರುವುದಕ್ಕೆ ಬಿಜೆಪಿ ಕಿಡಿಕಾರಿದೆ. ಮರಂಡಿ ಅವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವ ನಾಲ್ಕನೇ ‘ಸರ್ಕಾರಿ ಪ್ರಾಯೋಜಿತ ಪ್ರಕರಣ’ ಇದು ಎಂದಿದೆ.
ಉಳಿದ ಮೂರು ಪ್ರಕರಣಗಳು ಸಿಂಮ್ಗಾ. ಲಾತೆಹರ್ ಮತ್ತು ದೇವಘರ್ನಲ್ಲಿ ದಾಖಲಾಗಿವೆ.
ಬಿಜೆಪಿಯ ‘ಸಂಕಲ್ಪ ಯಾತ್ರೆ’ಗೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಆಡಳಿತ ಪಕ್ಷವು ಕಂಗೆಟ್ಟಿದೆ ಎಂದು ಟೀಕಿಸಿದೆ.
ಮರಂಡಿ ಅವರು ರಾಜ್ಯವನ್ನು ಹಸಿವು, ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಗೊಳಿಸುವುದಕ್ಕಾಗಿ ಅಕ್ಟೋಬರ್ 10ರ ವರೆಗೆ ಸಂಕಲ್ಪ ಯಾತ್ರೆ ಮುಂದುವರಿಸಲಿದ್ದಾರೆ ಎಂದೂ ಹೇಳಿದೆ






