ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಬಗ್ಗೆ ಆಗಸ್ಟ್ 8 ರಂದು ಲೋಕಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡಲು ಮಂಗಳವಾರ (ಆಗಸ್ಟ್ 1) ತೀರ್ಮಾನಿಸಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ವಿರೋಧಿಸಿವೆ. ಅವಿಶ್ವಾಸ ನಿರ್ಣಯದ ಬಗ್ಗೆ ತಕ್ಷಣವೇ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಅವಿಶ್ವಾಸ ನಿರ್ಣಯ ನಡಾವಳಿಯನ್ನು ಪ್ರತಿಪಕ್ಷಗಳ ಒಕ್ಕೂಟ ʼಇಂಡಿಯಾʼ ಈಗಾಗಲೇ ಲೋಕಸಭೆಯಲ್ಲಿ ಮಂಡಿಸಿದೆ. ಈ ಕುರಿತು ಲೋಕಸಭೆ ವ್ಯವಹಾರ ಸಲಹಾ ಸಮಿತಿ ಸಭೆ ನಡೆಸಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಆಗಸ್ಟ್ 8 ರಂದು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು. 10 ರಂದು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲಿದ್ದಾರೆ ಎಂದು ಸಲಹಾ ಸಮಿತಿ ಹೇಳಿದೆ.
ಸಲಹಾ ಸಮಿತಿ ನಿರ್ಧಾರವನ್ನು ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಮತ್ತು ಭಾರತ್ ರಾಷ್ಟ್ರ ಸಮಿತಿ ವಿರೋಧಿಸಿವೆ. ಸರ್ಕಾರದ ನಿರ್ಧಾರದ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿವೆ.
ಸದನ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಯಾವುದೇ ನಿಯಮಗಳು ಇಲ್ಲ. ಅವಿಶ್ವಾಶ ನಿರ್ಣಯvu ಅಂಗೀಕಾರಗೊಂಡ 10 ದಿನಗಳೊಳಗೆ ಪ್ರಸ್ತಾವನೆಯನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ ಎಂದು ಕೇಂದ್ರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಲೋಕಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲು ಸಭಾಧ್ಯಕ್ಷ ಓಂ ಬಿರ್ಲಾ ಅವರು ಜುಲೈ 26ರಂದು ಅಂಗೀಕರಿಸಿದ್ದಾರೆ.
ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಕೃತ್ಯದ ವಿಡಿಯೊ ವೈರಲ್ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಹೊರಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೂ ಅವರು ಇದುವರೆಗೆ ಸದನದೊಳಗೆ ಹೇಳಿಕೆ ನೀಡಿಲ್ಲ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಥಾಣೆಯಲ್ಲಿ ಕ್ರೇನ್ ಕುಸಿತ ; 17 ಮಂದಿ ಸಾವು, ಪರಿಹಾರ ಘೋಷಣೆ
ಈ ವಿಚಾರವಾಗಿ, ಸದನದೊಳಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದು ಅವಿಶ್ವಾಸ ನಿರ್ಣಯ ಮಂಡಿಸುವ ಅಸ್ತ್ರ ಪ್ರಯೋಗಿಸಿವೆ. ನಿಯಮದ ಪ್ರಕಾರ ಸಭಾಧ್ಯಕ್ಷರು ಸದನದ ಎಲ್ಲ ನಾಯಕರ ಜೊತೆಗೆ ಸಮಾಲೋಚಿಸಿ, 10 ದಿನಗಳೊಳಗೆ ಈ ಕುರಿತ ಚರ್ಚೆಗೆ ದಿನಾಂಕ ನಿಗದಿಪಡಿಸುತ್ತಾರೆ.
ಅವಿಶ್ವಾಸ ನಿರ್ಣಯ ಎಂದರೇನು?
ಕೇಂದ್ರ ಸರ್ಕಾರಕ್ಕೆ ಬಹುಮತವನ್ನು ಮತ್ತು ಆಡಳಿತ ನಡೆಸುವ ಸಾಮರ್ಥ್ಯವನ್ನು ಪ್ರಶ್ನಿಸಲು ವಿಪಕ್ಷಗಳಿಗೆ ಅವಕಾಶವನ್ನು ಕಲ್ಪಿಸುವ ಸಂಸದೀಯ ಪ್ರಕ್ರಿಯೆಯನ್ನು ಅವಿಶ್ವಾಸ ಗೊತ್ತುವಳಿ ಎಂದು ಕರೆಯುತ್ತಾರೆ. ಈ ನಿರ್ಣಯವನ್ನು ಸದನದಲ್ಲಿ ಪ್ರತಿಪಕ್ಷಗಳು ಬಹುಮತದಿಂದ ಸಾಬೀತುಪಡಿಸಿದರೆ ಸರ್ಕಾರ ರಾಜೀನಾಮೆ ನೀಡಬೇಕು.