ಪ್ರತಿಧ್ವನಿ ಜನರಿಗೆ ಸಿಗುವಂತ ಯೋಜನೆಗಳ ಲಾಭ ಜನರಿಗೆ ಸಿಗುವಂತೆ ಆಗ್ಬೇಕು ಅನ್ನೋ ಉದ್ದೇಶದಿಂದ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಲೇ ಬಂದಿದ್ದೇವೆ. ಸರ್ಕಾರದ 2ನೇ ಗ್ಯಾರಂಟಿಯಾಗಿ ಜಾರಿಯಾದ ಗರಿಷ್ಠ 200 ಯೂನಿಟ್ ವಿದ್ಯುತ್ಗೆ ಅರ್ಜಿ ಸಲ್ಲಿಕೆ ಕಾರ್ಯ ಪ್ರಗತಿಯಲ್ಲಿದೆ. ಕಳೆದ ತಿಂಗಳ 25ಕ್ಕೂ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದವರಿಗೆ ಈ ತಿಂಗಳ ವಿದ್ಯುತ್ ಬಿಲ್ ಇರಲ್ಲ, ಒಂದು ವೇಳೆ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದರೆ ಹೆಚ್ಚುವರಿ ಬಳಕೆಯ ಹಣವನ್ನು ಮಾತ್ರ ಪಾವತಿ ಮಾಡಬೇಕು ಅನ್ನೋದು ನಿಯಮ. ಆದರೆ ನೀವು ಅರ್ಜಿ ಸಲ್ಲಿಕೆ ಮಾಡಿದ್ದೀರಿ. ಅದು ಯಶಸ್ಸು ಆಗಿದಿಯೋ ಇಲ್ವೋ ಅನ್ನೋದನ್ನು ನೀವೇ ಪರಿಶೀಲನೆ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಸೇವಾ ಸಿಂಧು ಪೋರ್ಟಲ್ನಲ್ಲಿ ಇಲ್ಲಿ ಕ್ಲಿಕ್ ಮಾಡಿ..!
https://sevasindhu.karnataka.gov.in/StatucTrack/Track_Status
ಸೇವಾ ಸಿಂಧು ಪೋರ್ಟಲ್ನಲ್ಲೇ ಅರ್ಜಿ ಆಹ್ವಾನ ಮಾಡಿರುವ ಇಂಧನ ಇಲಾಖೆ, ಜನರೇ ಅರ್ಜಿ ಸಲ್ಲಿಸಲು ಅನುಕೂಲ ಆಗುವಂತೆ ಮಾಡಿತ್ತು. ಇದೀಗ ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿದೆಯೋ ಇಲ್ವೋ ಅನ್ನೋ ಗೊಂದಲ ಇರಬಾರದು ಅನ್ನೋ ಕಾರಣಕ್ಕೆ ಮತ್ತೊಂದು ಲಿಂಕ್ ಕೊಟ್ಟಿದ್ದಾರೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪೇಜ್ ಓಪನ್ ಆಗುತ್ತದೆ.
ಆ ಪೇಜ್ನಲ್ಲಿ ನಿಮ್ಮ ವಿದ್ಯುತ್ ನಿಗಮ ಬೆಂಗಳೂರು ಆಗಿದ್ದರೆ ಬೆಸ್ಕಾಂ, ಮೈಸೂರು ಭಾಗ ಆಗಿದ್ದ ಸೆಸ್ಕ್, ಹೈದ್ರಾಬಾದ್ ಕರ್ನಾಟಕ ಆಗಿದ್ದರೆ ಜೆಸ್ಕಾಂ, ಕರಾವಳಿ ಪ್ರದೇಶ ಆಗಿದ್ದರೆ ಮೆಸ್ಕಾಂ, ಹುಬ್ಬಳ್ಳಿ ಭಾಗ ಹೆಸ್ಕಾಂ ಹೀಗೆ ತಮ್ಮ ವ್ಯಾಪ್ತಿಯನ್ನು ಸೆಲೆಕ್ಟ್ ಮಾಡಿ ನಿಮ್ಮ ಬಿಲ್ನಲ್ಲಿರುವ ಅಕೌಂಟ್ ಐಡಿ ಹಾಕಿದರೆ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ ಎನ್ನುವ ಸಂದೇಶ ಬರುತ್ತದೆ.
ಅರ್ಜಿ ತಿರಸ್ಕಾರ ಆಗಿದ್ದರೆ ಏನು ಮಾಡ್ಬೇಕು..?

