ನಾ ದಿವಾಕರ
ʼ ನಿರ್ಣಾಯಕ ಚುನಾವಣೆಗಳು ಕಾರ್ಮಿಕರ ದೃಷ್ಟಿಕೋನ ʼ
ʼ ಶ್ರಮಿಕ ವರ್ಗದ ಆದ್ಯತೆ ಆಯ್ಕೆ ಹಾಗೂ ಅನಿವಾರ್ಯತೆಗಳು ʼ
ʼ ಶ್ರಮಿಕರ ಹೋರಾಟಗಳೂ ರಾಜಕೀಯ ವೇದಿಕೆಯೂ ʼ
ಈ ಮೂರೂ ಸರಣಿ ಲೇಖನಗಳ ಅಂತಿಮ ಭಾಗ ಇದು
ಸಂವಿಧಾನದ ಆಶಯದಂತೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು, ಬಹುತ್ವದ ನೆಲೆಗಳನ್ನು, ಸಮನ್ವಯದ ಮಾರ್ಗಗಳನ್ನು ಹಾಗೂ ಭ್ರಾತೃತ್ವದ ತಾಣಗಳನ್ನು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವ ಭಾರತದ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರತಿಷ್ಠಿತ ಸ್ಥಾನ ಪಡೆಯುತ್ತಿರುವ ತಮ್ಮ ದೇಶ ಹಾಗೂ ದೇಶದ ಆರ್ಥಿಕತೆ ವಿಡಂಬನೆಯಂತೆ ಕಾಣುವುದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ಅತಿಯಾದ ಶ್ರೀಮಂತಿಕೆ ಹಾಗೂ ಕಡು ಬಡತನದ ರೇಖೆಗಳ ನಡುವೆ ಇರುವ ಬೃಹತ್ ಕಂದಕದಲ್ಲಿ ಕಾಣುವ ಅಸಂಖ್ಯಾತ ಹಸಿದ ಹೊಟ್ಟೆಗಳು, ನಿರ್ಗತಿಕ ಜೀವಗಳು ಹಾಗೂ ಶೋಷಿತ ಸಮುದಾಯಗಳು ಮಾರುಕಟ್ಟೆ ಆರ್ಥಿಕತೆಯ ʼ ಅಭಿವೃದ್ಧಿ ʼಯ ಪರಿಕಲ್ಪನೆಯನ್ನೇ ಅಣಕಿಸುತ್ತಿರುತ್ತವೆ. ಏರುತ್ತಿರುವ ಜಿಡಿಪಿ ದರ, ಮಾರುಕಟ್ಟೆ ಸೂಚ್ಯಂಕಗಳು, ವಿದೇಶಿ ನೇರ ಬಂಡವಾಳ ಹೂಡಿಕೆಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ಥಾನಮಾನಗಳ ನಡುವೆಯೇ ದೇಶದ ಶ್ರಮಿಕ ವರ್ಗ ತನ್ನ ನಾಳೆಗಳಿಗಾಗಿ ಆತಂಕದಿಂದ ಎದುರುನೋಡುವ ಒಂದು ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಮಾರುಕಟ್ಟೆಯ ಪ್ರಗತಿಯ ವಾರಸುದಾರಿಕೆಯನ್ನು ಯಾರೇ ವಹಿಸಕೊಂಡರೂ, ಈ ಮುಂಚಲನೆಯ ಮೂಲ ಧಾತು ಇರುವುದು ಇದೇ ಶ್ರಮಿಕ ವರ್ಗದ ದುಡಿಮೆಯಲ್ಲಿ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಬಂಡವಾಳಶಾಹಿ ಆರ್ಥಿಕತೆಯ ಉತ್ಪಾದನಾ ಸಂಬಂಧಗಳ ಮೂಲ ನೆಲೆಯನ್ನು ಶೋಧಿಸುವಾಗ, ಆರ್ಥಿಕ ಅಭಿವೃದ್ಧಿಗಾಗಿ ಬೆವರು ಹರಿಸುವ ಶ್ರಮಜೀವಿಗಳ ಉತ್ಪಾದಕತೆ ಹಾಗೂ ಉತ್ಪಾದಕೀಯ ಶಕ್ತಿ ಎರಡೂ ಸಹ ಆಳುವ ವರ್ಗಗಳ ಅವಗಣನೆಗೆ ಒಳಗಾಗಿರುವುದನ್ನು ಗಮನಿಸಬಹುದು. ಶ್ರಮಿಕರ ಬದುಕಿನ ಅನಿಶ್ಚಿತತೆ, ಸಾಮಾಜಿಕ ಅಭದ್ರತೆ ಮತ್ತು ಸಾಂಸ್ಕೃತಿಕ ಅಪ್ರಸ್ತುತತೆಗಳೇ ಬಂಡವಾಳಶಾಹಿ ಅಭಿವೃದ್ಧಿ ಪಥದ ಒಳಬಿರುಕುಗಳೂ ಆಗಿರುತ್ತವೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಅಭಿವೃದ್ಧಿಯ ಫಲಾನುಭವಿಗಳಾಗಿ ಇಡೀ ಅರ್ಥವ್ಯವಸ್ಥೆಯ ವಾರಸುದಾರಿಕೆಯನ್ನು ವಹಿಸಿಕೊಳ್ಳುವ ಬಂಡವಾಳಿಗರು ಮತ್ತು ಮಾರುಕಟ್ಟೆಯ ಅಧಿಪತಿಗಳು ಈ ಒಳಬಿರುಕುಗಳು ಕಾಣದಂತೆ ಎಚ್ಚರ ವಹಿಸಿ, ಅಧಿಕಾರ ರಾಜಕಾರಣದ ಮೂಲಕ ಅಪಾರದರ್ಶಕ ಪರದೆಗಳನ್ನು ನಿರ್ಮಿಸುತ್ತಿರುತ್ತಾರೆ. ಈ ಪರದೆಗಳನ್ನು ಭೇದಿಸಲು ಹಾಗೂ ಅಭಿವೃದ್ಧಿ ಪಥದ ಒಳಬಿರುಕುಗಳನ್ನು ಶೋಧಿಸಲು ಬೇಕಾದ ಸೈದ್ಧಾಂತಿಕ-ತಾತ್ವಿಕ ಸಲಕರಣೆಗಳನ್ನು ಸಂಗ್ರಹಿಸಿ ಕಾಲ ಕಾಲಕ್ಕೆ ದುಡಿಯುವ ವರ್ಗಗಳ ಜೀವನ ಮತ್ತು ಜೀವನೋಪಾಯದ ಸವಾಲುಗಳಿಗೆ ಮುಖಾಮುಖಿಯಾಗುವುದು ಯಾವುದೇ ಎಡಪಕ್ಷಗಳ ಅಥವಾ ಎಡಪಂಥೀಯ ಕಾರ್ಮಿಕ ಸಂಘಟನೆಗಳ ಆದ್ಯತೆಯಾಗಬೇಕಿದೆ.
ಎಡಪಕ್ಷಗಳ ತಾತ್ವಿಕ ಹೊಣೆ

ಅಭಿವೃದ್ಧಿ ಹೊಂದುತ್ತಿರುವ ಒಂದು ರಾಜ್ಯ ಅಥವಾ ದೇಶದಲ್ಲಿ ಬಡತನ, ಹಸಿವು, ನಿರ್ಗತಿಕತೆ, ವಸತಿಹೀನತೆ ಎಲ್ಲವೂ ಢಾಳಾಗಿ ಕಾಣುತ್ತಿರುವಾಗ, ಈ ಸಮಸ್ಯೆಗಳಿಗೆ ಪೂರಕವಾಗಿ ಕಾಣುವ ಅಥವಾ ಸಮಸ್ಯೆಗಳಿಗೆ ಕಾರಣವಾಗಿ ಕಾಣುವ ಸಾಮಾಜಿಕ ಪಾತಕೀಕರಣ ಉಲ್ಬಣಿಸುತ್ತಿರುವಾಗ, ಎಡಪಕ್ಷಗಳ ಅಥವಾ ಮಾರ್ಕ್ಸ್ವಾದವನ್ನು ಪ್ರತಿಪಾದಿಸುವ ಯಾವುದೇ ಸಂಘಟನೆಯ ಆದ್ಯತೆ ಈ ಸಮಸ್ಯೆಗಳ ಮೂಲವನ್ನು ಶೋಧಿಸುವುದು ಮತ್ತು ಅಲ್ಲಿ ಗೋಚರಿಸುವಂತಹ ಶೋಷಣೆಯ ನೆಲೆಗಳನ್ನು ಗುರುತಿಸಿ ಪ್ರತಿರೋಧದ ಧ್ವನಿಯನ್ನು ಉದ್ಧೀಪನಗೊಳಿಸುವುದೇ ಆಗಿರಬೇಕು. ಶೀಘ್ರದಲ್ಲೇ ಚುನಾವಣೆಗಳನ್ನು ಎದುರಿಸುತ್ತಿರುವ ಕರ್ನಾಟಕದ ಸಂದರ್ಭವನ್ನೇ ಅವಲೋಕನ ಮಾಡಿದಾಗ ರಾಜ್ಯವು ಮಾರುಕಟ್ಟೆಯ ಪರಿಭಾಷೆಯಲ್ಲಿ ಅಭಿವೃದ್ಧಿಯ ಹಾದಿಯಲ್ಲಿರುವುದು ಕಂಡುಬರುತ್ತದೆ. ಇದರ ನಡುವೆಯೇ ರಾಜ್ಯದ ಶ್ರಮಿಕ ವರ್ಗಗಳು ಎಲ್ಲ ಕ್ಷೇತ್ರಗಳಲ್ಲೂ ಸಹ ನಿರಂತರ ಸಂಘರ್ಷದಲ್ಲಿರುವುದೂ ಕಂಡುಬರುತ್ತದೆ. ತಮ್ಮ ಜೀವನ, ಜೀವನೋಪಾಯ, ವರ್ತಮಾನದ ಬದುಕು, ಭವಿಷ್ಯ ಜೀವನದ ದೃಷ್ಟಿಯಿಂದ ನಿತ್ಯ ಸಂಘರ್ಷದಲ್ಲಿ ತೊಡಗಿರುವ ಬೃಹತ್ ಸಂಖ್ಯೆಯ ಶ್ರಮಿಕ ವರ್ಗಕ್ಕೆ ತಾತ್ವಿಕ ನೆಲೆಗಟ್ಟಿನ ಪ್ರತಿರೋಧದ ಮಾರ್ಗವನ್ನು ತೋರಿಸುವುದೇ ಅಲ್ಲದೆ, ರಾಜಕೀಯವಾಗಿ ಶೋಷಕ ವ್ಯವಸ್ಥೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಂದು ಪರ್ಯಾಯ ಭೂಮಿಕೆಯನ್ನು ಒದಗಿಸುವುದೂ ಎಡಪಕ್ಷಗಳ ಆದ್ಯತೆಯಾಗಿರುತ್ತದೆ.
