ʻಶಿವಾಜಿ ಸುರತ್ಕಲ್ 2ʼ ʻದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿʼ ಸಿನಿಮಾ ನಾಳೆ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. 2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ, ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್ ನಟನೆಯ ʻಶಿವಾಜಿ ಸುರತ್ಕಲ್ʼ ಚಿತ್ರದ ಮುಂದುವರಿದ ಭಾಗವೇ ʻಶಿವಾಜಿ ಸುರತ್ಕಲ್ 2ʼ.

ಈ ಸಿನಿಮಾವನ್ನ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ಶಿವಾಜಿ ಸುರತ್ಕಲ್‌ನಂತೆಯೇ ಈ ಸಿನಿಮಾ ಕೂಡ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಅನ್ನೋದೇ ʻಶಿವಾಜಿ ಸುರತ್ಕಲ್ 2ʼ ಚಿತ್ರದ ಹೂರಣ.

‘ಮೊದಲ ಭಾಗ ನೋಡಿದವ್ರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಅಂತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ನಟ ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ.