ಕಾಂಗ್ರೆಸ್ನಲ್ಲಿ ಮೂವರು ನಾಯಕರನ್ನು ಪರಿಷತ್ಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಾಯಕ ಎಂ.ಆರ್ ಸೀತಾರಾಂ ಹಾಗು ಸುಧಾಮ್ ದಾಸ್ ಎಂಬುವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವಂತೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಉಮಾಶ್ರೀ ಹಾಗು ಎಂ.ಆರ್ ಸೀತಾರಾಂ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ಸುಧಾಮ್ ದಾಸ್ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆಯ್ಕೆ ಎನ್ನುವ ಗುಸುಗುಸು ಕಾಂಗ್ರೆಸ್ನಲ್ಲೇ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಸುಧಾಮ್ ದಾಸ್ ಆಯ್ಕೆಯನ್ನು ವಿರೋಧಿಸಿ ನಾಲ್ವರು ಪ್ರಮುಖ ದಲಿತ ನಾಯಕರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ.

ಕಾಂಗ್ರೆಸ್ನಲ್ಲಿ ನಿಲ್ಲದ ಅಸಮಾಧಾನಿಗಳ ಪತ್ರ ಸಮರ..!
ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಕೆಲವು ದಿನಗಳ ಹಿಂದಷ್ಟೇ ಶಾಸಕರು ಬಿ.ಆರ್ ಪಾಟೀಲ್ ನೇತೃತ್ವದಲ್ಲಿ ಪತ್ರ ಬರೆದಿದ್ದರು. ಸಚಿವರು ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು. ಮೊದಲಿಗೆ ಪತ್ರ ಬರೆದಿದ್ದು ನಾವೇ, ಸಹಿ ಹಾಕಿದ್ದೇನೆ ಎಂದಿದ್ದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಆ ಬಳಿಕ ನಕಲಿ ಪತ್ರ ಎಂದು ತೇಪೆ ಸಾರಿಸಿಕೊಂಡಿದ್ದರು. ಇದೀಗ ನಾಲ್ವರು ಪ್ರಮುಖ ಸಚಿವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೇರವಾಗಿ ಅಸಮಾಧಾನದ ಪತ್ರ ಬರೆದಿದ್ದಾರೆ. ಮಾಧ್ಯಮಗಳ ಎದುರಲ್ಲೂ ಪತ್ರ ಬರೆದಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಸುಧಾಮ್ ದಾಸ್ ನೇಮಕಕ್ಕೆ ಭಾರೀ ವಿರೋಧ ಮಾಡಿದ್ದಾರೆ. ಕೇವಲ ಮೂರು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಬಂದವರಿಗೆ ಅಧಿಕಾರ ಕೊಟ್ಟಿದ್ದು ಹೇಗೆ..? ಎಂದು ಪ್ರಶ್ನೆ ಮಾಡಿದ್ದಾರೆ..

ಸುಧಾಮ್ ದಾಸ್ ಆಯ್ಕೆಗೆ ಸಚಿವರ ವಿರೋಧ ಯಾಕೆ..?
