
ಕೋವಿಡ್ ಸಂದರ್ಭದಲ್ಲಿ ಔಷಧಿ ಮಾರುಕಟ್ಟೆ ಮತ್ತು ವೈದ್ಯ ಜಗತ್ತು ಮಾಡಿದ ಸುಲಿಗೆ ಒಂದು ಮಹಾನ್ ಸರ್ವಕಾಲಿಕ ದಾಖಲೆ. ಮಾಧ್ಯಮಗಳು ಆ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಯನ್ನು ಪ್ರಧಾನಿ ಮೋದಿ ತನ್ನ ಅತಿಮಾನುಷ ಶಕ್ತಿಯಿಂದ ಗುಣಪಡಿಸುತ್ತಾರೆ ಎನ್ನುವಂತೆ ಅತಿರಂಜಿತ ಸುದ್ದಿಗಳನ್ನು ಬಿತ್ತರಿಸಿದವು. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಕೋವಿಡ್ ಚಿಕಿತ್ಸೆಗೆ ಹೊಸ ಔಷಧಿಯೊಂದು ಅಭಿವೃದ್ಧಿಪಡಿಸಿದೆ ಎಂದು ಸುಳ್ಳು ಪ್ರಚಾರವನ್ನು ಮಾಡಲಾಯಿತು. ೨-ಡಿಜಿ ಎನ್ನುವ ಹೆಸರಿನ ಆ ಔಷಧಿಯೊಂದರ ಸುತ್ತ ಸುತ್ತಿಕೊಂಡಿರುವ ಅತಿರಂಜಿತ ಹಾಗು ರೋಚಕವಾದ ಕತೆಗಳು ಕೋವಿಡ್ ಸಾಂಕ್ರಮಿಕ ಸಮಯದಲ್ಲಿ ಭಾರೀ ಸದ್ದು ಮಾಡಿತ್ತು. ಈ ಔಷಧಿಯು ಒಂದು ದೊಡ್ಡ ಗೇಮ್ ಚೇಂಜರ್ ಎಂದು ವರ್ಣಿಸಲಾಗಿತ್ತು. ರಸಾಯನಿಕವಾಗಿ ಈ ಔಷಧಿಯು ೨-ಡಿಯೋಕ್ಸಿ-ಡಿ + ಗ್ಲೂಕೋಸ್ (೨-ಡಿಜಿ) ಎಂದು ಗುರುತಿಸಲಾಗಿದ್ದು ಇದು ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸುತ್ತದೆ ಎಂದು ಹೇಳಲಾಗಿತ್ತು. ಇದನ್ನು ಅವಿಷ್ಕರಿಸಿದವರು ಡಾ. ಅನಿಲ್ ಕುಮಾರ್ ಮಿಶ್ರ ಎಂಬ ಹೆಸರಿನ ಉತ್ತರಪ್ರದೇಶದ ಬಲಿಯ ಮೂಲದ ವಿಜ್ಞಾನಿ ಎಂದು ಬರೆಯಲಾಗಿತ್ತು. ಗೋರಖ್ಪುರ ವಿಶ್ವವಿದ್ಯಾಲಯದಿಂದ ೧೯೮೪ ರಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಮತ್ತು ೧೯೮೮ ರಲ್ಲಿ ಬನಾರಸ್ ಹಿಂದೂ ವಿವಿಯಿಂದ ಪಿಎಚ್ಡಿ ಪದವಿ ಪಡೆದ ಮಿಶ್ರ ಅವರು ಪ್ರಮುಖವಾಗಿ ಆಣ್ವಿಕ ಜೀವಶಾಸ್ತ್ರ ಮತ್ತು ಸಾವಯವ ರಸಾಯನ ವಿಶ್ಲೇಷಣಾ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ್ದಾರೆ.
