ಬಿಜೆಪಿ ಕಾರ್ಯಕರ್ತರು ಜೈ ಭಜರಂಗಿ ಹಾಗು ಜೈ ಶ್ರೀರಾಮ್ ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ಎದುರಾಳಿಗಳನ್ನು ಅಣಿಯುವ ಕೆಲಸ ಮಾಡುತ್ತಾರೆ. ಸಾಮಾನ್ಯರು ಹನುಮಂತ ಹಾಗು ಶ್ರೀರಾಮನನ್ನು ಪೂಜಿಸಿದರೆ, ಬಿಜೆಪಿ ಪಕ್ಷ ಅದನ್ನು ಧರ್ಮ ಸೂಚಕವಾಗಿಯೂ ಮತಗಳನ್ನು ಸೆಳೆಯುವು ಅಸ್ತ್ರಗಳನ್ನಾಗಿಯೂ ಮಾಡಿಕೊಂಡಿತ್ತು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೈ ಭಜರಂಗಬಲಿ ಎಂದು ಸ್ವತಃ ಪ್ರಧಾನಿಯೇ ಪುಂಕಾನುಪುಂಕವಾಗಿ ಭಾಷಣ ಮಾಡಿದರೂ ಹಿಂದೂಗಳ ಶಕ್ತಿ ಕಾಂಗ್ರೆಸ್ ಪಾಲಾಗಿತ್ತು. ಬಿಜೆಪಿ ಮಾಡಿದ ತಂತ್ರಗಾರಿಕೆಗಳೆಲ್ಲವೂ ನೆಲ ಕಚ್ಚಿದ್ದವು. ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ಅಯೋಧ್ಯೆ ರಾಮ ಮಂದಿಯ ಮುಂದಿಟ್ಟು ಮತ ಕೇಳಲು ಸಜ್ಜಾಗಿರುವ ಕಮಲ ಪಾಳಯಕ್ಕೆ ಕಾಂಗ್ರೆಸ್ ಈಗಲೇ ಸಡ್ಡು ಹೊಡೆದು ನಿಂತಿದೆ. ಹನುಮಂತನ ಬಳಿಕ ಶ್ರೀರಾಮನೂ ಕೂಡ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾನೆ ಎನ್ನುವಂತಾಗಿದೆ.
ಸಿದ್ದರಾಮಯ್ಯನ ಪ್ರಮಾಣ ವಚನಕ್ಕೆ ಶ್ರೀರಾಮ!!

ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಬೃಹತ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಸುಮಾರು 20 ಅಡಿ ಎತ್ತರದ ಬೃಹತ್ ಶ್ರೀರಾಮಚಂದ್ರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕಂಠೀರವ ಸ್ಟೇಡಿಯಂ ಮುಖ್ಯ ದ್ವಾರದ ಮುಂಭಾಗ ಮಾವಳ್ಳಿ ನಿವಾಸಿ ಶ್ರೀನಿವಾಸ್ ಎಂಬುವರು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಶ್ರೀರಾಮನಂತೆ ಸಿದ್ದರಾಮಯ್ಯ ಕೂಡ ಒಳ್ಳೆಯ ಆಡಳಿತ ಕೊಡಬೇಕು. ಬಡವರ ಏಳಿಗೆಗಾಗಿ ಒಳ್ಳೆಯ ಕಾರ್ಯಕ್ರಮ ತರಬೇಕು. ಶ್ರೀರಾಮ ಕೂಡ ಒಂದು ರಾಜ್ಯದ ರಾಜನಾಗಿದ್ದ. ಸಿದ್ದರಾಮಯ್ಯ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಆಗುತ್ತಿದೆ. ಶ್ರೀರಾಮನ ಆಶೀರ್ವಾದ ಸಿದ್ದರಾಮಯ್ಯ ಮೇಲೆ ಇರಲಿ. ರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಡಲಿ ಅನ್ನೋ ಕಾರಣಕ್ಕೆ ಶ್ರೀರಾಮ ಮೂರ್ತಿ ಪ್ರತಿಷ್ಠಾಪಿಸಿದ್ದಾಗಿ ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಶ್ರೀರಾಮನ ಮೂರ್ತಿ ತರಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಲೋಕಸಭಾ ಚುನಾವಣಾ ಅಸ್ತ್ರ ಕಿತ್ತುಕೊಂಡ ಕಾಂಗ್ರೆಸ್..!

