ಕರ್ನಾಟಕ ರಾಜ್ಯದಲ್ಲಿನ ಕಳೆದ ಅವಧಿಯ ಬಿಜೆಪಿ ಸರ್ಕಾರದ ವಿರುದ್ಧದ ಶೇ 40 ರಷ್ಟು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಶುಕ್ರವಾರ (ಆಗಸ್ಟ್ 18) ಸಮಿತಿಯೊಂದನ್ನು ರಚಿಸಿದೆ.
ಕಳೆದ ಬಾರಿಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಶೇ 40 ಭ್ರಷ್ಟಾಚಾರ ಆರೋಪ ಮಾಡಿದ್ದರು.
ಮೂವತ್ತು ದಿನಗಳ ಒಳಗೆ ಶೇ 40 ಭ್ರಷ್ಟಾಚಾರ ಆರೋಪದ ತನಿಖೆಯ ವರದಿ ಸಲ್ಲಿಸುವಂತೆ ಎಚ್.ಎನ್.ನಾಗಮೋಹನ್ ದಾಸ್ ಸಮಿತಿಗೆ ರಾಜ್ಯ ಸರ್ಕಾರ ಸೂಚಿಸಿದೆ.
2021 ಮತ್ತು 2022ರಲ್ಲಿ ಗುತ್ತಿಗೆದಾರರು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಹಿಂದಿನ ಪ್ರತಿಪಕ್ಷ ನಾಯಕ ಹಾಗೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಪತ್ರಗಳ ಆಧಾರದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾವೇರಿ | ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಚಲುವರಾಯಸ್ವಾಮಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತೇ? ಗುಣಮಟ್ಟದ ಕಾರ್ಯ ನಡೆಸಲಾಗಿತ್ತೇ? ಯೋಜನೆಗಳಿಗೆ ನಿಗದಿಪಡಿಸಿದ ಅನುದಾನದ ಮಿತಿ ಹೆಚ್ಚಾಗಿತ್ತೇ? ಯಾವುದಾದರೂ ಯೋಜನೆಗಳು ಪೂರ್ಣಗೊಳ್ಳದೆ ಅದರ ಹಣ ಬಿಡುಗಡೆಯಾಗಿದೆಯೇ? ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ? ಎಂದು ಎಚ್.ಎನ್.ನಾಗಮೋಹನ್ ದಾಸ್ ಸಮಿತಿ ವಿಚಾರಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.