ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ (LokSabhaelection) ಯನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ (BJP) ಅಧಿಕಾರದಲ್ಲಿರುವ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು. ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತ ನಂತರ ಪ್ರಧಾನಿ ಮೋದಿ ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಅಜೆಂಡಾಗಳ ಸಭೆ ನಡೆಸಿದರು.

ನಿನ್ನೆ ನೂತನ ಸಂಸತ್ ಭವನವನ್ನು ಬಹಳ ಸಂಭ್ರಮದಿಂದ ಅನಾವರಣಗೊಳಿಸಿದ ನಂತರ ಪ್ರಧಾನಿ ಮೋದಿ ಪಕ್ಷದ ಪ್ರಧಾನ ಕಚೇರಿಯನ್ನು ತಲುಪಿದರು. ಹಲವಾರು ಯೋಜನೆಗಳು ಮತ್ತು ಇತರ ವಿಷಯಗಳಲ್ಲಿ ಬಿಜೆಪಿ ಪಕ್ಷದ ಆಡಳಿತದ ರಾಜ್ಯಗಳ ಕಾರ್ಯಕ್ಷಮತೆಯನ್ನು ಚರ್ಚಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಚುನಾವಣೆಗೆ ಒಳಪಟ್ಟಿರುವ ಸಂಸದರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಳು, ಬಡವರ ಕಲ್ಯಾಣ ಯೋಜನೆಗಳ ಪ್ರಗತಿಯ ಕುರಿತು ತಮ್ಮ ವರದಿ ಕಾರ್ಡ್‌ಗಳನ್ನು ಮಂಡಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಅಜೆಂಡಾಗಳ ಸಭೆಯಲ್ಲಿ, ಇತ್ತೀಚಿನ ಕರ್ನಾಟಕ ಸೋಲು ಮತ್ತು ಇತರ ಉದಯೋನ್ಮುಖ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ 2024 ರ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು.
ಬಡವರಿಗೆ ಕಲ್ಯಾಣ ಯೋಜನೆಗಳನ್ನು ಕೊಂಡೊಯ್ಯಲು ಮತ್ತು ಸಂವಹನ ಮತ್ತು ‘ಜನ-ಅಭಿಯಾನ’ದಂತಹ ವಿವಿಧ ಸುಲಭ ಸಂವಹನ ವಿಧಾನಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವಂತೆ ಪ್ರಧಾನಿ ಮೋದಿ ಬಿಜೆಪಿ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.