ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲು ತಡಮಾಡುತ್ತಿರುವ ಬಿಜೆಪಿ ಭಾರೀ ರಣತಂತ್ರ ಹೂಡುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿಗಳ ವಿರುದ್ಧ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿ ಅವರನ್ನು ಸೋಲಿಸೋಕೆ ಬಿಜೆಪಿ ಭಾರೀ ಪ್ಲಾನ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ಕಾಂಗ್ರೆಸ್ನ ಪ್ರಬಲ ನಾಯಕ ಎನಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ರನ್ನು ಹೇಗಾದರೂ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಪಟ್ಟು ಹಿಡಿದಿದೆ. ಹೀಗಾಗಿ ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣ ಹಾಗೂ ಕನಕಪುರದಲ್ಲಿ ಡಿಕೆಶಿ ವಿರುದ್ಧ ಆರ್.ಅಶೋಕ್ರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಈ ವಿಚಾರವಾಗಿ ಇಂದು ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜಕಾರಣ ಅಂದಮೇಲೆ ಯಾರ ವಿರುದ್ಧ ಯಾರು ಬೇಕಿದ್ದರೂ ನಿಲ್ಲಬಹುದು. ಅಶೋಕ್ ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಾರೆ ಎಂದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿಯ ಈ ದೊಡ್ಡ ನಿರ್ಧಾರಕ್ಕೆ ನನ್ನ ಸ್ವಾಗತವಿದೆ ಎಂದಿದ್ದಾರೆ.