ಹಳೇ ಮೈಸೂರು ಭಾಗ, ಅದರಲ್ಲೂ ಮಂಡ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯ ಕನಸು ಕಾಣುತ್ತಿದೆ. ಇದೇ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬೆಂಗಳೂರು – ಮೈಸೂರು ಹೆದ್ದಾರಿ ಉದ್ಘಾಟನೆ ಮಾಡಿಸಿ, ಬೃಹತ್ ಸಾರ್ವಜನಿಕ ಸಭೆಯನ್ನೂ ಮಾಡಲಾಯ್ತು. ಅದಕ್ಕೂ ಮೊದಲು 500 ಕಲಾ ತಂಡಗಳಿಂದ ಪ್ರಧಾನಿಗೆ ಅದ್ದೂರಿ ಸ್ವಾಗತ, ರಸ್ತೆಯಲ ಇಕ್ಕೆಲಗಳಲ್ಲಿ ಜನರನ್ನು ನಿಲ್ಲಿಸಿ ರೋಡ್ ಶೋ, ಜನರಿಂದ ಪುಷ್ಪವೃಷ್ಠಿ ಮಾಡಿಸಲಾಯ್ತು. ಜೊತೆಗೆ ಹೆದ್ದಾರಿಯ ರೆಡ್ ಕಾರ್ಪೆಟ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕಿದರು. ಇದೆಲ್ಲವೂ ಸರಿಯಾಗಿಯೇ ನಡೀತು. ಜನರು ಕೂಡ ಉಲ್ಲಾಸದಿಂದಲೇ ಬಾಗಿಯಾಗಿದ್ದರು. ಇದೊಂದು ಮಹತ್ವಪೂರ್ಣವಾದ ಕಾರ್ಯಕ್ರಮ ಆಗಿದ್ದರೂ ಭಾರತೀಯ ಜನತಾ ಪಾರ್ಟಿ ಕೆಲವೊಂದು ತಪ್ಪುಗಳನ್ನು ಮಾಡಿತು. ಈ ತಪ್ಪುಗಳಿಂದ ಮುಜುಗರಕ್ಕೂ ಒಳಗಾಗುವಂತಹ ಸ್ಥಿತಿ ನಿರ್ಮಾಣ ಆಯ್ತು. ಅದರಲ್ಲಿ ಪ್ರಮುಖ ಮೂರು ತಪ್ಪುಗಳನ್ನು ನೋಡೋದಾದರೆ..

4 ಮಹಾದ್ವಾರಗಳಲ್ಲಿ ಎಡವಟ್ಟು, ರಾತ್ರೋರಾತ್ರಿ ಬದಲಾವಣೆ..!
ಮಂಡ್ಯ ಜಿಲ್ಲೆಯಲ್ಲಿ ಅತಿಹೆಚ್ಚು ಒಕ್ಕಲಿಗ ಸಮುದಾಯದ ಜನರು ವಾಸ ಮಾಡುವ ಜಿಲ್ಲೆ. ಇಲ್ಲಿನ ಜನ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಬಿಜೆಪಿ ರಾಜಕೀಯ ಕಾರಣಕ್ಕಾಗಿ ಇತಿಹಾಸದಲ್ಲೇ ಇಲ್ಲದ ಉರಿಗೌಡ ಹಾಗು ದೊಡ್ಡ ನಂಜೇಗೌಡ ಮಹಾದ್ವಾರ ಎಂದು ಫ್ಯಾಕ್ಟರಿ ಸರ್ಕಲ್ಗೆ ನಾಮಕರಣ ಕಟೌಟ್ ಹಾಕಿತ್ತು. ಒಕ್ಕಲಿಗ ಸಮುದಾಯ ನಾಯಕರ ಹೆಸರುಗಳಾಗಿದ್ದರೆ ಜನರೂ ಸುಮ್ಮನೆ ಇರುತ್ತಿದ್ದರು. ಆದರೆ ಟಿಪ್ಪುವನ್ನು ಕೊಂದವರು ಎಂದು ಸುಳ್ಳು ಭಾಷಣ ಮಾಡುವ ಜೊತೆಗೆ ಮಹಾದ್ವಾರ ಎಂದು ಒಕ್ಕಲಿಗರ ಹೆಸರಲ್ಲಿ ದ್ವಾರ ನಿರ್ಮಾಣ ಮಾಡಿ, ಕೊಲೆಪಾತಕ ಪಟ್ಟ ಕಟ್ಟಿದ್ದಕ್ಕೆ ಜನ ಸಿಟ್ಟಿಗೆದ್ದಿದ್ದರು. ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶದ ಕಟ್ಟೆ ಒಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟಿಪ್ಪು ಸುಲ್ತಾನ್ ಕೊಂದವರು ಉರಿಗೌಡ, ದೊಡ್ಡ ನಂಜೇಗೌಡ ಎನ್ನುವುದು ಇತಿಹಾಸದ ಯಾವುದೇ ಪುಸ್ತಕದಲ್ಲಿ ಇಲ್ಲ, ಆದರೂ ಜಿಲ್ಲಾಡಳಿತ ಅವಕಾಶ ಕೊಟ್ಟ ಬಗ್ಗೆ ಪ್ರಶ್ನಿಸಿದ್ದರು. ಇದೆಲ್ಲಾ ಆದ ಬಳಿಕವೂ ಸಿ.