ಪೋಸ್ಟ್ ಡಾಕ್ಟರೇಟ್ ಸಂಶೋಧನೆ ಮುಗಿಸಿದ ಮಿಶ್ರ ಅವರು ನಂತರ, ಫ್ರಾನ್ಸ್, ಕ್ಯಾಲಿಫೋರ್ನಿಯಾ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ನಂತಹ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ೧೯೯೭ ರಿಂದ ಅವರು ಡಿಆರ್ಡಿಒಗೆ ಸೀನಿಯರ್ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ೨-ಡಿಜಿ ಔಷಧಿಯು ಡಿ-ಗ್ಲುಕೋಸ್ನ ಅನುಕರಣೆಯಾಗಿದ್ದು, OH ಗ್ರುಪ್ ನ್ನು ಕಾರ್ಬನ್ ೨ (C೨) ಸರಪಳಿಯ ಸ್ಥಳದಲ್ಲಿ H ಪರಮಾಣು ರಿಪ್ಲೇಸ್ ಮಾಡುವ ರಸಾಯನಿಕ ಪ್ರಕ್ರೀಯೆಯಿಂದ ತಯ್ಯಾರಿಸಲಾಗುತ್ತದೆ. ಕಾರ್ಬನ್ ಸರಪಳಿಯ ೨ನೇ ಕಾರ್ಬನ್ ಪರಮಾಣುವಿನಿಂದ ಆಮ್ಲಜನಕದ ಗುಂಪನ್ನು ತೆಗೆದು ಹಾಕುವುದರಿಂದ ಈ ಔಷಧಿಗೆ ೨-ಡಿಯೋಕ್ಸಿ-ಡಿ-ಗ್ಲೂಕೋಸ್ ಎಂದು ಹೆಸರಿಸಲಾಗಿದೆ. ಇದು ಡಿ-ಗ್ಲೂಕೋಸ್ನ ಅನುಕರಣೆ ಆಗಿದ್ದು, ಕೊರೋನಾ ವೈರಸ್ ಇರುವ ಜೀವಕೋಶಕ್ಕೆ ಇದು ಸುಲಭವಾಗಿ ಪ್ರವೇಶಿಸುತ್ತದೆ.

ಸಾಮಾನ್ಯ ಗ್ಲೂಕೋಸ್ ವಸ್ತುವು ಜೀವಕೋಶಗಳಲ್ಲಿ ಎರಡು ಮೂರು ಇಂಗಾಲದ ಸಂಯುಕ್ತಗಳಾಗಿ ವಿಭಜನೆಯಾಗುತ್ತದೆ. ಅವುಗಳಲ್ಲಿ ಒಂದಾಗಿರುವ ಪೈರುವಿಕ್ ಆಮ್ಲದ ಪೈರುವೇಟ್ ಆನಾಯನ್ (CH3COCOO-) ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಈ ಜೀರ್ಣಕ್ರೀಯೆಯನ್ನು ಗ್ಲೈಕೋಲಿಸಿಸ್ ಚಯಾಪಚಯ ಪ್ರಕ್ರಿಯೆ ಎನ್ನುತ್ತಾರೆ. ಆಗ ಬಿಡುಗಡೆಯಾಗುವ ಶಕ್ತಿಯೆ ಪ್ರತಿ ಜೀವಿಗಳ ಬದುಕಿಗೆ ಆಸರೆಯಾಗುತ್ತದೆ.
ಕೊರೋನ ವೈರಸ್ ಸಹ ಒಮ್ಮೆ ಮನುಷ್ಯನ ಜೀವಕೋಶದಲ್ಲಿ ಒಳಹೊಕ್ಕ ಮೇಲೆ ಗ್ಲೈಕೋಲಿಸಿಸ್ ಚಯಾಪಚಯ ಪ್ರಕ್ರಿಯೆಯಿಂದ ಉತ್ಪನ್ನವಾಗುವ ಶಕ್ತಿಯನ್ನು ಉಪಯೋಗಿಸಿ ಬದುಕುಳಿಯುತ್ತದೆ. ಡಿ-ಗ್ಲುಕೋಸ್ ನಂತೆ ೨-ಡಿಜಿ ಕೂಡ ಗ್ಲೈಕೋಲಿಸಿಸ್ ಪ್ರಕ್ರೀಯೆಗೆ ಒಳಗಾಗದೆ ಭಿನ್ನವಾಗಿ ವರ್ತಿಸುತ್ತ ಕೊರೋನ ಒಳಹೊಕ್ಕಿರುವ ಜೀವಕೋಶದೊಳಗೆ ಸೇರಿಕೊಂಡು ಗ್ಲೂಕೋಸ್ ಕೊಡಮಾಡುವ ಶಕ್ತಿ (ಎನರ್ಜಿ) ಯ ಬಿಡುಗಡೆಯನ್ನು ತಡೆಹಿಡಿಯುತ್ತದೆ. ಇದು ಗ್ಲೈಕೋಲೈಸಿಸ್ ಚಯಾಪಚಯ ಪ್ರಕ್ರೀಯೆಗೆ ಒಳಪಡದೆ ಜೀವಕೋಶದಲ್ಲಿ ಯಾವುದೇ ಬಗೆಯ ಶಕ್ತಿಯನ್ನು ಬಿಡುಗಡೆ ಮಾಡುವುದಿಲ್ಲ. ಹಾಗಾಗಿˌ ಶಕ್ತಿಯ ಕೊರತೆಯಿಂದ ಜೀವಕೋಶದಲ್ಲಿರುವ ಕೊರೋನ ವೈರಸ್ ಒಂದು ವಾರದೊಳಗೆ ಸತ್ತು ಹೋಗುತ್ತದೆ. ಇದು ರೋಗಿಗೆ ಬೇಕಾಗುವ ಆಮ್ಲಜನಕದ ಅವಲಂಬನೆಯನ್ನು ಸಹ ತಗ್ಗಿಸುತ್ತದೆ. ಅಲ್ಲದೆ, ಇದೇ ಬಗೆಯ ಕಾರ್ಯವಿಧಾನದಿಂದ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯನ್ನು ಕೂಡ ತಡೆಯುತ್ತದೆ.