ಒಂದು ವೇಳೆ ಅರ್ಜಿ ಸ್ಥಿತಿ ಯಶಸ್ವಿ ಎಂದಿಲ್ಲ ಎನ್ನುವುದಾದರೆ ಗಾಬರಿ ಆಗುವುದು ಬೇಡ. ಇಂಧನ ಸಚಿವ ಕೆ.ಜೆ ಜಾರ್ಜ್ ನೇತೃತ್ವದ ಇಂಧನ ಇಲಾಖೆ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ನೀಡಿಲ್ಲ. ನೀವು ಈ ತಿಂಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ರೆ ಮುಂದಿನ ತಿಂಗಳು ಅರ್ಜಿ ಹಾಕಬಹುದು. ಒಂದು ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಬಹುದು ಅಷ್ಟೆ. ಅದಕ್ಕಿಂತ ಹೆಚ್ಚಿನ ಸಮಸ್ಯೆ ಏನೂ ಆಗುವುದಿಲ್ಲ. ಇನ್ನು ಅರ್ಜಿ ಹಾಕಲು ಸಾಧ್ಯವಾಗದೇ ಇರುವ ಜನರು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಸರ್ಕಾರವೇ ಅರ್ಜಿ ಸಲ್ಲಿಕೆ ಮಾಡದಿರುವ ಜನರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿಗಳನ್ನೇ ಮನೆ ಬಳಿಗೆ ಕಳುಹಿಸಿ, ಅರ್ಜಿ ಹಾಕುವಂತೆ ಸೂಚನೆ ನೀಡುವುದು ಅಥವಾ ಅರ್ಜಿ ಹಾಕಲು ಬಾರದಿದ್ದವರಿಗೆ ತಾವೇ ಅರ್ಜಿ ಹಾಕಿಕೊಡುವ ಮೂಲಕ ಅರ್ಜಿ ಹಾಕಲು ವ್ಯವಸ್ಥೆ ಇಲ್ಲದವರಿಗೆ ಸಹಾಯ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಫ್ರೀ ಕರೆಂಟ್ ಕೊಡದೆ ಬಿಲ್ ಕೊಟ್ಟರೆ ಗಲಾಟೆ..!

ಕಾಂಗ್ರೆಸ್ ಪಕ್ಷ ಈಗಾಗಲೇ ಹೇಳಿದಂತೆ ಗರಿಷ್ಠ 200 ಯೂನಿಟ್ ವಿದ್ಯುತ್ ಫ್ರೀ ಘೋಷಣೆ ಮಾಡಲಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಆಗಿದ್ದರೆ ಅರ್ಜಿ ಹಾಕಿಲ್ಲ ಅನ್ನೋ ಕಾರಣಕ್ಕೆ ಬಿಲ್ ಕೊಡಲಾಗುತ್ತದೆ. ಆದರೆ ಅರ್ಜಿ ಹಾಕಿದ್ದೀವಿ, ನೀವು ಬಿಲ್ ಕೊಡಲು ಬಂದಿದ್ಯಾಕೆ..? ಎಂದು ಜನರು ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುತ್ತದೆ. ಅರ್ಜಿ ಹಾಕಿರುವುದಕ್ಕೆ ಸ್ವೀಕೃತಿ ಪತ್ರ ತೋರಿಸಿದಾಗ ಇರುಸು ಮುರುಸು ಉಂಟಾಗುತ್ತದೆ. ಈ ಅನಾಹುತ ಆಗಬಾರದು ಅನ್ನೋ ಕಾರಣಕ್ಕೆ ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಿ ಎಂದು ಹೊಸ ಲಿಂಕ್ ಬಿಟ್ಟಿದ್ದಾರೆ. ಅದರ ಜೊತೆಗೆ ಅರ್ಜಿ ಹಾಕಲು ಆಗದವರ ಮನೆಗೆ ತಮ್ಮ ಸಿಬ್ಬಂದಿಯನ್ನೇ ಕಳಹಿಸಿ ಅರ್ಜಿ ಹಾಕುವುದಕ್ಕೆ ವ್ಯವಸ್ಥೆ ಮಾಡಿರುವುದು ಕೂಡ ಉತ್ತಮ ಬೆಳವಣಿಗೆ ಎನ್ನಬಹುದು.
ಕೃಷ್ಣಮಣಿ



