2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಇಂದು ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ವಿರುದ್ಧ ಕ್ರಮದ ಬಗ್ಗೆ ಪ್ರಸ್ತಾವ ಮಾಡಿರೋ ಹಿನ್ನೆಲೆ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪರೋಕ್ಷವಾಗಿ ಬಜರಂಗದಳ ನಿಷೇಧ ಪ್ರಸ್ತಾಪಿಸಿರುವುದಕ್ಕೆ ಟಾಂಗ್ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಕಾಂಗ್ರೆಸ್ನ ಈ ಪ್ರಣಾಳಿಕೆಯಲ್ಲಿ ಹೊಸ ತಂತ್ರ ಅಡಗಿದೆ. ಕಾಂಗ್ರೆಸ್ನವರಿಗೆ ಹನುಮಂತನ ಕಂಡರೂ ಆಗಿಬರಲ್ಲ ಅಂತ ಕಾಂಗ್ರೆಸ್ ಪ್ರಣಾಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ರು.
ʻಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿಗಳ ಕಂತೆ ಹಿಡಿದುಕೊಂಡು ಕುಳಿತಿದೆ. ಯಾವ ಪಕ್ಷಕ್ಕೆ ತನ್ನ ಅಸ್ತಿತ್ವದ ಬಗ್ಗೆ ಗೊತ್ತಿಲ್ಲವೋ ಆ ಪಕ್ಷ ಸುಳ್ಳಿನ ಗ್ಯಾರಂಟಿಗಳನ್ನು ಮಾತ್ರ ನೀಡುತ್ತದೆ. ಕಾಂಗ್ರೆಸ್ ಬಡತನ ಮುಕ್ತ ಆಶ್ವಾಸನೆ ನೀಡಿತು ಆದರೆ ಬಡತನ ಮುಕ್ತವಾಗಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಕಾಂಗ್ರೆಸ್ ಬಡಜನರ, ರೈತರ ಬಗ್ಗೆ ಬಹಳ ಮಾತನಾಡುತ್ತದೆ ಆದರೆ ಅದು ಹೇಳುವುದೊಂದು ಮಾಡುವುದೊಂದು ಅಂತ ಪ್ರಧಾನಿ ಮೋದಿ ಗುಡುಗಿದರು.