ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ಪುತ್ರಿ ಆರಾಧ್ಯ ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅಮಿತಾಬ್ ಬಚ್ಚನ್ ಮೊಮ್ಮಗಳು ಹೈಕೋರ್ಟ್‌ನಲ್ಲಿ ಪಿಟಿಷನ್ ದಾಖಲಿಸಿದ್ದರು. ಆರಾಧ್ಯ ಬಚ್ಚನ್ನ ಆರೋಗ್ಯದ ಬಗ್ಗೆ ತಪ್ಪಾದ ಮಾಹಿತಿ ಪ್ರಸಾರ ಮಾಡಿದ ಅನೇಕ ಯುಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಆರಾಧ್ಯ ಬಚ್ಚನ್ ತೀವ್ರ ಅಸ್ವಸ್ಥರಾಗಿದ್ದಾರೆ ಮತ್ತು ಆಕೆ ಇನ್ನಿಲ್ಲ ಎಂಬ ವಿಷಯಗಳನ್ನು ವಿಡಿಯೋ ಮಾಡಿ ಕೆಲ ಯುಟ್ಯೂಬ್ ಚಾನೆಲ್ಗಳು ಅಪ್ಲೋಡ್ ಮಾಡಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಕೂಡಲೇ ಆ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಸಂಬಂಧಪಟ್ಟವರಿಗೆ ಆದೇಶಿಸಿದೆ.

ವಿಡಿಯೋಗಳನ್ನು ತೆಗೆದು ಹಾಕುವುದರ ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ 9 ಯೂಟ್ಯೂಬ್ ಚಾನಲ್‌ಗಳ ಮೇಲೆ ನಿರ್ಬಂಧ ಹೇರಿದೆ. ತಮ್ಮ ತಂದೆ ಅಭಿಷೇಕ್ ಬಚ್ಚನ್ ಜೊತೆ 11 ವರ್ಷದ ಹುಡುಗಿ ಆರಾಧ್ಯ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಸುಳ್ಳು ಸುದ್ದಿ ಪ್ರಸಾರ ಮಾಡುವ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಹರಿಶಂಕರ್ ನೇತೃತ್ವದ ಏಕ ಸದಸ್ಯ ಪೀಠ ಆ ವಿಡಿಯೋಗಳನ್ನು ತೆಗೆದು ಹಾಕುವಂತೆ, ಆ ಯೂಟ್ಯುಬ್ ಚಾನಲ್‌ಗಳಿಗೆ ಹೇಳಿದೆ. “ಪ್ರತಿ ಮಗುವಿಗೂ ಗೌರವದಿಂದ ಬದುಕುವ ಹಕ್ಕು, ತಮ್ಮ ಬಗ್ಗೆ ಗೌರವದಿಂದ ವರ್ತಿಸುವ ಹಕ್ಕು ಇದೆ” ಎಂದು ಕೋರ್ಟ್ ತಿಳಿಸಿದೆ.