ಮೇ 10ರ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸಾರ್ವಜನಿಕ ಚರ್ಚೆಗಳಲ್ಲಿ ಪ್ರಧಾನವಾಗಿ ಮುನ್ನೆಲೆಗೆ ಬರುವ ವಿಚಾರ ಎಂದರೆ ಈ ಚುನಾವಣೆಗಳಲ್ಲಿ ಎಡಪಕ್ಷಗಳ ಪಾತ್ರ ಮತ್ತು ಜವಾಬ್ದಾರಿ. ಈ ಸಂಧರ್ಭದಲ್ಲಿ ಮೂರು ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದು ಎಡಪಕ್ಷಗಳು ಇತರ ಪ್ರಜಾಸತ್ತಾತ್ಮಕ ಪಕ್ಷಗಳೊಡನೆ ಕೈಜೋಡಿಸಿ, ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಒಂದು ಸಮಾನ ರಾಜಕೀಯ ವೇದಿಕೆ ಏಕೆ ರೂಪಿಸಲಾಗಲಿಲ್ಲ ? ಎರಡನೆಯ ಪ್ರಶ್ನೆ ಎಂದರೆ ಖುದ್ದು ಎಡಪಕ್ಷಗಳೇ ಏಕೆ ಒಂದು ಸಮಾನ ವೇದಿಕೆಯತ್ತ ಮುನ್ನಡೆಯಲಾಗಲಿಲ್ಲ ? ರಾಜಕೀಯವಾಗಿ ಒಂದು ಪರ್ಯಾಯ ವೇದಿಕೆಯನ್ನು ರೂಪಿಸುವುದರ ಹೊರತಾಗಿ, ತಮ್ಮ ರಾಜಕೀಯ ಅಸ್ಮಿತೆ ಮತ್ತು ಚುನಾವಣಾ ಪ್ರತಿಷ್ಠೆಯನ್ನು ಬದಿಗಿಟ್ಟು, ಬಿಜೆಪಿ ಸರ್ಕಾರವನ್ನು ಪದಚ್ಯುತಗೊಳಿಸುವ ದೃಷ್ಟಿಯಿಂದ ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಗಳಲ್ಲಿ ಮಾತ್ರವೇ ಬೆಂಬಲಿಸುವ ತೀರ್ಮಾನವನ್ನು ಏಕೆ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಮತ್ತೊಂದು ಜಟಿಲ ಪ್ರಶ್ನೆ.
