~ಡಾ. ಜೆ ಎಸ್ ಪಾಟೀಲ
ನವದೆಹಲಿ :ಮಾ.25: ಭಾರತದ ಮುಸ್ಲಿಮರನ್ನು ದ್ವೇಷಿಸುವ ಮತ್ತು ಕೋಮುದಂಗೆಗಳ ರೂವಾರಿಯ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿ ನೀಡಲಾಗಿದೆ ಎನ್ನುತ್ತಾರೆ ಖ್ಯಾತ ಲೇಖಕಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್ ಅವರು ತಮ್ಮ ಏಪ್ರಿಲ್ 22ˌ 2022 ರ ‘ದಿ ವೈರ್’ ವೆಬ್ ಜರ್ನಲ್ನ ಲೇಖನದಲ್ಲಿ. ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶಗೊಳಿಸುವ ಯುದ್ಧದಲ್ಲಿ ಆರೆಸ್ಸೆಸ್ ಗೆದ್ದರೆ, ಅದರ ಗೆಲುವು ಪೈರಿಕ್ (ಪುರಾತನ ಗ್ರೀಕರ ಯುದ್ದ ನೃತ್ಯ) ಆಗಿರುತ್ತದೆ ಏಕೆಂದರೆˌ ಆಗ ಭಾರತ ತನ್ನ ನೈಜ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎನ್ನುವುದು ಅರುಂಧತಿಯವರ ಖಚಿತ ಅಭಿಪ್ರಾಯವಾಗಿದೆ. ‘ದಿ ವೈರ್’ ಜರ್ನಲ್ನ ಈ ಲೇಖನವು ಯುನೈಟೆಡ್ ಸ್ಟೇಟ್ಸ್‌ನ ಲೈಡ್ನಾನ್ ಬಿ ಜಾಹ್ಸನಾನ್ ಆಡಿಟೋರಿಯಂನಲ್ಲಿ ಲೇಖಕಿ-ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರು ನೀಡಿದ ಸಿಸ್ಸಿ ಫಾರೆಂಟ್‌ಹೋಲ್ಡ್ ಉಪನ್ಯಾಸದ ಸಾರಾಂಶವಾಗಿದೆ. ಈ ಭಾಷಣವನ್ನು ರಾಪೋಪೋರ್ಟ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ಜಸ್ಟಿಸ್ ಆಯೋಜಿಸಿತ್ತು.
ಅರುಂಧತಿ ರಾಯ್ ಅವರು ತಮ್ಮ ಉಪನ್ಯಾಸದ ಆರಂಭದಲ್ಲಿ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸುತ್ತ ಉಕ್ರೇನಿಯನ್ ಜನರ ಧೈರ್ಯಶಾಲಿ ಪ್ರತಿರೋಧವನ್ನು ಹಾಗು ರಷ್ಯಾದ ಭಿನ್ನಮತೀಯರು ತೋರಿದ ಅಗಾಧವಾದ ಧೈರ್ಯವನ್ನು ಶ್ಲಾಘಿಸುತ್ತಾರೆ. ಅದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ನ ಬೂಟಾಟಿಕೆಗಳನ್ನು ತೀವ್ರವಾಗಿ ಖಂಡಿಸುತ್ತ ˌ ಅವು ಜಂಟಿಯಾಗಿ ವಿಶ್ವದ ಇತರ ದೇಶಗಳ ಮೇಲೆ ಮಾಡಿದ ಆಕ್ರಮಣಗಳನ್ನು ಕೂಡ ಪ್ರಾಸ್ತಾಪಿಸುತ್ತಾರೆ. ಈಗಲೂ ಯುಎಸ್ ಮತ್ತು ಯುಕೆಗಳ ಪರಮಾಣು ಶಸ್ತ್ರಾಸ್ತ್ರ ಸಂಗ್ರಹದ ಪೈಪೋಟಿ ಮತ್ತು ಅವು ನಮ್ಮ ಭೂಗ್ರಹವನ್ನು ಹಲವು ಬಾರಿ ನಾಶಮಾಡಲು ಹೊಂಚು ಹಾಕುತ್ತಿರುವುದನ್ನು ಟೀಕಿಸುತ್ತಾರೆ. ಆಮೇಲೆ ಅವರು ಭಾರತದಲ್ಲಿನ ಫ್ಯಾಸಿಷ್ಟ್ ಆಡಳಿತದ ಸಂವಿಧಾನ ವಿರೋಧಿ ಆಡಳಿತವನ್ನು ಟೀಕಿಸಿ ಜೈಲುಪಾಲಾದ ಸಾಮಾಜಿಕ ಕಾರ್ಯಕರ್ತರಿಗೆ ತಮ್ಮ ಉಪನ್ಯಾಸವನ್ನು ಸಮರ್ಪಿಸುವುದಾಗಿ ಘೋಷಿಸುತ್ತಾರೆ. ಭಾರತೀಯ ಸಾಮಾಜಿಕ ಕಾರ್ಯಕರ್ತರನ್ನು ಅವರು ಆತ್ಮಸಾಕ್ಷಿಯ ಕೈದಿಗಳು ಎಂದು ವರ್ಣಿಸುತ್ತಾ ಪ್ರೊ. ಜಿ.ಎನ್.ಸಾಯಿಬಾಬಾ, ಮುಂತಾದ ಭೀಮಾ ಕೋರೆಗಾಂವ್ ಹೋರಾಟಗಾರರು, ವಿದ್ವಾಂಸರು, ಗಾಯಕರು ಮತ್ತು ವಕೀಲರು, ಸಿಎಎ ವಿರುದ್ಧ ಪ್ರತಿಭಟಿಸಿ ಜೈಲು ಪಾಲಾದ ಎಲ್ಲರನ್ನು ಸ್ಮರಿಸುತ್ತಾರೆ.
ಮುಂದುವರೆದು ಅರುಂಧತಿಯವರು ಭಾರತದಲ್ಲಿ ಎಲ್ಲಾ ಬಗೆಯ ಭಿನ್ನಾಭಿಪ್ರಾಯಗಳನ್ನು ಅಪರಾಧೀಕರಿಸುವˌ ಭಿನ್ನಧ್ವನಿಯವರನ್ನು ದೇಶದ್ರೋಹಿಗಳೆಂದು ಕರೆಯುವ ಮತ್ತು ಬುದ್ದಿಜೀವಿಗಳನ್ನು ಬಹಿರಂಗವಾಗಿ ಬೌದ್ಧಿಕ ಭಯೋತ್ಪಾದಕರ ಹಣೆಪಟ್ಟಿ ಕಟ್ಟುವ ಪ್ರಭುತ್ವದ ನಡೆಯನ್ನು ಪ್ರಶ್ನಿಸಿದ್ದಾರೆ. ಯುಎಪಿಎ ಕಾಯಿದೆಯ ದುರುಪಯೋಗˌ ಅದರಡಿಯಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಯಾವ ವಿಚಾರಣೆಯೂ ಇಲ್ಲದೆ ವರ್ಷಗಟ್ಟಲೆ ಬಂಧನದಲ್ಲಿರಿಸುವ ಕಾರ್ಯ ಪ್ರಭುತ್ವ ಮಾಡುತ್ತಿದೆ. ಚಿಂತಕರನ್ನು ನಕ್ಸಲರೆಂದು ಬ್ರಾಂಡ್ ಮಾಡಲಾಗುತ್ತಿದೆ. ದೇಶದ ಒಳಿತಿಗಾಗಿ ಧ್ವನಿ ಎತ್ತುವ ಬುದ್ದಿಜೀವಿಗಳನ್ನು ಅರ್ಬನ್-ನಕ್ಸಲರು ಅಥವಾ ಜೆಹಾದಿಗಳು ಎಂದು ಹಿಯಾಳಿಸುವ ಕಾರ್ಯ ಕೋಮುವಾದಿಗಳು ಮಾಡುತ್ತಿದ್ದಾರೆ. ಮಾರ್ಚ್ ೨೦೨೨ ರಲ್ಲಿ, ಬಿಜೆಪಿ ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದೆ. ಈ ಚುನಾವಣೆಗಳನ್ನು ಮೇ ೨೦೨೪ ರ ನಿರೀಕ್ಷಿತ ಸಾರ್ವತ್ರಿಕ ಚುನಾವಣೆಯ “ಸೆಮಿ-ಫೈನಲ್” ಎಂದು ಹೇಳಲಾಗುತ್ತಿದೆ. ಕೇಸರಿ-ವಸ್ತ್ರಧಾರಿ ದೇವಮಾನವರು ಬಹಿರಂಗವಾಗಿ ಸಾಮೂಹಿಕ ಹತ್ಯೆ ಮತ್ತು ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂದು ಅರುಂಧತಿಯವರು ಉಲ್ಲೇಖಿಸಿದ್ದಾರೆ.
ಯುಪಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ದೃಢವಾದಂತೆ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಲ್ಲಿ ವಿಚಿತ್ರವಾದ, ಅಸಮರ್ಥನೀಯ ಆತ್ಮವಿಶ್ವಾಸ ಸೃಷ್ಟಿಸಿತ್ತು. ಚುನಾವಣಾ ಫಲಿತಾಂಶದ ನಂತರ ರಾಮನವಮಿ ಹಬ್ಬವು ಆ ವರ್ಷ ರಂಜಾನ್ ಜೊತೆಯಲ್ಲಿ ಬಂದಿತ್ತು. ರಾಮ ನವಮಿಯನ್ನು ಆಚರಿಸುವ ಹಿಂದೂ ಗುಂಪುಗಳು ಕತ್ತಿ ಮತ್ತು ಮಾರಕಾಸ್ತ್ರಗಳೊಂದಿಗೆ ಯುಪಿ ರಾಜ್ಯದ ಆಯ್ದ ಹನ್ನೊಂದು ನಗರಗಳಲ್ಲಿ ಹಿಂಸೆಯನ್ನು ಹುಟ್ಟುಹಾಕಿದವು. ಕೇಸರಿ ಬಟ್ಟೆಯುಟ್ಟ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮುಸ್ಲಿಂ ವಸತಿ ಪ್ರದೇಶಗಳಿಗೆ ಪ್ರವೇಶಿಸಿದ್ದರು ಮತ್ತು ಮಸೀದಿಗಳ ಹೊರಗೆ ಶಿಳ್ಳೆ ಹೊಡೆಯುತ್ತಾ ˌ ಅಶ್ಲೀಲ ನಿಂದನೆಯಲ್ಲಿ ತೊಡಗಿದ್ದರು. ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಗರ್ಭಪಾತಕ್ಕೆ ಬಹಿರಂಗವಾಗಿ ಕರೆ ನೀಡಿದ್ದರು ಎಂದು ಅರುಂಧತಿಯವರು ಹೇಳಿದ್ದಾರೆ. ಮುಸ್ಲಿಮರ ಯಾವುದೇ ಬಗೆಯ ಪ್ರತಿಕ್ರಿಯೆಗೆ ಸರಕಾರವು ಅವರ ಆಸ್ತಿಯನ್ನು ಬುಲ್ಡೋಜರ್ ಮೂಲಕ ಉರುಳಿಸುವ ಹಿಂದುತ್ವವಾದಿಗಳ ಉದ್ರಿಕ್ತ ಗುಂಪುಗಳು ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಬಂಧಿತದಲ್ಲಿ ಬಹುತೇಕರು ಮುಸ್ಲಿಮರಾಗಿದ್ದು ಅವರೆಲ್ಲರ ಮೇಲೆ ಪಿತೂರಿ ಮತ್ತು ಗಲಭೆಯ ಆರೋಪ ಹೊರಿಸಿ ವರ್ಷಗಳ ಕಾಲ ಜೈಲಿಗಟ್ಟಲಾಗಿದೆ ಎಂದಿದ್ದಾರೆ ಅರುಂಧತಿಯವರು.
