ಶಿವಮೊಗ್ಗ :ಏ.೦೩: ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮತ್ತೊಂದು ವಿಕೆಟ್ ಪತನವಾಗಿದೆ. ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದದಾರೆ. ಅಲ್ಲದೇ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಸದ್ಯದಲ್ಲೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಬಡವರ ಪ್ರತಿನಿಧಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತೇನೆ. ಈ ಮೂಲಕ ಮಾಜಿ ಸಚಿವ ಈಶ್ವರಪ್ಪ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ. ನನ್ನನ್ನ ಚುನಾವಣಾ ಕಣದಲ್ಲಿ ಎದುರಿಸಿ ಎಂದು ಈಶ್ವರಪ್ಪಗೆ ಸವಾಲು ಹಾಕಿದರು. ಈ ಮೂಲಕ ಈ ಬಾರಿಯ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿದರು.
ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ. ಮೊನ್ನೆ ಈಶ್ವರಪ್ಪ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಏಕವಚನದಲ್ಲೇ ಈಶ್ವರಪ್ಪ ವಿರುದ್ಧ ವಾಗ್ದಾಳಿ :
ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕೂವರೆ ಕೋಟಿ ರೂ. ಮೌಲ್ಯದ ಸೀರೆಗಳು ಸಿಕ್ಕಿವೆ. ಸೀರೆಗಳ ಮಾಲೀಕರು ಯಾರು ಎಂದು ಗೊತ್ತಾಗಲಿಲ್ಲ. ಕೆ.ಎಸ್.ಈಶ್ವರಪ್ಪರಿಂದ ಅಭಿವೃದ್ಧಿ ಇಲ್ಲ, ಪ್ರಚೋದನೆಯೇ ಬಂಡವಾಳ. ಪ್ರಚೋದನೆ ಮೂಲಕ ಕೆ.ಎಸ್.ಈಶ್ವರಪ್ಪ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಈಶ್ವರಪ್ಪ ಯಡಿಯೂರಪ್ಪಗೆ ಅಪಾದನೆ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಜೊತೆ ಯಾವಾಗಲೂ ನಿಲ್ಲಲಿಲ್ಲ. ಈಶ್ವರಪ್ಪ ಮೇಲೆ ಅಪಾದನೆ ಇವೆ, ನಾನು ನಿಷ್ಕಳಂಕಿತ ಎಂದು ಏಕವಚನದಲ್ಲೇ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಅಥವಾ ಅವರ ಮಗ ಚುನಾವಣೆಗೆ ಬರಲಿ ರಾಜಕೀಯದ ಲೆಕ್ಕಗಳನ್ನು ಕೊಡುತ್ತೇನೆ. ಹಾಗೆಯೇ ಎಣಿಸಿಕೊಳ್ಳಲು ನಿಮ್ಮ ಗೋಡೌನ್ ನಲ್ಲಿ ಇರುವ ಎಣಿಕೆ ಮೆಷಿನ್ ಗಳನ್ನು ತರಬೇಕಾಗುತ್ತೆ. ನೀವು ಮತ್ತೆ ನಿಮ್ಮ ಮಗ ಚುನಾವಣೆಗೆ ಬರಲೇಬೇಕು. ನಿರ್ಲಜ್ಜೆಯಿಂದ ಸಂಕೋಚ ಬಿಟ್ಟು ಈ ಬಾರಿ ತಮ್ಮಮಗನಿಗೆ ಟಿಕೆಟ್ ಕೇಳಿದ್ದೀರಿ. ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರು, ಗಿರೀಶ್ ಪಟೇಲ್, ಸಿದ್ದರಾಮಣ್ಣ ಅವರಿಗೆ ಟಿಕೆಟ್ ಕೇಳಿಲ್ಲ. ನಿಮ್ಮ ಮಗನಿಗೆ ಟಿಕೆಟ್ ಕೇಳಿದ್ದೀರಿ, ಆತ ಒಳ್ಳೆಯ ತಳಿಯೇ ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ ಇದೆ. ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ. ಮಂತ್ರಿಯಾಗಿದ್ದಾಗ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಈಶ್ವರಪ್ಪ ಒಂದು ದಿನವೂ ಹೆಲಿಪ್ಯಾಡ್ ಗೆ ಬಂದು ಸ್ವಾಗತಿಸಲಿಲ್ಲ. ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ. ಯಡಿಯೂರಪ್ಪ ಮೇಲೆ ಆರೋಪ ಬಂದು ಜೈಲಿಗೆ ಹೋದಾಗ ಇಂತ ಸ್ಥಿತಿ ಬಂದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದೀರಿ. ನಿಮ್ಮ ಮೇಲೆ ಆರೋಪ ಬಂದಾಗ ನೇಣು ಹಾಕಿಕೊಳ್ಳುವುದಿರಲಿ ನೇಣು ಹಗ್ಗವನ್ನು ತರಲಿಲ್ಲ. ಬದಲಿಗೆ ಬೇರೆಯ ಹುಡುಗ ಆತ್ಮಹತ್ಯೆ ಮಾಡಿಕೊಂಡ ಎಂದು ಈಶ್ವರಪ್ಪ ವಿರುದ್ಧ ಹರಿಹಾಯ್ದರು.