ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದು 11 ವರ್ಷಗಳು ಕಳೆದು ಹೋಗಿವೆ. ಸಿಬಿಐ ತನಿಖೆ ನಡೆದರೂ ಕೊಲೆಗಾರರು ಯಾರು ಅನ್ನೋ ಸತ್ಯ ಹೊರ ಬಂದಿಲ್ಲ. ಸೌಜನ್ಯ ಕೊಲೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಸೌಜನ್ಯ ಕುಟುಂಬದ ಜೊತೆಗೆ ಕೈ ಜೋಡಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ರಾಜ್ಯಾದ್ಯಂತ ಹೋರಾಟಕ್ಕೆ ತಯಾರಿ ನಡೆಸಿರುವ ವೇಳೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ಹಾಗು ಭಾರತೀಯ ಜನತಾ ಪಾರ್ಟಿ ಧುಮುಕುವ ಸುಳಿವು ನೀಡಿದೆ. ಆದರೆ ಇದು ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರವೋ..? ಅಥವಾ ಸೌಜನ್ಯಗೆ ನಿಜವಾಗಲೂ ನ್ಯಾಯ ಸಿಗುವುದಕ್ಕಾಗಿಯೇ ಹೋರಾಟಕ್ಕೆ ಮುಂದಾಗಿದೆಯೋ..? ಅನ್ನೋ ಅನುಮಾನ ಮೂಡಿಸುವಂತಿದೆ.
ಹಿಂದೂಗಳ ವಿರುದ್ಧ ನಡೆಯುತ್ತಿರುವ ಸಂಚು ಎಂದು ಆಕ್ರೋಶ..!
ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆ ಧಾರ್ಮಿಕ ಕ್ಷೇತ್ರವನ್ನು ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಲಾಗಿತ್ತು. ಬೆಳ್ತಂಗಡಿಯಲ್ಲಿ ಹಿಂದೂ ಸಂಘಟನೆಗಳ ಹೆಸರಲ್ಲಿ ಹೋರಾಟಗಾರರ ವಿರುದ್ಧವೇ ಪ್ರತಿಭಟನಾ ಸಭೆ ನಡೆಸಲಾಗಿತ್ತು. ಇದೀಗ ಆಗಸ್ಟ್14 ರಂದು ಪುತ್ತಿಲ ಪರಿವಾರ ‘ನಮ್ಮ ನಡೆ ನ್ಯಾಯದ ಕಡೆ’ ಎಂದು ಪ್ರತಿಭಟನೆಗೆ ಕಡೆ ನೀಡಲಾಗಿದೆ. ಪ್ರತಿಭಟನೆ ದಿನ ಪುತ್ತೂರು ಬಂದ್ ಹಾಗು ರಸ್ತೆ ತಡೆಗೆ ಅವಕಾಶವಿಲ್ಲ ಎಂದ ಪೊಲೀಸ್ ಇಲಾಖೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಪುತ್ತೂರು ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದು, ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ ಎಂದು ತಿಳಿಸಿದ್ದಾರೆ. ಆದರೆ ಶಾಂತಿಯುತವಾಗಿ ದರ್ಬೆಯಿಂದ ಪುತ್ತೂರು ಬಸ್ ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಮಾಡಲು ಅರುಣ್ ಪುತ್ತಿಲ ನೇತೃತ್ವದಲ್ಲಿ ಹೋರಾಟ ಮಾಡಲಿದ್ದಾರೆ.
ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡಿದ ಶ್ರೀರಾಮ ಸೇನೆ ಮುತಾಲಿಕ್..!
ಸೌಜನ್ಯ ಕುಟುಂಬಸ್ಥರನ್ನ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿಯಾಗಿ ಸೌಜನ್ಯ ತಂದೆ, ತಾಯಿ ಕುಸುಮಾವತಿ, ತಂಗಿ ಹಾಗೂ ಕುಟುಂಬದವರ ಜೊತೆ ಮಾತುಕತೆ ನಡೆಸಿದ್ದಾರೆ. ಸೌಜನ್ಯ ಹೋರಾಟಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡುತ್ತದೆ. ನಮ್ಮ ವ್ಯವಸ್ಥೆ ಸಂಪೂರ್ಣ ಕುಲಗೆಟ್ಟು ಹೋಗಿದೆ. ಸೌಜನ್ಯ ಪ್ರಕರಣ ಮಾತ್ರವಲ್ಲ ರಾಜ್ಯದಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಸೌಜನ್ಯ ಪ್ರಕರಣಕ್ಕೆ ಒಂದು ನ್ಯಾಯ ಸಿಗಬೇಕೆಂಬುದು ಇದೀಗ ಎಲ್ಲೆಡೆ ಧ್ವನಿಯಾಗಿದೆ. ಪೊಲೀಸ್ ವ್ಯವಸ್ಥೆ ಭ್ರಷ್ಟಾಚಾರದಿಂದ ಕೂಡಿದೆ, ಸೌಜನ್ಯ ಪ್ರಕರಣದಲ್ಲಿ ಮೊದಲನೇ ಆರೋಪಿ ಪೊಲೀಸ್ ಇಲಾಖೆಯೇ ಆಗಿದೆ. ‘ಸಂತೋಷ್ ರಾವ್ ಎಂಬ ಅಮಾಯಕನಿಗೆ ಟಾರ್ಚರ್ ನೀಡಿದ ನೀಚರು ಪೊಲೀಸರು. ಸಂತೋಷ್ ರಾವ್ ಆರೋಪಿ ಎಂಬುದಕ್ಕೆ ಪೊಲೀಸ್ ಇಲಾಖೆಗೆ ಒಂದೇ ಒಂದು ಸಾಕ್ಷ್ಯ ಸಿಕ್ಕಿಲ್ಲ. ನ್ಯಾಯಾಲಯವೇ ಪೊಲೀಸ್ ಇಲಾಖೆಗೆ ಸಾಕ್ಷ್ಯ ಇಲ್ಲ ಎಂದು ಛೀಮಾರಿ ಹಾಕಿದೆ. ಹೀಗಾಗಿ ಸೌಜನ್ಯ ಹೋರಾಟಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಣೆ ಮಾಡಿದ್ದಾರೆ.