ಈ ಔಷಧಿಯು ಕೊರೋನ ವೈರಸ್ಸನ್ನು ನಾಶಗೊಳಿಸುವ ಕಾರ್ಯಾಚರಣೆಯು ಬಹಳ ಸರಳವಾಗಿದೆ: “ಮೋಸಗಾರನನ್ನು ಮೋಸಗೊಳಿಸಿ” ಎನ್ನುವ ತತ್ವದ ಆಧಾರದಲ್ಲಿ ಇದು ಕೆಲಸ ಮಾಡುತ್ತದೆ. ವೈರಸ್ ಎನ್ನುವ ಸೂಕ್ಷ್ಮಾಣುಜೀವಿ ಒಮ್ಮೆ ರೋಗಿಯ ದೇಹವನ್ನು ಪ್ರವೇಶಿಸಿದ ಮೇಲೆ ದೇಹದೊಳಗಿನ ಜೀವಕೋಶಗಳಿಗೆ ಮೋಸ ಮಾಡುತ್ತಾ ಅದು ದ್ವಿಗುಣ ಹಾಗು ಬಹುಗುಣಗೊಳ್ಳುತ್ತ ಹೋಗುತ್ತದೆ. ಈ ಬಹುಗುಳ್ಳುಗೊಳ್ಳುವ ಕ್ರೀಯೆಯಲ್ಲಿ ಆ ವೈರಸ್ ರೋಗಿಯ ಜೀವಕೋಶಗಲ್ಲಿರುವ ಪ್ರೋಟೀನ್ ನನ್ನು ಉಪಯೋಗಿಸುತ್ತದೆ. ತಜ್ಞರ ಪ್ರಕಾರ ವೈರಾಣುಗಳು ದ್ವಿಗುಣಗೊಳ್ಳಲು ಬೇಕಿರುವ ಶಕ್ತಿಯು ಗ್ಲೂಕೋಸ್ ಆಗಿರುವುರಿಂದ, ಈ ಔಷಧವು ಕೇವಲ “ಹುಸಿ” ಗ್ಲೂಕೋಸ್ ನಂತೆ ವರ್ತಿಸಿ ವೈರಣುವಿನ ಬೆಳವಣಿಗೆ ಹಾಗು ಬಹುಗುಣಗೊಳ್ಳುವಿಕೆಯನ್ನು ಸ್ಥಗಿತಗೊಳಿಸುತ್ತದೆ. ವೈರಾಣುವಿನ ತ್ವರಿತ ಗುಣಾಕಾರವನ್ನು ನಿಲ್ಲಿಸುವ ಈ ಕ್ರೀಯೆಯು ‘ಮೋಸಗಾರನಿಗೆ ಮೋಸ ಮಾಡುವುದು’ ಆಗಿದೆ. ಇನ್ನು ಅಳಿದುಳಿದ ವೈರಾಣುಗಳು ನಮ್ಮ ದೇಹದಲ್ಲಿ ಸಮಯಕ್ಕನುಸಾರವಾಗಿ ಉತ್ಪತ್ತಿಯಾಗಿರುವ ಪ್ರತಿಕಾಯಗಳ(ಆಂಟಿಬಾಡಿ) ದಾಳಿಗೆ ಸುಲಭವಾಗಿ ಸಿಕ್ಕು ನಾಶವಾಗುತ್ತವೆ.