ವಿಧಾನ ಪರಿಷತ್ಗೆ ಸುಧಾಮ ದಾಸ್ ಆಯ್ಕೆ ಮಾಡಿದ್ದನ್ನ ವಿರೋಧಿಸಿ ನಾಲ್ವರು ದಲಿತ ಸಮುದಾಯದ ಸಚಿವರು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಹಿರಿಯ ರಾಜಕಾರಣಿಗಳು ಹಾಗೂ ಅವರ ಪಾರಿವಾರದವರಿಗೆ ಮಾತ್ರ ಮಣೆ ಹಾಕದೆ, ಇನ್ನಾದರೂ ಸಮರ್ಥ, ಸುಶಿಕ್ಷಿತ, ಪಕ್ಷನಿಷ್ಠ, ನ್ಯಾಯಪರತೆ ಇರುವ ಯುವ ರಾಜಕಾರಣಿಗಳಿಗೆ ಪಕ್ಷ ವಿಶೇಷ ಅವಕಾಶ ನೀಡಬೇಕು ಎಂದು ಆಗ್ರಹ ಮಾಡಿದ್ದರು. ಹೀಗೆಯೇ ಮುಂದುವರಿದರೆ ಪಕ್ಷ ಮುಂದೊಮ್ಮೆ ಯುವ ರಾಜಕಾರಣಿಗಳು ಇಲ್ಲದೆ ಸೊರಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದೀಗ ಸುಧಾಮ್ ದಾಸ್ ಆಯ್ಕೆ ವಿರೋಧಿಸಿ ಗೃಹಸಚಿವರಾದ ಡಾ.ಜಿ.ಪರಮೇಶ್ವರ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪತ್ರ ಬರೆದಿದ್ದಾರೆ. ಮೂರು ತಿಂಗಳ ಹಿಂದೆ ಪಕ್ಷ ಸೇರಿದವರನ್ನು ಆಯ್ಕೆ ಮಾಡದೆ 30 ವರ್ಷದಿಂದ ಪಕ್ಷದಲ್ಲಿ ದುಡಿಯುತ್ತಿರುವ ಜನರನ್ನು ಆಯ್ಕೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.
ಸುಧಾಮ್ದಾಸ್ ಯಾರು ಡಿ.ಕೆ ಬ್ರದರ್ಸ್ ಬೆಂಬಲ ಯಾಕೆ..?
ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿ ಆಗಿದ್ದ ಸುಧಾಮ್ ದಾಸ್, ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಸ್ವಯಂ ರಾಜೀನಾಮೆ ನೀಡಿದ್ದರು. ಆ ಬಳಿಕ ಮಾಹಿತಿ ಹಕ್ಕು ಆಯುಕ್ತರಾಗಿದ್ದರು. ಮಾರ್ಚ್ 2023ರಲ್ಲಿ ಮಾಹಿತಿ ಆಯುಕ್ತರ ಹುದ್ದೆಗೂ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗಿದ್ದರು. ಪಕ್ಷಕ್ಕೆ ಸೇರಿ ಯಾವುದೇ ಸಂಘಟನೆ ಕೆಲಸ ಮಾಡದೆ ಇದ್ದರೂ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿದ್ದು ಯಾಕೆ ಎನ್ನುವುದು ಸಾಮಾನ್ಯ ಕಾರ್ಯಕರ್ತರು ಹಾಗು ನಾಯಕರ ಪ್ರಶ್ನೆಯಾಗಿದೆ. ಪಕ್ಷಕ್ಕಾಗಿ ದುಡಿದ ಸಾಕಷ್ಟು ಹಿರಿಯ ನಾಯಕರು ಇದ್ದಾರೆ. ಅವರನ್ನ ಪರಿಗಣಿಸದೆ ಪರಿಷತ್ಗೆ ನಾಮರ್ನಿರ್ದೇಶನ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ರಾಜ್ಯ ಅಥವಾ ರಾಷ್ಟ್ರ ನಾಯಕರು ಈ ಬಗ್ಗೆ ನಮ್ಮ ಬಳಿ ಚರ್ಚೆ ನಡೆಸಿಲ್ಲ ಎನ್ನುವುದು ನಾಯಕರ ಆರೋಪ. ಆದರೆ ಡಿ.ಕೆ ಸುರೇಶ್ ಮಾತ್ರ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಕೆಲವೊಮ್ಮ ಹೀಗಾಗುತ್ತದೆ. ನನ್ನ ಹೆಸರಿಗೂ ಕೆಲವೊಮ್ಮೆ ವಿರೋಧ ಬರುತ್ತದೆ. ಏನು ಮಾಡಲು ಸಾಧ್ಯವಿಲ್ಲ ಎಂದು ನುಣುಚಿಕೊಂಡಿದ್ದಾರೆ.
ಕೃಷ್ಣಮಣಿ