ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಚಿತ್ರಕ್ಕೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಜೋಡಿಯಾಗಲಿದ್ದಾರೆ.
ರೂಪೇಶ್ ಅವರ ಜನುಮದಿನದ ಅಂಗವಾಗಿ ಅವರ ಹೊಸ ಚಿತ್ರಕ್ಕೆ ಅಧಿಪತ್ರ ಎಂದು ಶೀರ್ಷಿಕೆ ಇಡಲಾಗಿತ್ತು. ಈ ಮೂಲಕ ಸಿನಿರಸಿಕರಿಗೆ ಕುರೂಹಲ ಮೂಡಿಸಿದ್ದ ಚಿತ್ರತಂಡ ನಾಯಕಿಯ ಆಗಮನದ ಸಮಾಚಾರವನ್ನು ನೀಡಿದೆ.
ಈ ಸಿನಿಮಾ ಮೂಲಕ ಜಾಹ್ನವಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ನಟಿ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ಅಧಿಪತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.
ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ದೀಪಾವಳಿಗೆ ದುನಿಯಾ ವಿಜಯ್ ಅಭಿನಯದ ‘ಭೀಮ’ನ ದರ್ಶನ?
ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಇದೇ 23 ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ.
ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶ ಕಂಡಿತ್ತು. ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿರಸಿಕರ ರಂಜಿಸಲಿದ್ದಾರೆ.