ರಾಜ್ಯ ರಾಜಕಾರಣದಲ್ಲಿ ಕೆಲವೇ ತಿಂಗಳ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಪಕ್ಕಾ ಎದುರಾಳಿಗಳಾಗಿ ವಾಕ್ಸಮರ ನಡೆಸಿದ್ದ ಬಿಜೆಪಿ ಹಾಗು ಜೆಡಿಎಸ್ ನಾಯಕರು ಇದೀಗ ದೋಸ್ತಿಗಳಾಗಿದ್ದಾರೆ. ಇಂದು ದೆಹಲಿಗೆ ತೆರಳುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಹಾಗು ಗೃಹ ಸಚಿವ ಅಮಿತ್ ಷಾ ಜೊತೆಗೆ ಸಭೆ ನಡೆಸಿದ ಬಳಿಕ ಲೆಕ್ಕಾಚಾರಗಳು ಅಂತಿಮಗೊಂಡರೆ ನಾಳಿನ ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಬಹುತೇಕ ಷರತ್ತುಗಳು ಒಪ್ಪಿಗೆಗೆ ಸೂಕ್ತ ಆಗಿದ್ದು, ಎರಡೂ ಕಡೆಯಲ್ಲೂ ಹೊಂದಾಣಿಕೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರಗಳ ಬಗ್ಗೆ ಚರ್ಚೆ..!
ರಾಜ್ಯದಲ್ಲಿ ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಆಗುವುದಾದರೆ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಹಾಗು 6 ಲೋಕಸಭಾ ಕ್ಷೇತ್ರಗಳ ಟಿಕೆಟ್ ಕೊಡಬೇಕು ಎಂದು ಜೆಡಿಎಸ್ ಷರತ್ತು ವಿಧಿಸಿದೆ. ಒಂದು ವೇಳೆ ವಿರೋಧ ಪಕ್ಷದ ನಾಯಕನ ಸ್ಥಾನ ಸಾಧ್ಯವಿಲ್ಲ ಎನ್ನುವುದಾದರೆ, ರಾಜ್ಯಸಭಾ ಮೆಂಬರ್ ಜೊತೆಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು, ಕೇಂದ್ರ ಸಚಿವ ಸ್ಥಾನದ ಜೊತೆಗೆ 6 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಬೇಕು. ಬಿಜೆಪಿ ಪಕ್ಷದ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು BJP ಹಿಂದೇಟು ಹಾಕುತ್ತಿದೆ ಎನ್ನಲಾಗ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಗೆದ್ದಿರುವುದು ಒಂದೊಂದೇ ಕ್ಷೇತ್ರಗಳಲ್ಲಿ. ಆಗಾಗಿ ಇಂದಿನ ಸಭೆಯಲ್ಲಿ ಅಂತಿಮ ಆಗುವ ಸಾಧ್ಯತೆ ಇದೆ.
ಜೆಡಿಎಸ್ ಕೇಳಿದ ಕ್ಷೇತ್ರಗಳು ಯಾವುವು..? ಯಾರಿಗೆ ಕಂಟಕ..?
ಜೆಡಿಎಸ್ ಪ್ರಬಲ ಆಗಿರುವ ಹಳೇ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು, ತುಮಕೂರು, ಕೋಲಾರ ಹಾಗು ರಾಯಚೂರು ಕ್ಷೇತ್ರಗಳನ್ನ ಬಿಟ್ಟು ಕೊಡುವಂತೆ ಜೆಡಿಎಸ್ ಪ್ರಸ್ತಾವನೆ ಇಟ್ಟಿದೆ. ಆದರೆ ಬಿಜೆಪಿ ನಾಯಕರು ಜೆಡಿಎಸ್ ಕಂಡಿಷನ್ಗೆ ಒಪ್ಪಿಕೊಳ್ತಾರ..? ಅನ್ನೋ ಪ್ರಶ್ನೆ ಎದ್ದಿದೆ. ಇನ್ನು ಮಂಡ್ಯದಲ್ಲಿ ಹಾಲಿ ಸಂಸದೆ ಆಗಿರುವ ಸುಮಲತಾ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಇನ್ನು ಮೈಸೂರಿನಲ್ಲಿ ಪ್ರತಾಪ್ ಸಿಂಹ ಅಬ್ಬರ ತೋರಿಸುತ್ತಿದ್ದಾರೆ. ಇತ್ತ ತುಮಕೂರು, ರಾಯಚೂರಿನಲ್ಲೂ ಬಿಜೆಪಿ ಸಂಸದರೇ ಇದ್ದಾರೆ. ಕೋಲಾರದಲ್ಲೂ ಮುನಿಸ್ವಾಮಿ ಬಿಜೆಪಿಯಿಂದ ಸಂಸದರಾಗಿದ್ದಾರೆ. ಹೀಗಿರುವಾಗ ಹಾಲಿ ಸಂಸದರನ್ನು ಬಿಟ್ಟು ಜೆಡಿಎಸ್ ಅಭ್ಯರ್ಥಿಗಳಿಗೆ ಟಿಕೆಟ್ ಕೊಡ್ತಾರಾ..? ಟಿಕೆಟ್ ಕೊಟ್ರೆ ಗೆದ್ದು ಬಿಜೆಪಿಗೆ ಬಲ ತುಂಬ್ತಾರಾ..? ಅನ್ನೋ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಆಗಲಿದೆ.
ರಾಜ್ಯದಲ್ಲಿ ಕುಮಾರಸ್ವಾಮಿ ಮೈತ್ರಿ ಜೆಡಿಎಸ್ಗೆ ಲಾಭ ತರುತ್ತಾ..?
ಮಾಜಿ ಸಿಎಂ ಕುಮಾರಸ್ವಾಮಿ ಮೊಟ್ಟ ಮೊದಲಿಗೆ ಸಿಎಂ ಆಗಿದ್ದು, ಬಿಜೆಪಿ ಪಕ್ಷದಿಂದಲೇ ಎನ್ನುವುದು ಸತ್ಯ. ಅಂದು ಬಿಜೆಪಿ ಬೆಂಬಲದಿಂದಲೇ ರಾಜ್ಯಾದ್ಯಂತ ಮನೆ ಮಾತಾಗಿದ್ದರು. ಆ ಬಳಿಕ ಜೆಡಿಎಸ್ ಪಕ್ಷದ ನಿಲುವು ಮೈತ್ರಿಭಂಗ ತಂದಿತ್ತು. ಇದೀಗ ಬಿಜೆಪಿ ಕೂಡ ಶಕ್ತಿ ಹೀನ ಆಗಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸೋಲಿನಲ್ಲಿ ಬಿಜೆಪಿ ಮಾಡಿದ ತಂತ್ರಗಾರಿಕೆಯೂ ಇದೆ. ಇದೇ ಕಾರಣದಿಂದ ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಮತ್ತೆ ಕರ್ನಾಟಕದಲ್ಲಿ ಶಕ್ತಿಯುತ ಎಂಬುದನ್ನು ತೋರಿಸಲು ಪಣತೊಟ್ಟಿವೆ. ಕಾಂಗ್ರೆಸ್ ಹಾಗು ಜೆಡಿಎಸ್ ಜಾತ್ಯಾತೀತ ಪಕ್ಷಗಳಾಗಿದ್ದರೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡರೂ ಹಳೇ ಮೈಸೂರು ಭಾಗದಲ್ಲಿ ಪಕ್ಕಾ ಎದುರಾಳಿಗಳು ಹೊಂದಾಣಿಕೆ ಮಾಡಿಕೊಂಡರೆ ಕಷ್ಟ ಎನ್ನುವುದು ಮಾಜಿ ಸಿಎಂ ಮಾತು. ಇನ್ನು ಸಿದ್ದರಾಮಯ್ಯ ಸಿಎಂ ಆಗಿರುವಾಗ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ. ಬಿಜೆಪಿ ಉತ್ತರ ಕರ್ನಾಟಕದಲ್ಲಿ ಜಯ ಗಳಿಸಲಿ, ನಾವು ಹಳೇ ಮೈಸೂರು ಭಾಗದಲ್ಲಿಒ ಬಲವರ್ಧನೆ ಮಾಡ್ತೇವೆ. ನಾವಿಬ್ಬರೂ ಸೇರಿದರೆ ಕಾಂಗ್ರೆಸ್ಗೆ ಮಣ್ಣು ಮುಕ್ಕಿಸಬಹುದು ಅನ್ನೋದು ರಾಜಕೀಯ ಲೆಕ್ಕಾಚಾರ.
ಕೃಷ್ಣಮಣಿ