ಈ ಔಷಧಿ ಕೋವಿಡ್ ಗುಣಪಡಿಸುವುದು ಹೇಗೆ?
೨-ಡಿಜಿ ಔಷಧಿಯು ಕೋವಿಡ್ ಚಿಕಿತ್ಸೆಗಾಗಿ ಬಳಸಬಹುದು ಎಂದು ಈ ಎರಡು ವರ್ವಗಳ ಹಿಂದೆ ಅತಿರಂಜಿತ ಪ್ರಚಾರ ನೀಡಲಾಗಿತ್ತು. ಆದರೆ, ವಾಸ್ತವದಲ್ಲಿ ಇದೊಂದು ಸೈಟೊಟಾಕ್ಸಿಕ್ ಆಂಟಿ-ಕ್ಯಾನ್ಸರ್ ಔಷಧಿಯಾಗಿ ಬಹಳ ವರ್ಷಗಳಿಂದ ಬಳಕೆಯಲ್ಲಿದ್ದು ಇದನ್ನು ಡಿಆರ್ಡಿಒ ಅವಿಷ್ಕರಿಸಿದೆ ಎನ್ನುವುದು ಸಂಪೂರ್ಣ ಸುಳ್ಳು ಅಥವ ಅಪೂರ್ಣ ಸುದ್ದಿಯಾಗಿದೆ. ಡಿಆರ್ಡಿಒ ಸಂಸ್ಥೆಯು ಈ ಔಷಧದ ಸಿಂಥಟಿಕ್ ಮಾರ್ಗವನ್ನು ಮಾತ್ರ ಮಾರ್ಪಡಿಸಿದೆ. ಆದರೆ ಭಾರತೀಯ ಮಾಧ್ಯಮಗಳು ಇದಕ್ಕೆ ‘ದೇಶಭಕ್ತ’ ಎಂದು ಕೊರೋನ ಸಂದರ್ಭದಲ್ಲಿ ಹಣೆಪಟ್ಟಿ ನೀಡಿದ್ದವು. ಆದರೆ ಈ ಔಷಧಕ್ಕೆ ಸಂಬಂಧಿಸಿದ ಕೆಲವು ಅಸಲಿ ಸಂಗತಿಗಳನ್ನು ನಾವು ತಿಳಿದುಕೊಳ್ಳಲೇಬೇಕಿದೆ.
ಕೋವಿಡ್ ಸಂದರ್ಭದಲ್ಲಿ ಸ್ಪಷ್ಟವಾಗಿ ಇದನ್ನು ಬಹಳ ಎಚ್ಚರಿಕೆಯಿಂದ ಮತ್ತು ಕೇವಲ ತುರ್ತು ಬಳಕೆಗಾಗಿ ಮಾತ್ರ ಅನುಮೋದಿಸಲಾಗಿತ್ತು. ಹಾಗೆಯೇ ಇದು ಹೊಸ ಔಷಧಿಯಲ್ಲ ಎನ್ನುವ ಸಂಗತಿ ನಿಮಗೆಲ್ಲ ತಿಳಿದಿರಲಿ. ಸೆಲ್ಯುಲಾರ್ ಚಯಾಪಚಯ ಕ್ರೀಯೆಯ ಸೆಲ್ ಮಾರ್ಕರ್ ಆಗಿ ಮತ್ತು ಕ್ಯಾನ್ಸರನ ಅದರನ್ನೂ ವಿಶೇಷವಾಗಿ ಸ್ತನಕ್ಕೆ ತಗುಲಿದ ದೊಡ್ಡ ಕ್ಯಾನ್ಸರ್ ಗೆಡ್ಡೆಗಳಿಗೆ ಉದ್ದೇಶಿತ (targeted) ಕೀಮೋಥೆರಪಿಯಲ್ಲಿ ಇದು ಮೊದಲಿನಿಂದ ಬಳಕೆಯಲ್ಲಿದೆ. ೨-ಜಿಡಿಯು ರೋಗಿಯ ಜೀವಕೋಶದ ಚಯಾಪಚಯ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ. ಆ ಮೂಲಕ ಮುಖ್ಯವಾಗಿ, ಕ್ಯಾನ್ಸರ್ ಸೋಂಕಿತ ಅಂಗಾಂಶಗಳ ಆಮ್ಲಜನಕದ ಬೇಡಿಕೆಯನ್ನು ಬಹುಶಃ ತಗ್ಗಿಸುತ್ತದೆ. ಚಯಾಪಚಯ ಚಕ್ರದ ನಿರ್ಬಂಧದಿಂದಾಗಿ ಜೀವಕೋಶದಲ್ಲಿ ಬೆಳೆದ ಕ್ಯಾನ್ಸರ್ ಸೋಂಕಿತ ಗಡ್ಡೆಯು ಒಟ್ಟಾರೆಯಾಗಿ ಸಾಯುತ್ತದೆ.