ಈ ಜಟಿಲ ಸಿಕ್ಕುಗಳನ್ನು ಹೊರಗಿಟ್ಟು, ಕಳೆದ ಐದು ವರ್ಷಗಳ ಎರಡು ಸರ್ಕಾರಗಳ, ಮೂವರು ಮುಖ್ಯಮಂತ್ರಿಗಳ ಆಳ್ವಿಕೆಯನ್ನೂ, ಜಾರಿಗೊಳಿಸಲಾದ ಆಡಳಿತ ನೀತಿಗಳನ್ನೂ, ಅನುಸರಿಸಲಾದ ಮಾರ್ಗಗಳನ್ನೂ ಹಾಗೂ ಅನುಷ್ಟಾನಗೊಳಿಸಲಾದ ಹೊಸ ಕಾಯ್ದೆ ಕಾನೂನುಗಳನ್ನೂ ಸೂಕ್ಷ್ಮವಾಗಿ ಗಮನಿಸುವಾಗ, ಕರ್ನಾಟಕದ ಎಡಪಕ್ಷಗಳು ಅಭಿವೃದ್ಧಿಯ ಹಾದಿಯಲ್ಲಿನ ಒಳಬಿರುಕುಗಳನ್ನು ಶೋಧಿಸುವುದರಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ. ರಾಜ್ಯ ರೈತರ ಬದುಕಿಗೆ ಮಾರಕವಾದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ, ಕೇಂದ್ರ ಸರ್ಕಾರ ಹಿಂಪಡೆದಿದ್ದರೂ ಇಲ್ಲಿ ಮುಂದುವರೆದಿರುವ ಮೂರು ಕರಾಳ ಕೃಷಿ ಕಾಯ್ದೆಗಳು, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಮತ್ತು ಇತ್ತೀಚೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಹೊಸ ಕಾರ್ಮಿಕ ಕಾಯ್ದೆ, ಈ ಐದೂ ಕಾನೂನುಗಳು ಮೂಲತಃ ಶ್ರಮಿಕ ವರ್ಗಗಳ, ರೈತಾಪಿಯ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೇ ಇವೆ. ಇದರೊಂದಿಗೆ ರಾಜ್ಯ ಸರ್ಕಾರವು ಶೈಕ್ಷಣಿಕ ವಲಯವನ್ನು ವಾಣಿಜ್ಯೀಕರಣಗೊಳಿಸಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿ, ಇದಕ್ಕೆ ಪೂರಕವಾಗಿ ಸರ್ಕಾರ ನಡೆಸಿದ ಪಠ್ಯಕ್ರಮ ಪರಿಷ್ಕರಣೆಯ ಕಸರತ್ತುಗಳು ಇವೆಲ್ಲವೂ ಸಮಸ್ತ ಕನ್ನಡಿಗರನ್ನು, ನಿರ್ದಿಷ್ಟವಾಗಿ ತಳಸಮುದಾಯಗಳನ್ನು, ಶ್ರಮಿಕ ವರ್ಗಗಳನ್ನು ಕಾಡುವಂತಹ ಕ್ರಮಗಳು.

ರಾಜ್ಯ ಬಿಜೆಪಿ ಸರ್ಕಾರದ ಈ ನೀತಿಗಳ ವಿರುದ್ಧ ಬೃಹತ್ ಹೋರಾಟಗಳು ನಡೆದಿವೆ, ನಡೆಯುತ್ತಲೂ ಇವೆ. ಎಡಪಕ್ಷಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಸಂವಿಧಾನದ ಅಡಿಪಾಯವನ್ನೇ ಶಿಥಿಲಗೊಳಿಸುವ ಈ ಕಾಯ್ದೆ ಕಾನೂನುಗಳ ವಿರುದ್ಧ, ಆಡಳಿತ ನೀತಿಗಳ ವಿರುದ್ಧ ಸತತ ಹೋರಾಟ ನಡೆಸುತ್ತಿವೆ. ಈ ಹೋರಾಟಗಳಲ್ಲಿ ಎಡಪಕ್ಷಗಳ ಮುಂದಾಳತ್ವವನ್ನೂ ಗುರುತಿಸಬಹುದು. ಆದರೆ ಸಾಂದರ್ಭಿಕ ಜನಾಂದೋಲನಗಳು ಮತ್ತು ಹೋರಾಟಗಳಿಗೂ, ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ದೀರ್ಘಕಾಲಿಕ ಚಳುವಳಿಗೂ ಇರುವ ಸೂಕ್ಷ್ಮ ಅಂತರವನ್ನು ಎಡಪಕ್ಷಗಳು ಗಮನಿಸಲೇಬೇಕು ಮಾರ್ಕ್ಸ್ ಮತ್ತು ಲೆನಿನ್ ಅವರ ಸೈದ್ಧಾಂತಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಶ್ರಮಿಕ ವರ್ಗಗಳ ನಡುವೆ ಸಾಮಾಜಿಕ-ಆರ್ಥಿಕ ಸಮಾನತೆ, ಸಾಂಸ್ಕೃತಿಕ ಘನತೆ ಹಾಗೂ ದೇಶದ ಬಹುತ್ವ ಸಂಸ್ಕೃತಿಯನ್ನು ರಕ್ಷಿಸಲು ಪಣತೊಟ್ಟು, ಎಲ್ಲ ಕ್ಷೇತ್ರಗಳಲ್ಲೂ ಶ್ರಮಿಕ ವರ್ಗಗಳನ್ನು ಸಂಘಟಿಸುವ ಜವಾಬ್ದಾರಿಯೊಂದಿಗೇ, ತಳಸಮುದಾಯಗಳನ್ನೂ ಒಳಗೊಂಡಂತೆ ಸಮಾಜದ ಎಲ್ಲ ಸ್ತರದ ಜನಸಾಮಾನ್ಯರಲ್ಲೂ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಜವಾಬ್ದಾರಿಯನ್ನೂ ಎಡಪಕ್ಷಗಳು ಹೊರಬೇಕಾಗುತ್ತದೆ.
