ಬೆಳಗಾವಿಯ ಶಾಹುನಗರದಲ್ಲಿ ವಿದ್ಯುತ್ ದುರಂತದಲ್ಲಿ 3 ಜನರು ಮೃತಪಟ್ಟಿರುವ ಘಟನೆ ನಡೆದ ಬಳಿಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ (ಆಗಸ್ಟ್ 12) ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಸಂತ್ರಸ್ತರಿಗೆ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. ಜತೆಗೆ ಲಕ್ಷ್ಮಿ ಹೆಬ್ಬಾಳಕರ್ ಅವರ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಸಹ ಆರ್ಥಿಕ ಸಹಾಯ ಮಾಡಿದ್ದಾರೆ.
ವಿದ್ಯುತ್ ಆಘಾತದಿಂದ ಶಾಹುನಗರದ ಮನೆಯಲ್ಲಿ ಶನಿವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ. ವಾಚಮನ್ ಕೆಲಸ ಮಾಡುತ್ತಿದ್ದ ಈರಪ್ಪಾ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ ಮೊಮ್ಮಗಳು ಅನ್ನಪೂರ್ಣ ಲಮಾಣಿ ( 8) ಮೃತರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಗೆಲುವು ಬಿಜೆಪಿಯ ಭಯಕ್ಕೆ ಕಾರಣವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಲಕ್ಷ್ಮಿ ಹೆಬ್ಬಾಳಕರ್, ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯವನ್ನು ತುಂಬಿದರು. ಜತೆಗೆ ಮುಖ್ಯಮಂತ್ರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಈ ಘಟನೆಯ ಬಗ್ಗೆ ವಿವರಿಸಿ, ಪ್ರತಿ ವ್ಯಕ್ತಿಗೆ ತಲಾ 2 ಲಕ್ಷ ರೂ,ಗಳನ್ನು ಮಂಜೂರು ಮಾಡಿ ಕೊಡುವಂತೆ ಕೋರಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ತ್ವರಿತಗತಿಯಲ್ಲಿ ಪರಿಹಾರದ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಲಕ್ಷ್ಮಿ ಹೆಬ್ಬಾಳಕರ್ ಅವರು ಲಕ್ಷ್ಮಿ ತಾಯಿ ಫೌಂಡೇಶನ್ನಿಂದ ಸಹ ಆರ್ಥಿಕ ಸಹಾಯ ಪ್ರಕಟಿಸಿದರು.