ಮೈಸೂರು : ದ್ವೇಷದ ರಾಜಕಾರಣವನ್ನ ನಾವು ಮಾಡಲ್ಲ, ನಮಗೆ ಓಟ್ ಹಾಕಿದ ಮತದಾರರನ್ನ ಗೌರವಿಸಿ, ಓಟ್ ಹಾಕದ ಮತದಾರರನ್ನು ಅವಮಾನಿಸಲ್ಲ ಎಂದು ಕೆ.ಆರ್. ನಗರದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಕೆ.ಆರ್. ನಗರದ ನೂತನ ಶಾಸಕ ಡಿ. ರವಿಶಂಕರ್ ಅವರ ತಂದೆ ದೊಡ್ಡಸ್ವಾಮಿ ಗೌಡ ಹೇಳಿಕೆ ನೀಡಿದ್ದಾರೆ. ನಾವು ಹಿಂದಿನ ಶಾಸಕರಂತೆ ನಡೆದುಕೊಳ್ಳಲ್ಲ, ನಮ್ನನ್ನ ಬೆಂಬಲಿಸಿರಲಿ, ಬಿಡಲಿ ಅವರೆಲ್ಲಾ ನಮ್ಮ ಕ್ಷೇತ್ರದ ಮತದಾರರು.
ನಮ್ಮನ್ನು ಬೆಂಬಲಿಸಿಲ್ಲ ಅನ್ನೋ ಕಾರಣಕ್ಕೆ ಅವರನ್ನು ನಿರ್ಲಕ್ಷ್ಯ ಕೂಡ ಮಾಡಲ್ಲ ಎಂದು ಹೇಳುವ ಮೂಲಕ ಮಾಜಿ ಶಾಸಕ ಸಾರಾ ಮಹೇಶ್ ಗೆ ದೊಡ್ಡಸ್ವಾಮಿ ಗೌಡ ಟಾಂಗ್ ನೀಡಿದರು. ಎಲ್ಲರನ್ನೂ ಸಮಾನವಾಗಿ ನೋಡ್ತೇವೆ, ಎಲ್ಲಾ ಕಡೆ ಅಭಿವೃದ್ಧಿ ಮಾಡ್ತೇವೆ, ನಾವು ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಕ್ಷೇತ್ರದ ಎಲ್ಲಾ ಮತದಾರರ ಪಾಲಿಗೂ ರವಿಶಂಕರ್ ಶಾಸಕರು. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.
ಕೃತಜ್ಞತಾ ಸಮಾರಂಭದಲ್ಲಿ ಹಿಂದಿನ ಶಾಸಕರು ತಾರತಮ್ಯ ಮಾಡುತ್ತಿದ್ದರೆಂದು ಹೇಳುವ ಮೂಲಕ ಮಾಜಿ ಶಾಸಕ ಸಾರಾ ಮಹೇಶ್ ಗೆ ದೊಡ್ಡಸ್ವಾಮಿ ಗೌಡ ತಿರುಗೇಟು ನೀಡಿದರು. ಕೃತಜ್ಞತಾ ಸಮಾರಂಭದಲ್ಲಿ ಸಚಿವ ವೆಂಕಟೇಶ್, ಶಾಸಕರಾದ ಡಿ. ರವಿಶಂಕರ್, ಹರೀಶ್ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.