ಬೆಂಗಳೂರು: ಬಿಜೆಪಿ ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದು, ಹೈಕಮಾಂಡ್ ಒತ್ತಡಕ್ಕೆ ಮಣಿದು ರಾಜಿನಾಮೆ ಘೋಷಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಟಿಕಟ್ ನಿರಾಕರಿಸಿರುವ ಬಿಜೆಪಿ ಅವರನ್ನು ಮೂಲೆಗುಂಪು ಮಾಡಿದೆ.
ಈ ನಡುವೆ, ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರನ್ನು ಬದಿಗೆ ತಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವ ಹಳೆಯ ಆಡಿಯೋ ರೆಕಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಹೊಸ ಮುಖ್ಯಮಂತ್ರಿ ನೇಮಕಕ್ಕೆ ಸಿದ್ಧತೆ ನಡೆಯುತ್ತಿದ್ದ ಹೊತ್ತಿನಲ್ಲಿ ಆಡಿದ ಮಾತು ಇದು ಎಂದು ಹೇಳಲಾಗಿದ್ದು, ನಳಿನ್ ಕುಮಾರ್ ಅವರು ತಮ್ಮ ಆಪ್ತರೊಬ್ಬರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆಗೊಳಿಸಲಾಗಿತ್ತು.
2021ರ ಜುಲೈ 18ರಂದು“ಯಾರಿಗೂ ಹೇಳೋಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಟೀಮನ್ನು ಫುಲ್ ತೆಗೆಯೋದು. ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ” ಎಂದು ನಳಿನ್ ಕುಮಾರ್ ಆಡಿಯೋದಲ್ಲಿ ಹೇಳಿದ್ದರು.
“ಇನ್ನು ಯಾರೇ ಆದರೂ ನಮ್ಮ ಕೈಯಲ್ಲೇ ಇನ್ನು” ಎಂದು ಹೇಳಿದ್ದರು. ಇದೀಗ, ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ರಿಗೆ ಟಿಕೆಟ್ ನೀಡದಿರುವುದರ ಹಿಂದೆ ನಳಿನ್ ಕುಮಾರ್ ಕಟೀಲ್ ಬಣದ ಕೈವಾಡವಿತ್ತೇ ಎಂಬ ಚರ್ಚೆಗಳು ನಡೆಯುತ್ತಿದೆ.