ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ (ಆಗಸ್ಟ್ 14) ಬೆಳಿಗ್ಗೆ ಮಂಗಳೂರು ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ತಿಂಗಳ ಹಿಂದೆ ಲೋಕೇಶ್ ಅವರ ಪುತ್ರ ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು ಪುತ್ರ ಶೋಕದಲ್ಲಿದ್ದ ತಂದೆಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮೃತ ಲೋಕೇಶ್ ಅವರ ಪುತ್ರ ರಾಜೇಶ್ (26) ಕಳೆದ ಜು.10 ರಂದು ನಾಪತ್ತೆಯಾಗಿದ್ದು,ಆತನ ಮೃತದೇಹ ಜು.12 ರಂದು ಬೆಳಿಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು.
ಮಗನ ಅಗಲಿಕೆ ಬಳಿಕ ತಂದೆ ಲೋಕೇಶ್ ಶೋಕತಪ್ತರಾಗಿ ಮಾನಸಿಕವಾಗಿ ಕುಗ್ಗಿದ್ದರು. ಆ.13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಾಪ್ ಆಡಿಯೊ ಸಂದೇಶ ಕಳುಹಿಸಿದ್ದರು. ಇದರಲ್ಲಿ “ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಮಂಗಳೂರು ಉಳ್ಳಾಲದಲ್ಲಿ ಸಿಗಬಹುದು. ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಕನ್ನಡಮ್ಮನ ಕಂಗಳಿಂದ ಭಾರತಾಂಬೆ ನೋಡೋಣ: ಎಚ್.ಡಿ.ಕುಮಾರಸ್ವಾಮಿ
ವಾಟ್ಸಾಪ್ ಸಂದೇಶ ಕೇಳಿದ ಕೂಡಲೇ ಸ್ನೇಹಿತರು ಕರೆ ಮಾಡಿದಾಗ ಮನೆ ಮಂದಿ ಕರೆ ಸ್ವೀಕರಿಸಿದ್ದರು. ಆಗ ಮನೆ ಮಂದಿ ಲೋಕೇಶ್ ರವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು. ಸೋಮವಾರ 11.00 ಗಂಟೆ ವೇಳೆ ಲೋಕೇಶ್ ಅವರ ಮೃತದೇಹ ಮಂಗಳೂರು ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ.
ಯುವಕ ರಾಜೇಶ್ ಆತ್ಮಹತ್ಯೆಯ ತಿಂಗಳ ಅಂತರದಲ್ಲಿ ಆತನ ತಂದೆ ಲೋಕೇಶ್ ಸಹ ಮೃತಪಟ್ಟಿರುವುದು ಕುಟುಂಬ ಮತ್ತು ನರೆಹೊರೆಯವರಲ್ಲಿ ಆತಂಕ ಉಂಟು ಮಾಡಿದೆ.