ಮುಂಬೈ : ಶಸ್ತ್ರಚಿಕಿತ್ಸೆ ಮುಗಿದ ಬಳಿಕ 10ನೇ ತರಗತಿ ವಿದ್ಯಾರ್ಥಿಯೊಬ್ಬಳು ಆ್ಯಂಬುಲೆನ್ಸ್ನಲ್ಲಿಯೇ ಮಲಗಿ ಪರೀಕ್ಷೆಯನ್ನು ಬರೆದು ಇತರರಿಗೆ ಮಾದರಿ ಎನಿಸಿದ್ದಾಳೆ. ಮುಂಬೈನ ಬಾಂದ್ರಾ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಅಂಜುಮಾನ್ – ಐ – ಇಸ್ಲಾಂ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಮುಬಾಶಿರಾ ಸಾದಿಕ್ ಸಯ್ಯದ್ ತನ್ನ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿ ಶುಕ್ರವಾರದಂದು ಮುಬಾಶಿರಾ ಸಾದಿಕ್ ಸಯ್ಯದ್ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಹಿಲ್ ರೋಡ್ನ ಸೇಂಟ್ ಜೋಸೆಫ್ ಕಾನ್ವೆಂಟ್ ಬಳಿಯಲ್ಲಿ ಈಕೆಗೆ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಈಕೆಯ ಪಾದಕ್ಕೆ ಗಂಭೀರ ಗಾಯಗಳಾಗಿತ್ತು.
ಕೂಡಲೇ ವಿದ್ಯಾರ್ಥಿನಿ ಮುಬಾಶಿರಾಳನ್ನು ಆಸ್ಪತ್ರೆಗೆ ದಾಖಲು ಮಾಡಿ ಅಂದೇ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿದೆ. ಓದುವುದರಲ್ಲಿ ಭಾರೀ ಜಾಣೆಯಾಗಿದ್ದ ಮುಬಾಶಿರಾ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿಯೂ ನನಗೆ ನಾಳೆ ಪರೀಕ್ಷೆ ಮಾಡಲು ಅವಕಾಶ ಮಾಡಿಕೊಡಿ ಎಂದು ವೈದ್ಯರ ಬಳಿ ಕೇಳಿಕೊಂಡಿದ್ದರು. ಈ ವಿಚಾರವಾಗಿ ವೈದ್ಯರು ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಇದಾದ ಬಳಿಕ ಶಾಲಾ ಪ್ರಾಂಶುಪಾಲರ ಜೊತೆ ಚರ್ಚೆ ನಡೆಸಿ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆ ಬಳಿಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಬಗ್ಗೆ ವ್ಯವಸ್ಥೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಪರೀಕ್ಷೆಯನ್ನು ಆ್ಯಂಬುಲೆನ್ಸ್ನಲ್ಲಿಯೇ ನಡೆಸಿ ಪರೀಕ್ಷೆ ಮುಗಿದ ಬಳಿಕ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸಂದೀಪ್ ಕರ್ಮಾಲೆ ಹೇಳಿದರು.
ಬಡತನದ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿನಿ ಮುಬಾಶಿರಾ ಶಸ್ತ್ರಚಿಕಿತ್ಸೆಗೆ ಶಾಲಾ ಶಿಕ್ಷಕರು ನೆರವು ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಮುಬಾಶಿರಾ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನನಗೆ ಪರೀಕ್ಷೆ ಬರೆಯಲು ಶಿಕ್ಷಕರು ಅನುಮತಿ ನೀಡಿದ್ದಾರೆ. ಪೋಷಕರು ನನಗೆ ಸಾಥ್ ನೀಡಿದ್ದಾರೆ. ಮುಂದಿನ ಪತ್ರಿಕೆಯನ್ನು ನಾನು ಇದೇ ರೀತಿ ಬರೆಯುತ್ತೇನೆ ಎಂದು ಹೇಳಿದ್ದಾಳೆ.