ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅಧಿಕಾರ ನಡೆಸಲು ಸಿದ್ಧತೆ ಆರಂಭ ಮಾಡಿರುವ ಸಿಎಂ ಸ್ಥಾನಕ್ಕೆ ಯಾರು ಬೇಕು ಅನ್ನೋ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲಾ ಶಾಸಕರನ್ನು ಶಾಂಗ್ರಿಲಾ ಹೋಟೆಲ್‌ನಲ್ಲಿ ಸೇರಿಸಿದ್ದ ನಾಯಕರು ರಾಜ್ಯದಲ್ಲೇ ಒಮ್ಮತದ ಆಯ್ಕೆ ಮಾಡುವಲ್ಲಿ ಗೊಂದಲಕ್ಕೆ ಈಡಾಗಿದ್ದಾರೆ. ಕೆಲವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರೆ ಇನ್ನೂ ಕೆಲವರು ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಮಾತನ್ನಾದ್ದಾರೆ. ಯಾರಾದರೂ ಸಿಎಂ ಆಗಲಿ, ಒಳ್ಳೇ ಸರ್ಕಾರ ಬರಲಿ ಎನ್ನುವ ಮನಸ್ಸಿದ್ದವರು, ಸಿಎಂ ಯಾರಾಗಬೇಕು ಅನ್ನೋ ನಿರ್ಧಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಗೊಂದಲಗಳು ಇಲ್ಲದೆ ಸಿಎಂ ಅಭ್ಯರ್ಥಿ ಆಯ್ಕೆಯಾದರೆ ಉತ್ತಮ ಅನ್ನೋ ಆಯ್ಕೆಯನ್ನು ಮಾಡಿದ್ದಾರೆ. ಇದೀಗ ಅನಿವಾರ್ಯವಾಗಿ ಮುಖ್ಯಮಂತ್ರಿ ಚೆಂಡು ಹೈಕಮಾಂಡ್ ಅಂಗಳಕ್ಕೆ ಬಿದ್ದಿದ್ದು, ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲ ಸೃಷ್ಟಿಗೆ ಕಾರಣವಾಗಿದೆ.
ಹೋಟೆಲ್ ಒಳಗೆ ಫ್ರೆಂಡ್‌ಶಿಪ್ ಹೊರಗಡೆ ದಂಗಲ್..
ಶಾಂಗ್ರಿಲಾ ಹೋಟೆಲ್‌ನಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ನಾಯಕರು ಹಾಗು ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಆಗಮಿಸಿದ್ದ ಅಬ್ಸರ್ವರ್ ತಂಡ ಪ್ರತಿ ಶಾಸಕರಿಂದಲೂ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿತ್ತು. ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾ, ಗೆಲುವಿನ ಸಂಭ್ರಮದಲ್ಲಿದ್ದರು. ಸಿಎಂ ಆಯ್ಕೆಗೆ ಪಾರದರ್ಶಕ ಪ್ರಕ್ರಿಯೆ ಶುರುವಾಗಿದ್ದು, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಪೈಪೋಟಿ ನಡೆದಿದೆ. ಹೋಟೆಲ್ ಹೊರಗಡೆ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಬೆಂಬಲಿಗರು ಜಮಾಯಿಸಿ ತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗುತ್ತಾ ಕಾಂಗ್ರೆಸ್ ನಾಯಕರಿಗೆ ಮುಜುಗರನ್ನೂ ಸೃಷ್ಟಿಸಿದ್ದಾರೆ. ಜಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್ ಸೇರಿದಂತೆ ಬಹುತೇಕ ಸಿದ್ದರಾಮಯ್ಯ ಬೆಂಬಲಿಗರು ಕಾರ್ಕಕರ್ತರನ್ನು ಸಮಾಧಾನ ಮಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಮುಜುಗರಕ್ಕೆ ಈಡಾದ ಘಟನೆ ನಡೆಯುತ್ತಿದೆ.
ಡಿಕೆ ಶಿವಕುಮಾರ್ ಹುಟ್ಟುಹಬ್ಬ ಆಚರಣೆ, ಬೆಂಬಲಿಗರ ಸಂಭ್ರಮ..