ಸೌಜನ್ಯ ಸಾವಿಗೆ ನ್ಯಾಯ ಕೇಳಿ ರಾಜ್ಯ ಬಿಜೆಪಿಯಿಂದಲೇ ಹೋರಾಟ..!
ಸೌಜನ್ಯ ಹತ್ಯೆ ನಡೆದಿರುವ ಹೋರಾಟಕ್ಕೆ ಇದೀಗ ಸ್ವತಃ ಬಿಜೆಪಿ ಎಂಟ್ರಿ ಕೊಡುವ ಸುಳಿವು ನೀಡಿದೆ. ಆಗಸ್ಟ್ 27ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಬಾಗ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಬಿಜೆಪಿ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ ಈ ಹಿಂದೆ ಧಾರ್ಮೀಕ ಕ್ಷೇತ್ರವನ್ನು ಗುರಿಯಾಗಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಬಂದಿದ್ದವು. ಈ ಹಿಂದೆ ಕೊಲೆಯಾದಾಗ ಸೌಜನ್ಯ ಕುಟುಂಬಸ್ಥರನ್ನು ರಾಜ್ಯ ಬಿಜೆಪಿ ನಾಯಕರು ಭೇಟಿ ಕೂಡ ಮಾಡಲಿಲ್ಲ.
ಸಿಎಂ ಜೊತೆಗೆ ಚರ್ಚೆ ಮಾಡ್ತೇನೆ ಎಂದಿದ್ದಾರೆ ಗುಂಡೂರಾವ್..
ಸೌಜನ್ಯ ಕೇಸ್ ಮರು ತನಿಖೆಗೆ ಆಗ್ರಹ ಜೋರಾಗ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆ ಕೂಡ ನಡೆಯುತ್ತಿದೆ. ಸಿಬಿಐ ಕೇಸ್ ಕ್ಲೋಸ್ ಮಾಡಿದ್ದು ಯಾಕೆ ಎಂಬ ಮಾಹಿತಿಯನ್ನು ಸರ್ಕಾರ ತರಿಸಿಕೊಳ್ಳಲಿದೆ. ಮರು ತನಿಖೆಗೆ ಹೆಚ್ಚಿನ ಮಾಹಿತಿ ಇದೆಯೇ..? ಹೊಸ ಎವಿಡೆನ್ಸ್ ಏನಾದ್ರೂ ಇದೆಯಾ..? ಅನ್ನೋ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಈ ಬಗ್ಗೆ ಸಿಎಂ ಹಾಗೂ ಗೃಹ ಇಲಾಖೆ ಮಾಹಿತಿ ತರಿಸಿಕೊಂಡು ಮುಂದಿನ ತೀರ್ಮಾನನ್ನು ಗೃಹ ಇಲಾಖೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ಜೊತೆಗೆ ನಾನೂ ಕೂಡ ಸೌಜನ್ಯ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ ಪರಮೇಶ್ವರ್ ಜೊತೆಗೆ ಮಾತನಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ಮಹೇಶ್ ಶೆಟ್ಟಿ ತಿಮರೋಡಿ ಹಾಗು ಮೈಸೂರಿನ ಒಡನಾಡಿ ಸಂಸ್ಥೆ ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರದಿಂದಲೇ ಹೋರಾಟಕ್ಕೆ ಎಂಟ್ರಿ ಕೊಡ್ತಿದ್ದಾರಾ..? ಅನ್ನೋದು ಮುಂದಿನ ದಿನಗಳಲ್ಲು ಗೊತ್ತಾಗಬೇಕಿದೆ.
ಕೃಷ್ಣಮಣಿ