ರಾಜಕೀಯ ಜವಾಬ್ದಾರಿ
ಆದರೆ ಕಳೆದ ಐದು ವರ್ಷಗಳಲ್ಲಿ ಮೇಲೆ ಉಲ್ಲೇಖಿಸಲಾದ ಶಾಸನಗಳ ವಿರುದ್ಧ, ಆಡಳಿತ-ಶೈಕ್ಷಣಿಕ ನೀತಿಗಳ ವಿರುದ್ಧ ಪ್ರತಿಭಟನೆ-ಧರಣಿ-ಮುಷ್ಕರಗಳಿಂದಾಚೆಗೆ, ಮಾರ್ಕ್ಸ್ವಾದಿ ದೃಷ್ಟಿಕೋನದಿಂದ ಒಂದು ರಾಜಕೀಯ ನೆಲೆಗಟ್ಟಿನ ಸೈದ್ಧಾಂತಿಕ ಹೋರಾಟವನ್ನು ಜಂಟಿಯಾಗಿ ಹಮ್ಮಿಕೊಳ್ಳುವಲ್ಲಿ ಎಡಪಕ್ಷಗಳು ಸೋತಿವೆ ಎಂದೇ ಹೇಳಬಹುದು. ಈ ಶಾಸನಗಳು ರಾಜ್ಯದ ಅಲ್ಪಸಂಖ್ಯಾತರ, ಮಹಿಳೆಯರ, ದುಡಿಯುವ ವರ್ಗಗಳ, ತಳಸಮುದಾಯಗಳ, ವಿದ್ಯಾರ್ಥಿ ಯುವಜನರ ಹಾಗೂ ಸಾಮಾಜಿಕವಾಗಿ ಆರ್ಥಿಕವಾಗಿ ತಳಮಟ್ಟದಲ್ಲಿರುವ ಬೃಹತ್ ಜನಕೋಟಿಯ ಬದುಕಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮಾರಕವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬಡ ಜನತೆಯ ಬದುಕುವ ಹಕ್ಕುಗಳನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು, ಶೈಕ್ಷಣಿಕ ಅವಕಾಶಗಳನ್ನು ಹಾಗೂ ದುಡಿಮೆಯ ನೆಲೆಗಳನ್ನು ಕಸಿದುಕೊಳ್ಳುವ ಈ ಕಾಯ್ದೆಗಳ ವಿರುದ್ಧ ಐದು ವರ್ಷಗಳ ಅವಧಿಯಲ್ಲಿ ಒಂದು ಸಮಗ್ರ ರಾಜಕೀಯ ಹೋರಾಟವನ್ನು ಹಮ್ಮಿಕೊಳ್ಳುವ ದೊಡ್ಡ ಜವಾಬ್ದಾರಿ ಎಡಪಕ್ಷಗಳ ಮೇಲಿತ್ತಲ್ಲವೇ ? ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಪ್ರತಿಭಟನೆ ಮುಷ್ಕರ ನಡೆಸುವುದಕ್ಕೂ, ದೀರ್ಘಾವಧಿಯ ಪರಿಣಾಮ ಬೀರುವ ರಾಜಕೀಯ ಹೋರಾಟಗಳಿಗೂ ಇರುವ ವ್ಯತ್ಯಾಸವನ್ನು ಎಡಪಕ್ಷಗಳು ಅರಿತಿರಲೇಬೇಕಲ್ಲವೇ ?

ಹಾಗೊಮ್ಮೆ ತಮ್ಮ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಗಳನ್ನು ತಾತ್ವಿಕವಾಗಿ ಪಕ್ಷದ ನೆಲೆಯಲ್ಲೂ ವಿಸ್ತರಿಸಿ, ಸಮಸ್ತ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವಂತಹ ಒಂದು ರಾಜಕೀಯ ಆಂದೋಲನವನ್ನು ಎಡಪಕ್ಷಗಳು ರೂಪಿಸಿದ್ದಲ್ಲಿ, ಇತ್ತೀಚೆಗೆ ಭುಗಿಲೆದ್ದಿದ್ದ ಅಮುಲ್-ನಂದಿನಿ ವಿವಾದವು ಭಾವಾವೇಶದ ಪ್ರತಿಭಟನೆಗಳಲ್ಲಿ ಕೊನೆಗೊಳ್ಳದೆ, ಜನಾಂದೋಲನಗಳಿಗೆ ಎಡೆಮಾಡಿಕೊಡುತ್ತಿತ್ತು ಹಾಗೆಯೇ ಅಮುಲ್-ನಂದಿನಿ ವಿವಾದದಲ್ಲಿ ಭಾವನಾತ್ಮಕವಾಗಿ ರೊಚ್ಚಿಗೆದ್ದು ಸ್ಪಂದಿಸಿದ ಕನ್ನಡಿಗರಿಗೆ ಈ ವಿವಾದದ ಮೂಲ ಧಾತು ಇರುವುದು ನವ ಉದಾರವಾದಿ ಮಾರುಕಟ್ಟೆ ನೀತಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಬಂಡವಾಳದ ಮರುವಸಾಹತೀಕರಣದ ನೆಲೆಗಳಲ್ಲಿ ಎನ್ನುವುದನ್ನು ಅರ್ಥಮಾಡಿಸುವ ಜವಾಬ್ದಾರಿಯನ್ನು ಎಡಪಕ್ಷಗಳು ಸಮರ್ಪಕವಾಗಿ ನೆರವೇರಿಸಬಹುದಿತ್ತು. ರಾಜ್ಯದಲ್ಲಿ ಹಾಲು ಒಕ್ಕೂಟಗಳ ಸಹಕಾರಿ ಸಂಸ್ಥೆಗಳಿಗೆ ನಾಲ್ಕು ದಶಕಗಳ ಇತಿಹಾಸವಿದ್ದರೂ, ರೈತ ಚಳುವಳಿಯ ಒಂದು ಭವ್ಯ ಪರಂಪರೆ ರಾಜ್ಯದಲ್ಲಿದ್ದರೂ, ಸಹಕಾರ ಸಂಘಗಳು ಏಕೆ ಒಂದು ಚಳುವಳಿಯಾಗಿ ರೂಪುಗೊಳ್ಳಲಿಲ್ಲ ಎಂಬ ಜಿಜ್ಞಾಸೆಯೂ ಎಡಪಕ್ಷಗಳನ್ನು ಕಾಡಬೇಕಿತ್ತು.
ಐಕ್ಯತೆಯ ಸವಾಲುಗಳು
ಶ್ರಮಿಕ ವರ್ಗದ ಆಶೋತ್ತರಗಳಿಗಾಗಿ, ದುಡಿಮೆಯ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ, ಶ್ರಮಜೀವಿಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುವ ಸಲುವಾಗಿ ಅವಿರತ ಹೋರಾಟದಲ್ಲಿ ತೊಡಗಿರುವ ಎಡಪಕ್ಷಗಳಿಗೆ, ಐಕ್ಯತೆಯತ್ತ ಸಾಗುವುದಕ್ಕೆ ಕಾರ್ಮಿಕ ಸಂಘಟನೆಗಳೇ ತೊಡಕಾಗಿರುವುದು ಚಾರಿತ್ರಿಕ ವಿಡಂಬನೆ ಎಂದೇ ಹೇಳಬಹುದು. ಇದಕ್ಕೆ ಕಾರಣ ನಾವು ಶ್ರಮಿಕ ವರ್ಗದ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನವನ್ನೇ ಮಾಡುತ್ತಿಲ್ಲ. ಸಂಘಟಿತರಾಗಿರುವ ಮತ್ತು ಆಗುತ್ತಿರುವ ಕಾಯಕ ಜೀವಿಗಳಿಂದಾಚೆಗೆ ಹಳ್ಳಿಗಾಡಿನ ಕೂಲಿ ಕಾರ್ಮಿಕರು, ಭೂರಹಿತ ರೈತರು, ಗ್ರಾಮೀಣ ಬಡಜನತೆ, ಅವಕಾಶವಂಚಿತ-ಸೌಲಭ್ಯವಂಚಿತ ತಳಸಮುದಾಯಗಳು, ಮೀಸಲಾತಿಯನ್ನೂ ಒಳಗೊಂಡಂತೆ ಹಲವು ಸಂವಿಧಾನದತ್ತ ಸವಲತ್ತುಗಳಿಂದಲೂ ವಂಚಿತರಾಗಿರುವ, ಈಗ ಒಳಮೀಸಲಾತಿಗಾಗಿ ಹೋರಾಡುತ್ತಿರುವ ತಳಸಮುದಾಯಗಳು, ಆದಿವಾಸಿಗಳು ಹಾಗೂ ಬಂಡವಾಳಶಾಹಿ ಮಾರುಕಟ್ಟೆ ಅಭಿವೃದ್ಧಿ ಪಥದಲ್ಲಿ ನಿರ್ವಸತಿಗರಾಗುತ್ತಿರುವ ಅಸಂಖ್ಯಾತ ಆದಿವಾಸಿ ಸಮುದಾಯಗಳು ಹಾಗೂ ಕೋಮುವಾದ-ಮತಾಂಧತೆಯ ದಾಳಿಗೆ ಸಿಲುಕಿ ತಮ್ಮ ಜೀವನೋಪಾಯ ಮಾರ್ಗಗಳನ್ನು ಕಳೆದುಕೊಳ್ಳುತ್ತಿರುವ ತಳಸ್ತರದ ಅಲ್ಪಸಂಖ್ಯಾತರು – ಈ ಎಲ್ಲ ಶೋಷಿತ ಜನತೆಯನ್ನೂ ಶ್ರಮಿಕ ವರ್ಗದ ಆವರಣದೊಳಗಿಟ್ಟು, ಆಳುವ ವರ್ಗಗಳ , ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳ ಹಾಗೂ ಬಂಡವಾಳಿಗರ ಶೋಷಣೆಯಿಂದ ಪಾರುಮಾಡುವ ನಿಟ್ಟಿನಲ್ಲಿ ಎಡಪಕ್ಷಗಳು ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕಿದೆ.