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಡಿ ಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನಲೆಯಲ್ಲಿ, ಸದಾಶಿವನಗರದ ನಿವಾಸದ ಬಳಿ ಡಿ.ಕೆ ಶಿವಕುಮಾರ್ ಕಟೌಟ್‌ಗಳು ರಾರಾಜಿಸುತ್ತಿದೆ. ರಸ್ತೆಯುದ್ದಕ್ಕೂ ಹುಟ್ಟು ಹಬ್ಬದ ಶುಭಾಶಯ ಕೋರಿ ಬ್ಯಾನರ್ ಕಟೌಟ್ ಹಾಕಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಸೇರಿದಂತೆ ಸಾಕಷ್ಟು ಜನರು ಕಟೌಟ್ ಹಾಕಿ ಶುಭಾಶಯ ಕೋರಿದ್ದಾರೆ. ಭಿನ್ನ ವಿಭಿನ್ನ ಕೇಕ್‌ಗಳನ್ನು ತಂದು ಡಿ.ಕೆ ಶಿವಕುಮಾರ್ ಕೈಯಲ್ಲಿ ಕೇಕ್ ಕತ್ತರಿಸಿ ಜೈಕಾರ ಮೊಳಗಿಸಿದ್ದಾರೆ. ಅತ್ತ ಸಿದ್ದರಾಮಯ್ಯ ನಿವಾಸದಲ್ಲೂ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬೆಂಬಲ ವ್ಯಕ್ತಪಡಿಸಲು ನೂರಾರು ಜನರು ಜಮಾಯಿಸಿದ್ದಾರೆ. ಸಿಎಂ ಆಗುತ್ತಾರೆ ಅನ್ನೋ ಆಶಯದಿಂದ ಹೂ ಗುಚ್ಛ ಹಿಡಿದು ಸಿದ್ದರಾಮಯ್ಯಗೆ ಶುಭ ಕೋರುತ್ತಿದ್ದಾರೆ.
ಯಾರಾಗ್ತಾರೆ ಮುಖ್ಯಮಂತ್ರಿ..? ಆಯ್ಕೆಗೆ ಇರುವ ಸಮಸ್ಯೆ ಆದರೂ ಏನು..?
ಸಿಎಂ ಯಾರಾಗಬೇಕು ಎನ್ನುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ, ಹೈಕಮಾಂಡ್ ನಾಯಕರ ಬಳಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಅಭಿಪ್ರಾಯ ತಿಳಿಸಿದ್ದೇನೆ ಎಂದಿದ್ದಾರೆ. ಇನ್ನು ಕೋಲಾರದಿಂದ ಆಯ್ಕೆಯಾಗಿರುವ ಕೊತ್ತೂರು ಮಂಜುನಾಥ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇನ್ನು ಡಾ ಜಿ ಪರಮೇಶ್ವರ್ ಕೂಡ ಸಿಎಂ ಸ್ಥಾನ ಸಿಗಲಿ, ಹೈಕಮಾಂಡ್ ನಿರ್ಧಾರದಂತೆ ಆಯ್ಕೆಯಾಗಲಿದೆ ಎಂದಿದ್ದಾರೆ. ಅದೇ ರೀತಿ ಸಾಕಷ್ಟು ಜನರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅನ್ನೋ ಆಶಯದಲ್ಲೇ ಇದ್ದಾರೆ. ಆದರೆ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್, ಸಾಕಷ್ಟು ನಾಯಕರಿಗೆ ಧನಸಹಾಯ ಮಾಡಿದ್ದು, ಡಿ.ಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅನ್ನೋ ಆಯ್ಕೆ ಗೊಂದಲ್ಲಿ ಇದ್ದಾರೆ. ಇದೀಗ ಸಿದ್ದರಾಮಯ್ಯ ಆಯ್ಕೆಯಾಗಬೇಕು ಅನ್ನೋ ಮನಸ್ಸಿದ್ದವರು ಕೂಡ ಹೈಕಮಾಂಡ್ ನಿರ್ಧಾರದ ಮೊರೆ ಹೋಗಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿ ಬಹುತೇಕ ಎರಡು ಬಣಗಳಾಗಿ ಬದಲಾಗಿದ್ದು, ಹೈಕಮಾಂಡ್ ಬಣ ಕೂಡ ಸೇರ್ಪಡೆ ಆಗಿದೆ. ಡಿ.ಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯ, ಇಬ್ಬರಲ್ಲಿ ಯಾರು ಸಿಎಂ ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ಆಗಲಿದೆ ಅನ್ನೋ ಬಗ್ಗೆ ಚರ್ಚೆ ನಡೆಸಿ ಇಂದು ಅಥವಾ ನಾಳೆ ಹೈಕಮಾಂಡ್ ಸಂದೇಶ ಹೊರಬೀಳಲಿದೆ ಅನ್ನೋ ಮಾಹಿತಿ ಸಿಕ್ಕಿದೆ.
ಕೃಷ್ಣಮಣಿ