ಶಿವಮೊಗ್ಗ: ಏ.21: ಎಲ್ಲಾ ಆವಕಾಶ, ಆಸೆ ಆಮಿಷಗಳ ನಡುವೆ ಪಕ್ಷನಿಷ್ಠೆ ಎಂಬ ತಪ್ಪಸ್ಸನ್ನು ಎಡೆಬಿಡದೆ ಆಚರಿಸಿ , ಪಕ್ಷ ವಿರುದ್ಧವಾದ ಯಾವುದೇ ನಿಲುವನ್ನು ತಾಳದೇ , ತಾಳ್ಮೆಯನ್ನು ಆಯುಧ ಮಾಡಿಕೊಂಡವನಿಗೆ ಮನ್ನಣೆ ಶತಸಿದ್ಧ ಎಂಬುದು ಈಶ್ವರಪ್ಪ ಅವರನ್ನ ನೋಡಿ ಕಲಿಯಬೇಕಿದೆ. ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕುಶಲೋಪಚಾರ ವಿಚಾರಿಸಿದ್ದಾರೆ.
ಇತ್ತೀಚೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಲು ಪಕ್ಷ ಸೂಚಿಸುತ್ತಿದ್ದಂತೆ ಪಕ್ಷದ ಆದೇಶವನ್ನು ಈಶ್ವರಪ್ಪ ಪಾಲನೆ ಮಾಡಿದ್ದರು. ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ಗೆ ಟಿಕೆಟ್ ಬಯಸಿದ್ದರು. ಆದರೆ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಈಶ್ವರಪ್ಪ ಅಸಮಾಧಾನಗೊಂಡು ಪಕ್ಷದ ವಿರುದ್ಧ ಮುನಿಸಿಕೊಳ್ಳಬಹದು ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಈಶ್ವರಪ್ಪ ಇದು ಯಾವುದಕ್ಕು ತಲೆ ಕೆಡಿಸಿಕೊಳ್ಳದೇ ಪಕ್ಷ ನಿಷ್ಠೆ ಮೆರೆದಿದ್ದರು. ಇದೇ ಕಾರಣಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಅವರ ಪಕ್ಷ ನಿಷ್ಠೆ ಮೆಚ್ಚಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದು, ಈ ವೇಳೆ ಈಶ್ವರಪ್ಪ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಈ ರೀತಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಸಂಘಟನೆ ಹಾಗೂ ನಿಮ್ಮನೊಂದಿಗೆ ಸದಾ ನಾನು ಇರುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.
ನೀವು ಬಿ.ಎಸ್ ಯಡಿಯೂರಪ್ಪ ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಪಕ್ಷ ಸಂಘಟನೆ ನಿಮ್ಮ ಜೊತೆ ಯಾವಾಗಲೂ ಇರುತ್ತದೆ ಎಂದು ಮೋದಿ ತಿಳಿಸಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನೀವು ಪೋನ್ ಮಾಡಿದ್ದು ಖುಷಿ ಆಯ್ತು. ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ನೀವು ಕರೆ ಮಾಡಿದ್ದು ಬಹಳ ಖುಷಿ ಆಗಿದೆ ಎಂದು ಹೇಳಿದ್ದಾರೆ.