ಕಳೆದ ಐದು ವರ್ಷಗಳ ಆಡಳಿತದಲ್ಲಿ ಈ ಎಲ್ಲ ವರ್ಗಗಳೂ ಸಹ ಸರ್ಕಾರದ ನೀತಿಗಳಿಂದ ಬಾಧಿತರಾಗಿವೆ. ಈ ಕಾರಣಕ್ಕಾಗಿಯೇ ರಾಜ್ಯದ ಜನತೆ ಒಂದು ಪರ್ಯಾಯ ಸರ್ಕಾರವನ್ನು ಬಯಸುತ್ತಿದೆ. ಈ ಪರ್ಯಾಯ ಸರ್ಕಾರದಲ್ಲಿ ಮತ್ತೊಂದು ಬಂಡವಾಳಿಗ ಪಕ್ಷವೇ ಅಧಿಕಾರ ನಡೆಸುವುದಾದರೂ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಲ್ಲದ ಒಂದು ಸೌಹಾರ್ದಯುತ ಸಮಾಜವನ್ನು ಕಾಪಾಡುವಲ್ಲಿ ನೆರವಾಗುವ ನಿರೀಕ್ಷೆ ಇಟ್ಟುಕೊಳ್ಳುವುದು ಅನಪೇಕ್ಷಣೀಯವಾಗಲಾರದು. ಈ ದೃಷ್ಟಿಯಿಂದಲೇ ಎಡಪಕ್ಷಗಳು ಒಕ್ಕೊರಲಿನಿಂದ ಪರ್ಯಾಯ ಸರ್ಕಾರಕ್ಕೆ ಒತ್ತಾಸೆಯಾಗಿ ನಿಂತು, ತಮ್ಮ ಚುನಾವಣಾ ರಾಜಕಾರಣದ ಹಿತಾಸಕ್ತಿಗಳನ್ನು ಬದಿಗಿಡಬಹುದಿತ್ತು. ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಬೇಕಾದರೆ ಎಡಪಕ್ಷಗಳ ನಡುವೆ ಸಮಾನ ಧೋರಣೆ ಮತ್ತು ಧ್ಯೇಯ ಇರುವುದೂ ಮುಖ್ಯವಾಗುತ್ತದೆ. ಮೇಲೆ ಹೇಳಿದಂತೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಎಡಪಕ್ಷಗಳು ಐಕ್ಯತಾ ವೇದಿಕೆಯನ್ನಾದರೂ ರೂಪಿಸಿಕೊಂಡು, ಈ ವೇದಿಕೆಗೆ ರಾಜಕೀಯ ಸ್ಪರ್ಶ ನೀಡುವ ಮೂಲಕ, ರಾಜಕೀಯ ಹೋರಾಟಗಳನ್ನು ಕೈಗೊಂಡಿದ್ದಲ್ಲಿ, ಕರ್ನಾಟಕದ ಜನತೆಯಲ್ಲಿ ಹೊಸ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಅವಕಾಶ ಲಭ್ಯವಾಗುತ್ತಿತ್ತು.

ಈ ಮಹತ್ತರ ಕಾರ್ಯದಲ್ಲಿ ಪ್ರಗತಿಪರ ಸಂಘಟನೆಗಳು, ನಾಗರಿಕ ಸಮಾಜದ ಸಂಘ ಸಂಸ್ಥೆಗಳು, ರೈತ ಸಂಘಟನೆಗಳು , ದಲಿತ ಸಂಘಟನೆಗಳು ಹಾಗೂ ಅಂಬೇಡ್ಕರ್ವಾದಿಗಳನ್ನೂ ಒಳಗೊಂಡಂತೆ ಒಂದು ವಿಶಾಲ ರಾಜಕೀಯ ಭೂಮಿಕೆಯನ್ನು ಸಿದ್ಧಪಡಿಸುವ ಪ್ರಯತ್ನ ಎಡಪಕ್ಷಗಳಿಂದ ಆಗಬೇಕಿತ್ತು. ಇದಕ್ಕೂ ಮುನ್ನ ಎಡಪಕ್ಷಗಳ ನಡುವೆ ಇರುವ ಕೆಲವೇ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ತಮ್ಮದೇ ಕಾರ್ಮಿಕ ಸಂಘಟನೆಗಳಿಂದ ಐಕ್ಯತೆಗೆ ಉಂಟಾಗುತ್ತಿರುವ ಆಕ್ಷೇಪ-ತೊಡಕುಗಳನ್ನು ನಿವಾರಿಸಿಕೊಂಡು, ಎಡಪಂಥೀಯ ವೇದಿಕೆಯೊಂದು ರೂಪುಗೊಳ್ಳಬೇಕಿತ್ತು. ಬಹುಶಃ ಹಾಗಾಗಿದ್ದಲ್ಲಿ ಕರ್ನಾಟಕದಲ್ಲಿ ಎಡಪಂಥೀಯ ಧ್ವನಿ ರಾಜ್ಯಾದ್ಯಂತ ಪ್ರತಿಧ್ವನಿಸಲು ಸಾಧ್ಯವಾಗಬಹುದಿತ್ತು. ಸಾಂದರ್ಭಿಕವಾಗಿ ವೇದಿಕೆಗಳಲ್ಲಿ ವ್ಯಕ್ತವಾಗುವ ಐಕ್ಯತೆಯ ಆಶಯಗಳು ಸಾಕಾರಗೊಳ್ಳಬೇಕಾದರೆ ಎಡಪಕ್ಷಗಳು ತಮ್ಮ ಸುತ್ತಲಿನ ಅಸ್ಮಿತೆ-ಅಸ್ತಿತ್ವ ಮತ್ತು ಪ್ರತಿಷ್ಠೆಯ ಕವಚಗಳನ್ನು ಕಿತ್ತೊಗೆಯಬೇಕು.