ಈ ಮಧ್ಯೆ, 2020 ರ ದೆಹಲಿ ಹತ್ಯಾಕಾಂಡದ ಸಂದರ್ಭದಲ್ಲಿ ಹಿಂದೂ ಗಲಭೆಕೋರರನ್ನು ಬಹಿರಂಗವಾಗಿ ಪ್ರಚೋದಿಸಿದ ಬಿಜೆಪಿ ನಾಯಕರನ್ನು ಇತ್ತೀಚೆಗೆ ದೆಹಲಿ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ, ಇದು ಪ್ರಚೋದನಕಾರಿ ವಿಷಯಗಳನ್ನು ನಗುತ್ತಾ ಹೇಳಿದರೆ ಅದು ಅಪರಾಧವಲ್ಲವೆಂದು ಹೇಳಿದೆ. ಈ ತೀರ್ಪಿನಿಂದ ಸ್ಪೂರ್ತಿ ಪಡೆದ ಕೆಲವರು ಯುಪಿಯ ಇತರ ನಗರಗಳ ಬೀದಿಗಳಲ್ಲಿ ಮತ್ತೆ ಅದೇ ರೀತಿಯ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಪ್ರಭುತ್ವವನ್ನು ನಗುತ್ತ – ನಗಿಸುತ್ತ ಟೀಕಿಸಿದ ಕಾರಣಕ್ಕೆ ಯುವ ಮುಸ್ಲಿಂ ವಿದ್ವಾಂಸ ಉಮರ್ ಖಾಲಿದ್ ಜೈಲಿನಲ್ಲಿದ್ದಾನೆ. ಭ್ರಾತೃತ್ವ, ಪ್ರೀತಿ ಮತ್ತು ಅಹಿಂಸೆಯ ಬಗ್ಗೆ ಭಾರತೀಯ ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಮಾಡಿದ ಭಾಷಣವು ಪೊಲೀಸ್ ಚಾರ್ಜ್ ಶೀಟ್ ಪ್ರಕಾರ, 2020 ರ ದೆಹಲಿ ಹತ್ಯಾಕಾಂಡಕ್ಕೆ ಕಾರಣವಾದ ಪಿತೂರಿಯ ಹೊಗೆ ಪರದೆಯಾಗಿದೆ. ಸ್ಪಷ್ಟವಾಗಿ, ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಮಯದಲ್ಲಿ ಭಾರತದ ಹೆಸರನ್ನು ಹಾಳುಮಾಡಲು ಮುಸ್ಲಿಮರು ಗಲಭೆ ಮತ್ತು ಆತ್ಮಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವ ಹುಸಿ ಕತೆ ಹೆಣೆಯಲಾಗಿದೆ ಎಂದು ಅರುಂಧತಿಯವರು ಬಿಜೆಪಿ ಆಡಳಿತದ ಎಲ್ಲಾ ಹುನ್ನಾರಗಳನ್ನು ವಿವರಿಸಿದ್ದಾರೆ.
ಈ ಎಲ್ಲ ಕೃತ್ಯಗಳ ಮೂಲಕ, 2002 ರಲ್ಲಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂ ವಿರೋಧಿ ಹತ್ಯಾಕಾಂಡದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುತ್ವವಾದಿಗಳಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ಮೋದಿಯವರು ಆಗಾಗ್ಗೆ ಮೌನವಾಗಿರುತ್ತಾನೆ, ಆದರೆ ಹೆಚ್ಚಾಗಿ ನಾಯಿ-ಶಿಳ್ಳೆ ಹೊಡೆಯುವುದನ್ನು ಮುನ್ನಡೆಸುತ್ತಾರೆ. ಹಿಂದುಗಳು ಮುಸ್ಲಿಮ್ ಆಡಳಿತಗಾರರು ನಡೆಸಿದ ಐತಿಹಾಸಿಕ ದಬ್ಬಾಳಿಕೆ ಮತ್ತು ನರಮೇಧದ ಬಲಿಪಶುಗಳು ಎಂದು ಮೋದಿ ಬಿಂಬಿಸುತ್ತಾರೆ. ಹಾಗು ಅದಕ್ಕಾಗಿ ಹಿಂದೂಗಳು ಅವರ ಮೇಲೆ ಈಗ ಸೇಡು ತೀರಿಸಿಕೊಳ್ಳಬೇಕು ಎನ್ನುವ ವಾತಾವರಣ ಸೃಷ್ಟಿಸಿದ್ದಾರೆ. ಭಾರತದಲ್ಲೀಗ ಪುರಾಣ ವರ್ಸಸ್ ಇತಿಹಾಸ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಪುರಾಣವು ಇತಿಹಾಸವೆಂದು ಬಿಂಬಿಸಲು ಆಡಳಿತ ಯಂತ್ರ, ಕಾರ್ಪೊರೇಟ್ ಉದ್ಯಮಿಗಳ ಲೆಕ್ಕವಿಲ್ಲದಷ್ಟು ಹಣ ಮತ್ತು ಅಸಂಖ್ಯಾತ 24×7 ಸುದ್ದಿ ವಾಹಿನಿಗಳು ಹಿಂದುತ್ವವಾದಿಗಳ ಬೆಂಬಲಕ್ಕಿವೆ ಎನ್ನುತ್ತಾರೆ ಅರುಂಧತಿಯವರು.
ಮುಂದುವರೆಯುವುದು…