ಟಿ ರವಿ ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ಅಂತಿಮವಾಗಿ ರಾತ್ರೋರಾತ್ರಿ ಬಾಲಗಂಗಾಧರನಾಥ ಮಹಾದ್ವಾರ ಎಂದು ಬದಲಾಯ್ತು. ಟಿಪ್ಪು ನಿಜ ಕನಸುಗಳು ಅನ್ನೋ ನಾಟಕದ ಕಾಲ್ಪನಿಕ ಹೆಸರುಗಳನ್ನು ಬಳಸಿದ್ದು ಬಿಜೆಪಿಗೆ ಇರುಸು ಮುರುಸು ಉಂಟಾಗಿದ್ದು ಸುಳ್ಳಲ್ಲ..
ಪ್ರಧಾನಿ ಮೋದಿಯಿಂದ ರೌಡಿ ಶೀಟರ್ಗೆ ನಮಸ್ಕಾರ..!!
ಪ್ರಧಾನಿ ಹುದ್ದೆಗೆ ಒಂದು ಘನತೆ, ಒಂದು ಮಱದೆ ಎನ್ನುವುದು ಇರುತ್ತದೆ. ನರೇಂದ್ರ ಮೋದಿ ಆ ಸ್ಥಾನದಲ್ಲಿ ಇದ್ದಾಗ ಪ್ರಧಾನಿ ಹುದ್ದೆಯ ಘನತೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದರು ಎನ್ನು ಮಾತುಗಳಿಗೆ. ಆದರೆ ಅದೇ ಪ್ರಧಾನಿ ನರೇಂದ್ರ ಮೋದಿ ಓರ್ವ ರೌಡಿ ಶೀಟರ್, ಕ್ರಿಕೆಟ್ ಬುಕ್ಕಿ, ಫೈಟರ್ ರವಿಗೆಕೈ ಮುಗಿದಿದ್ದಾರೆ. ಪ್ರಧಾನಿ ಮಂಡ್ಯದ ಹೆಲಿಪ್ಯಾಡ್ಗೆ ಬಂದಿಳಿದ ಸಂದರ್ಭದಲ್ಲಿ ನಾಗಮಂಗಲ ಟಿಕೆಟ್ ಆಕಾಂಕ್ಷಿಯಾಗಿರುವ ಫೈಟರ್ ರವಿ, ಪ್ರಧಾನಿ ಮೋದಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಫೈಟರ್ ರವಿಗೆ ನಮಸ್ಕರಿಸಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ತಪ್ಪಿಲ್ಲದಿದ್ದರೂ ಭಾರತೀಯ ಜನತಾ ಪಾರ್ಟಿ ಫೈಟರ್ ರವಿ ಪಕ್ಷ ಸೇರ್ಪಡೆಯನ್ನೇ ಈ ಹಿಂದೆ ರದ್ದು ಮಾಡಿದ್ದೇವೆ ಎಂದು ಘೋಷಿಸಿತ್ತು. ಆದರೆ ಇದೀಗ ಪ್ರಧಾನಿ ಸ್ವಾಗತಕ್ಕೇ ಫೈಟರ್ ರವಿಯನ್ನು ಮುಂದೆ ನಿಲ್ಲಿಸುವ ಮೂಲಕ ಯಾದ ಸಂದೇಶ ಕೊಟ್ಟಿದೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದನ್ನೇ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದ್ದು, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಮತ್ತೊಂದಿಲ್ಲ. ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಬಂದಿದೆ. ಈ ಘಟನೆ ಬಿಜೆಪಿಗೆ ನಾಚಿಗೇಡು ಎಂದು ಅಣಕಿಸಿದೆ. ಈ ಘಟನೆ ಕೂಡ ಬಿಜೆಪಿಯನ್ನು ಮುಜುಗರಕ್ಕೆ ಈಡಾಗುವಂತೆ ಮಾಡಿದೆ.
