ಬೆಂಗಳೂರು:ಮಾ:24: ಈಗಾಗಲೇ ನಿಮ್ಮ ಪ್ರತಿಧ್ವನಿ ಮಾರ್ಚ್ 27 ರಂದು ಕೇಂದ್ರು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲಿದೆ ಎನ್ನುವ ಪಕ್ಕಾ ಮಾಹಿತಿಯನ್ನು ನಿಮ್ಮ ಮುಂದಿಟ್ಟಿತ್ತು. ಏಪ್ರಿಲ್ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದ್ದು ಮೇ ಮೊದಲ ಹಾಗೂ ಎರಡನೇ ವಾರದಲ್ಲಿ ಚುನಾವಣೆಗೆ ದಿನಾಂಕ ನಿಗದಿ ಆಗುತ್ತಿದೆ. ರಾಜ್ಯದಲ್ಲಿ ಬಹುತೇಕ ಎರಡು ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತಯಾರಿ ಮಾಡಿಕೊಳ್ತಿದೆ ಎನ್ನುವ ಮಾಹಿತಿಯನ್ನೂ ನೀಡಿದ್ದೆವು. ಇದೀಗ ಚುನಾವಣಾ ಆಯೋಗ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆ ಆಗಬಹುದು ಎಂದು ಅಧಿಕೃತ ಪತ್ರ ಕಳುಹಿಸಿದೆ.
ಚುನಾವಣಾ ಆಯೋಗದ ಪತ್ರದಲ್ಲಿ ಏನಿದೆ..?
ಕೇಂದ್ರ ಚುನಾವಣಾ ಆಯೋಗದ ಕಚೇರಿಯಿಂದಲೇ ಈ ಸಂದೇಶ ಹೊರಬಿದ್ದಿದ್ದು, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸಮಯ ಕೂಡಿ ಬಂದಿದ್ದು, ಚುನಾವಣಾ ನೀತಿ ಸಂಹಿತೆ ಜಾತಿ ಮಾಡಲು ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ತಯಾರು ಇರಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅಂದರೆ ಜಿಲ್ಲಾಧಿಕಾರಿಗೆ ಪತ್ರ ರವಾನೆ ಮಾಡಿದ್ದಾರೆ. ಪ್ರಮುಖವಾದ ಕೆಲಸಗಳನ್ನು ಚುನಾವಣೆ ಘೋಷಣೆಗೂ ಮುನ್ನವೇ ಮುಗಿಸಿಕೊಳ್ಳುವಂತೆ ಸೂಚನೆ ಕೊಡಲಾಗಿದೆ.
ರಾಜ್ಯದಲ್ಲಿ ಯಾವಾಗ ಚುನಾವಣೆ ಆಗಬಹುದು..?
ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ದಾವಣಗೆರೆಯಲ್ಲಿ ಮಹಾಸಂಗಮ ಕಾರ್ಯಕ್ರಮ ನಡೆಸುತ್ತಿದ್ದು, ಕಾರ್ಯಕ್ರಮ ಮುಗಿದ ಕೂಡಲೇ ಅಥವಾ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದ ಬಳಿಕ ಅಥವಾ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಸಮಾರೋಪದ ದಿನ ಈ ಮೂರು ದಿನಗಳಲ್ಲಿ ಒಂದು ದಿನ ಚುನಾವಣೆ ಘೋಷಣೆ ಆಗುವುದು ನಿಶ್ಚಿತ. ಈಗಾಗಲೇ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಮುಗಿಸಿದ್ದು ಚುನಾವಣೆ ಘೋಷಣೆ ದಿನದಿಂದಲೇ ನೀತಿ ಸಂಹಿತಿ ಜಾರಿ ಆಗಲಿದೆ ಎನ್ನಲಾಗುತ್ತಿದೆ.