ಡಿಆರ್ಡಿಒ ಸಂಸ್ಥೆಯು ಈ ಔಷಧಿ ಕೋವಿಡ್ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡುವ ಮುನ್ನ ಸುಮಾರು ೨೦೦ ಸೌಮ್ಯ ಮತ್ತು ಮಧ್ಯಮ ಕೋವಿಡ್ ಸೋಂಕಿತ ರೋಗಿಗಳ ಮೇಲೆ ಒಂದು ಸಣ್ಣ ಅಧ್ಯಯನವನ್ನು ನಡೆಸಿತ್ತು. ಅಧ್ಯಯನದ ಸಂಪೂರ್ಣ ವಿನ್ಯಾಸ (ಸ್ಟಡಿ ಡಿಜೈನ್) ನಮಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆˌ ಈ ಔಷಧಿಯನ್ನು ಒಂದು ಪರಿಪೂರ್ಣ ಔಷಧಿಯಾಗಿ ಬಳಸದೆ ಕೇವಲ ಪೂರಕ ಚಿಕಿತ್ಸೆಯಾಗಿ ಮಾತ್ರ ಬಳಸುವುದು ಯೋಗ್ಯವಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿ ಏನೆಂದರೆ, ಮನುಷ್ಯನ ಜೀವಕೋಶಗಳು ಬದುಕುಳಿಯಲು ಆಮ್ಲಜನಕದ ಅಗತ್ಯವಿರುತ್ತದೆ. ಆಮ್ಲಜನಕ ಚಿಕಿತ್ಸೆಯನ್ನು ಬದಲಿಸಲು ಈ ಔಷಧಿಯನ್ನು ಮಾತ್ರ ಅವಲಂಬಿಸುವುದು ಉಚಿತ ನಿರ್ಧಾರವಾಗುವುದಿಲ್ಲ. ಈ ಸಂಶೋಧನೆಯ ಕುರಿತು
ಹೆಚ್ಚಿನ ಸಂಗತಿಗಳು ಇಂದಿಗೂ ಲಭ್ಯವಾಗಿಲ್ಲ. ಹಾಗೊಂದು ವೇಳೆ ಅವು ಲಭ್ಯವಾದರೆ ಅದರ ವ್ಯಾಪಕ ಬಳಕೆಯನ್ನು ಪರಿಗಣಿಸಬಹುದಾಗಿದೆ.
ಇದು ಸೈಟೊಟಾಕ್ಸಿಕ್ ಔಷಧಿಯಾಗಿರುವುದರಿಂದ ನ್ಯೂರಾನ್ಗಳಂತಹ ಗ್ಲೂಕೋಸ್ ಅವಲಂಬಿತ ಜೀವಕೋಶಗಳ ಸುರಕ್ಷತಾ ವಿವರವನ್ನು ಈ ಸಂಶೊಧನೆಯು ಸ್ಪಷ್ಟಪಡಿಸಿಲ್ಲ. ೨-ಜಿಡಿ ಔಷಧಿಯ ಸುತ್ತಲೂ ಸಾಕಷ್ಟು ತಪ್ಪು ಮಾಹಿತಿಗಳನ್ನು ಮಾಧ್ಯಮಗಳು ಹರಿಬಿಟ್ಟಿವೆ. ಹಾಗಾಗಿ ಒಂದು ಔಷಧಿಯ ವೈಜ್ಞಾನಿಕ ಪೂರ್ವಾಪರಗಳನ್ನು ತಿಳಿದುಕೊಳ್ಳದೆ ಹಾರಿಕೆಯ ಮತ್ತು ವೈಭವೀಕರಣದ ಸುದ್ದಿಗಳಿಗೆ ನಾವು ಗಮನ ನೀಡಬೇಕಿಲ್ಲ.