ಮಣಿಪುರ ಹಿಂಸಾಚಾರ ಘಟನೆಗೆ ಸಂಬಂಧಿಸಿ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಧ್ಯಂತರ ಶಿಫಾರಸುಗಳನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ (ಆಗಸ್ಟ್ 1) ತಿಳಿಸಿದ್ದಾರೆ.
ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಬಿಂಬಿಸುವ ವಿಡಿಯೊ ವೈರಲ್ ಆದ ಬಳಿಕ ಸ್ವಾತಿ ಮಲಿವಾಲ್, ಜುಲೈ 23 ರಂದು ಹಿಂಸೆಯಿಂದ ನಲುಗಿರುವ ಮಣಿಪುರದ ಚುರಾಚಂದ್ಪುರ, ಮೊಯಿರಾಂಗ್, ಕಾಂಗ್ಪೋಕ್ಪಿ ಮತ್ತು ಇಂಫಾಲ್ ಜಿಲ್ಲೆಗಳನ್ನು ಒಳಗೊಂಡಂತೆ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಮಣಿಪುರ ಹಿಂಸಾಚಾರ ಸಂಬಂಧ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು, ಮುಖ್ಯಮಂತ್ರಿ ರಾಜೀನಾಮೆ, ಪ್ರಧಾನಿ ಮತ್ತು ಕೇಂದ್ರ ಸಚಿವರ ತುರ್ತು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸಮಗ್ರ ಕಾರ್ಯತಂತ್ರ ರೂಪಿಸುವುದು ಸೇರಿದಂತೆ 24 ಮಧ್ಯಂತರ ಶಿಫಾರಸುಗಳನ್ನು ನೀಡಿ ಡಿಸಿಡಬ್ಲ್ಯು ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಈ ಸುದ್ದಿ ಓದಿದ್ದೀರಾ? ಗೋಹತ್ಯೆ ಸಂಪೂರ್ಣ ನಿಷೇಧ | ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಜನಾಂಗೀಯ ಘರ್ಷಣೆಯ ಮೂಲ ಕಾರಣ ಮತ್ತು ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಸರ್ಕಾರದ ಕ್ರಮಗಳು ಮತ್ತು ಲೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ ರಚನೆಗೆ ಮಹಿಳಾ ಆಯೋಗ ಮನವಿ ಮಾಡಿದೆ.
ಮಣಿಪುರ ಹಿಂಸಾಚಾರ ತನಿಖೆಗೆ ಎರಡು ಪ್ರತ್ಯೇಕ ಎಸ್ಐಟಿ ರಚನೆಗೆ ಶಿಫಾರಸು ಮಾಡಿರುವ ಆಯೋಗ, ಕೊಲೆಗಳು, ಕಾಣೆಯಾದ ವ್ಯಕ್ತಿಗಳು ಇತ್ಯಾದಿಗಳ ಎಲ್ಲಾ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್ಐಟಿ ರಚಿಸಬೇಕು. ನಿರ್ದಿಷ್ಟವಾಗಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಪರಿಶೀಲಿಸಲು ಮತ್ತೊಂದು ಎಸ್ಐಟಿ ರಚನೆಯಾಗಬೇಕು. ಲೈಂಗಿಕ ದೌರ್ಜನ್ಯದ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು. ಮತ್ತು ರಾಜ್ಯದ ಹೊರಗಿನ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಮಹಿಳಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