ಬೆಂಗಳೂರು : ಜೂ.1: ಜೀ ಕನ್ನಡದಲ್ಲಿ ಪ್ರಸಾರ ವಾಗುವ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಜೀವನ ಅನಾವರಣವಾಗುತ್ತಿದೆ. ಕಿರುತೆರೆಯ ವೀಕ್ಷಕರನ್ನು ಸೆಳೆದಿರುವ ಈ ವೀಕೆಂಡ್ ಶೋದಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ. ಇದೀಗ ಕನಕಪುರ ಬಂಡೆ, ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಕರ್ನಾಟಕ ಕಾಂಗ್ರೆಸ್ನ ಪ್ರಭಾವಿ ನಾಯಕ, ಡಿಸಿಎಂ ಡಿಕೆ ಶಿವಕುಮಾರ್ ಅವರ ಜೀವನ ಮತ್ತು ರಾಜಕೀಯ ಏರಿಳಿತದ ಸಂಚಿಕೆಗಳು ಶೀಘ್ರದಲ್ಲಿಯೇ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಪ್ರಸಾರವಾಗಲಿವೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಟಿವಿ ಶೋದಲ್ಲಿ ಟ್ರಬಲ್ ಶೂಟರ್, ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಸಾಧಕರ ಕುರ್ಚಿಯಲ್ಲಿ ಆಸಿನರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ಜೂ.10 ರಂದು ಪ್ರಸಾರ ಸಾಧ್ಯತೆ
ಘಟಾನುಘಟಿ ನಾಯಕನ ನೈಜ ಜೀವನ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಅನಾವರಣಗೊಳ್ಳಲಿದೆ. ರಾಜಕೀಯ ಮಾತ್ರವಲ್ಲದೆ, ವೈಯಕ್ತಿಕ ಜೀವನ, ಉದ್ಯಮ, ಅನುಭವಿಸಿದ ಯಾತನೆ ಎಲ್ಲವನ್ನೂ ವೀಕೆಂಡ್ ಶೋದಲ್ಲಿ ಅನಾವರಣ ಮಾಡಲಿದ್ದಾರೆ ಕನಕಪುರ ಬಂಡೆ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್. ಹಾಗಾದರೆ, ಇವರ ಏಪಿಸೋಡ್ ಯಾವಾಗ ಶುರು? ಸದ್ಯಕ್ಕೆ ವಾಹಿನಿ ಕಡೆಯಿಂದ ಇದಿನ್ನು ಖಾತರಿ ಆಗಿಲ್ಲ. ಪ್ರಾಥಮಿಕ ವರದಿಯ ಪ್ರಕಾರ ಈ ಶನಿವಾರ ಮತ್ತು ಭಾನುವಾರ ಡಿಕೆಶಿ ಅವರ ವೀಕೆಂಡ್ ಶೋನ ಚಿತ್ರೀಕರಣ ನಡೆಯಲಿದೆ. ಅದಾದ ಬಳಿಕ ಮುಂದಿನ ವಾರ ಜೂನ್ ಎರಡನೇ ವಾರದಲ್ಲಿ ಪ್ರಸಾರವಾಗಲಿದೆ.
			
                                
                                
                                