ಅಂತಿಮವಾಗಿ
ಯಾವುದೇ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಡೆಯುವ ಪ್ರತಿಯೊಂದು ಜನಪರ ಹೋರಾಟದಲ್ಲೂ ಕೇಳಿಬರುವ ಎಡಪಂಥೀಯ ಧ್ವನಿ ರಾಜಕೀಯ ವಾತಾವರಣದಲ್ಲಿ, ಚುನಾವಣಾ ರಾಜಕಾರಣದಲ್ಲಿ ಹೆಚ್ಚು ಧ್ವನಿಸದೆ ಇರುವುದಕ್ಕೆ ಕಾರಣಗಳನ್ನು ಗಂಭೀರವಾಗಿ ಶೋಧಿಸಬೇಕಿದೆ. ಮಾರುಕಟ್ಟೆ ಆರ್ಥಿಕತೆಯ ಪ್ರಗತಿಯ ಹಾದಿಯಲ್ಲಿನ ಒಳಬಿರುಕುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ, ಈ ಒಳಬಿರುಕುಗಳಲ್ಲಿ ಕಾಣಬಹುದಾದ ಶ್ರಮಿಕ ವರ್ಗಗಳನ್ನು ಗುರುತಿಸುವ ಪ್ರಯತ್ನ ಎಡಪಕ್ಷಗಳಿಂದ ಆಗಬೇಕಿದೆ. ಬೌದ್ಧಿಕ, ಭೌತಿಕ ಹಾಗೂ ಆರ್ಥಿಕ ಸಂಪನ್ಮೂಲಗಳೊಂದಿಗೇ ಸಾಮಾಜಿಕ ಪರಿವರ್ತನೆಯ ಇಚ್ಛಾಶಕ್ತಿಯೂ ಇಲ್ಲಿ ಮುಖ್ಯವಾಗುತ್ತದೆ. ಕೋಮುವಾದಿ ಮತಾಂಧ ದ್ವೇಷ ರಾಜಕಾರಣ, ಸಾಮಾಜಿಕ ಪಾತಕೀಕರಣ, ಸಾಂಸ್ಕೃತಿಕ ಲುಂಪನೀಕರಣ (Lumpenisation) ಹಾಗೂ ಭ್ರಷ್ಟ ರಾಜಕಾರಣದ ಬಲಿಪಶುಗಳಾಗುತ್ತಿರುವ, ಅವಕಾಶ-ಸೌಲಭ್ಯ ವಂಚಿತ ಯುವ ಪೀಳಿಗೆಯನ್ನು ಸಮ ಸಮಾಜದ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿಯೊಂದಿಗೆ ಕರೆದೊಯ್ಯುವ ದೊಡ್ಡ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಈ ಜವಾಬ್ದಾರಿಯನ್ನು ಅರಿತು ಮುಂದಿನ ಹೆಜ್ಜೆಗಳನ್ನು ಗಹನವಾಗಿ ಆಲೋಚನೆ ಮಾಡಬೇಕಿದೆ.
ಸೌಹಾರ್ದತೆ, ಸಮನ್ವಯ, ಸಾಮರಸ್ಯ, ಸಹಬಾಳ್ವೆ ಮತ್ತು ಸೋದರತ್ವದ ಉದಾತ್ತ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ ಎಡಪಕ್ಷಗಳ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಈ ಜವಾಬ್ದಾರಿಯನ್ನು ಅರಿತು ಮುನ್ನಡೆಯುವ ಆಲೋಚನೆ ನಮ್ಮದಾಗಲಿ.
-೦-೦-೦-






