ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ನಕಲಿ ದೂರು ಪತ್ರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿ ಮಾಡಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಶಾಸಕರ ಪತ್ರ ಸಹ ನಕಲಿ ಮಾಡಲಾಗಿತ್ತು. ನಕಲಿಯಾಗಿದ್ದರೂ ಇದಕ್ಕೆ ಪ್ರಚಾರ ದೊರೆಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಚಲುವರಾಯಸ್ವಾಮಿ ಅವರ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಆರೋಪ ಮಾಡಲಾಗುತ್ತಿದೆ. ಪತ್ರ ತಾವು ಬರೆದಿಲ್ಲ, ಅದು ನಕಲಿ ಎಂದು ಈಗ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೃಷ್ಣ ಭೈರೇಗೌಡ ಆರೋಪಿಸಿದರು.
ಇದು ರಾಜಕೀಯ ಆಟವಾಗಿದೆ. ಇದಕ್ಕೆ ರಾಜಕೀಯವಾಗಿಯೇ ಎದುರಿಸುತ್ತೇವೆ. ಅಧಿಕಾರಿಗಳು ತಮಗೆ ತೊಂದರೆ ಆದರೆ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಎರಡೇ ತಿಂಗಳಲ್ಲಿ ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ವಿರೋಧ ಪಕ್ಷದವರಿಗೆ ಸರ್ಕಾರದ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷ ಭೈರೇಗೌಡ ಅಣಕವಾಡಿದರು.
ಈ ಸುದ್ದಿ ಓದಿದ್ದೀರಾ? ಪಕ್ಷ ಸಂಘಟನೆಗಾಗಿ ಜೆಡಿಎಸ್ ಸಂಘಟಿತ ಹೋರಾಟ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹೆಚ್ಚು ಪ್ರಬಲವಾಗುತ್ತಿದೆ. ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರಿಗೆ ನಿರಾಳ ನೀಡಿದೆ. ಆದರೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯದಲ್ಲಿ ರಾಜ್ಯದಾದ್ಯಂತ ಒತ್ತುವರಿ ತೆರವು ಅಭಿಯಾನ ನಡೆಯುತ್ತದೆ. ಸರ್ಕಾರಿ ಭೂಮಿಗಳ ಒತ್ತುವರಿ ತೆರವಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮೊದಲಿಗೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು. ಒತ್ತುವರಿ ಮಾಡಿಕೊಂಡವರು ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.