ಮುಂದಿನ ವರ್ಷ ಅಂದರೆ 2024ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ಕೇಂದ್ರ ಸರ್ಕಾರ ಈಗಾಗಲೇ ಜನ ವಿರೋಧಿ ನೀತಿಗಳಿಂದ ದೇಶದ ಜನರ ವಿಶ್ವಾಸ ಕಳೆದುಕೊಂಡಿದ್ದು, ಮತ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಧರ್ಮದ ಆಧಾರದಲ್ಲಿ ಮತ ಕೇಳುವ ಜನರಿಗೆ ಕರ್ನಾಟಕದಲ್ಲಿ ತಕ್ಕ ಉತ್ತರ ನೀಡುವ ಮೂಲಕ ಕನ್ನಡಿಗರು ಈಗಾಗಲೇ ಮಂಗಳಾರತಿ ಮಾಡಿದ್ದಾರೆ. ಈ ವರ್ಷಾಂತ್ಯಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ ಎಂದು ವಿಧಾನಸಭಾ ಚುನಾವಣೆಯಲ್ಲೇ ಭಾಷಣಕ್ಕೆ ಬಳಸಿಕೊಂಡಿದ್ದರು. ಆದರೆ ಈ ವರ್ಷಾಂತ್ಯಕ್ಕೆ ಉದ್ಘಾಟನೆ ಆದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನನ್ನೇ ಹಿಡಿದು ಮತ ಸೆಳೆಯುವ ಭಾರತೀಯ ಜನತಾ ಪಾರ್ಟಿ ತಂತ್ರಕ್ಕೆ ಕಾಂಗ್ರೆಸ್ ತಿರುಮಂತ್ರ ಮಾಡಿದೆ. ಸಿದ್ದರಾಮಯ್ಯನ ಪ್ರಮಾಣ ವಚನಕ್ಕೇ ಶ್ರೀರಾಮ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಸುವ ಮೂಲಕ ನಾವೂ ಕೂಡ ಹಿಂದೂಗಳೇ, ಶ್ರೀರಾಮನ ಆರಾಧಾಕರು ಎನ್ನುವುದನ್ನು ಜಗತ್ತಿಗೆ ಸಾರುವ ಕೆಲಸ ಮಾಡ್ತಿದೆ.
ಸಾಕಷ್ಟು ಆಯಾಮಗಳಲ್ಲಿ ಕಾಂಗ್ರೆಸ್ ಪ್ರಬಲ..!

2014ರಲ್ಲಿ ಜಾಲತಾಣಗಳು ಆರಂಭ ಆದ ಕೂಡಲೇ ಬಿಜೆಪಿ ಪಾಲಿಗೆ ರಸದೌತಣ ಎನ್ನುವಂತಾಗಿತ್ತು. ಸಾಮಾಜಿಕ ಜಾಲತಾಣದ ಮೇಲೆ ಹಿಡಿತ ಸಾಧಿಸಿದ್ದ ಬಿಜೆಪಿ ತಾನೇ ಸರ್ವ ಶ್ರೇಷ್ಠ ಅನ್ನೋ ಭ್ರಮೆಯಲ್ಲಿ ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗಿತ್ತು. 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮೇಲೆ ಹಿಡಿತ ಸಾಧಿಸಿತ್ತಾದರೂ ಬಿಜೆಪಿ ಪಕ್ಷದ ಅಬ್ಬರಕ್ಕೆ ತಡೆ ಒಡ್ಡುವಷ್ಟು ಬಲಾಢ್ಯ ಆಗಿರಲಿಲ್ಲ. ಅದರಲ್ಲೂ ಪುಲ್ವಾಮಾದಲ್ಲಿ ನಡೆದ ಸೈನಿಕರ ಹತ್ಯಾಕಾಂಡವನ್ನು ಬಳಸಿಕೊಂಡ ಬಿಜೆಪಿ ಗೆದ್ದು ಬೀಗಿತ್ತು. ಇದೀಗ ಪರಿಸ್ಥಿತಿ ಭಿನ್ನವಾಗಿದ್ದು, ಕಾಂಗ್ರೆಸ್ ಕೂಡ ಸಾಮಾಜಿಕ ತಾಲತಾಣದ ಮೇಲೆ ದರ್ಬಾರ್ ಮಾಡುವುದನ್ನು ಕಲಿತಿದೆ. ವಾಟ್ಸ್ಆ್ಯಪ್ ಯೂನಿರ್ಸಿಟಿಯಿಂದ ಹೊರ ಬೀಳುವ ಸುಳ್ಳುಗಳ ಸರಣಿಯನ್ನು ಸತ್ಯವೆಂಬ ಅಸ್ತ್ರದ ಮೂಲಕ ಎದುರಿಸುವುದನ್ನು ಕಲಿತಿದೆ. ಸುಳ್ಳನ್ನು ಹಬ್ಬಿಸಿದಷ್ಟೇ ವೇಗವಾಗಿ ಸತ್ಯ ಏನು ಅನ್ನೋದನ್ನು ತೆರೆದಿಡುವ ಕೆಲಸ ಮಾಡ್ತಿದೆ. ಇನ್ನು ಧರ್ಮ, ಜಾತಿ ವಿಚಾರದಲ್ಲಿ ಮತಗಳು ಬಾರದೆ ಹೋದರೆ ಬಿಜೆಪಿ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುವುದು ನಿಶ್ಚಿತ. ಇಂದು ದೇಶದ ವಿವಿಧ ರಾಜ್ಯಗಳಿಂದ ಬಿಜೆಪಿ ವಿರೋಧಿ ನಾಯಕರು ಭಾಗಿಯಾಗುತ್ತಿದ್ದು, ದೇಶಕ್ಕೆ ಸಂದೇಶ ಕಳುಹಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಶ್ರೀರಾಮ ಮೂರ್ತಿಯೂ ಒಂದು ಎನ್ನಬಹುದು.
ಕೃಷ್ಣಮಣಿ