ಸಮಾವೇಶಕ್ಕೆ ಬಂದಿದ್ದ ಜನರಿಗೆ ಹಣ ಕೊಡದೆ ಸಂಕಷ್ಟ..!
ಯಾವುದೇ ಒಂದು ಪಕ್ಷ ಈ ರೀತಿಯ ಸಮಾವೇಶ ಮಾಡುವಾಗ ಜನರನ್ನು ಕರೆತರಲು ಇಂತಿಷ್ಟು ಎಂದು ಹಣ ಕೊಡುವುದು ಇತ್ತೀಚಿಗೆ ಪಾಲಿಸಿಕೊಂಡು ಬರ್ತಿರೋ ಭ್ರಷ್ಟ ವ್ಯವಸ್ಥೆಯ ಭಾಗ. ಹಣ ಕೊಡದಿದ್ದರೆ ಯಾರೂ ಸಮಾವೇಶಕ್ಕೆ ಬರಲ್ಲ, ಲಕ್ಷ ಲಕ್ಷ ಜನರ ಬೆಂಬಲವಿದೆ ಎಂದು ತೋರಿಸಿಕೊಳ್ಳಲಾದರೂ ಜನರನ್ನ ಸೇರಿಸಲೇಬೇಕಾದ ಅನಿವಾರ್ಯತೆ ಇದೆ ಎನ್ನುವುದು ರಾಜಕೀಯ ಪಕ್ಷಗಳ ಮಾತು. ಆದರೆ ಹಣ ಕೊಡುತ್ತೇವೆ ಎಂದು ಬಸ್ಗಳ ಮೂಲಕ ಜನರನ್ನು ಕರೆದುಕೊಂಡು ಬಂದು, ಆ ಬಳಿಕ ಹಣ ಕೊಡದಿದ್ದರೆ ಜನ ಸುಮ್ಮನೆ ಬಿಡುತ್ತಾರೆಯೇ..! ಇದೇ ರೀತಿಯ ಘಟನೆ ಮಂಡ್ಯದ ಮೋದಿ ಸಮಾವೇಶದಲ್ಲಿ ನಡೆದಿದೆ. ತಲಾ ಒಂದು ಗ್ರಾಮ ಪಂಚಾಯ್ತಿಗೆ ಮೂರು ಕೆಎಸ್ಆರ್ಟಿಸಿ ಬಸ್ಗಳನ್ನು ಕಳುಹಿಸಿದ್ದು, 2 ಬಸ್ಗಳಲ್ಲಿ ಬಂದಿದ್ದ ಜನರಿಗೆ ಹಣ ಕೊಟ್ಟಿದ್ದಾರೆ, ಇನ್ನೊಂದು ಬಸ್ನಲ್ಲಿ ಬಂದಿದ್ದ ಜನರಿಗೆ ಹಣ ಕೊಟ್ಟಿಲ್ಲ ಎಂದು ಹೊಸಗಾವಿ ಗ್ರಾಮ ಪಂಚಾಯ್ತಿ ಜನರು ಕಿಡಿಕಾರಿದ್ದಾರೆ. 300 ರೂಪಾಯಿ ಕೊಡ್ತೇವೆ ಎಂದು ಹೇಳಿ ಕರೆದುಕೊಂಡು ಬರಲಾಗಿತ್ತು. ಆದರೆ ಹಣ ಕೊಡದೆ ಮೋಸಮಾಡಿದ್ರು ಎನ್ನುವ ವೀಡಿಯೋ ವೈರಲ್ ಆಗಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಬಿಜೆಪಿ ಹೀಗೆ ಮಾಡಿದ್ದು, ಮುಜಗರ ತರಿಸಿದೆ.
ಖಾಲಿ ಕುರ್ಚಿಗೆ ಭಾಷಣ ಮಾಡಿದ ಪ್ರಧಾನಿ..!
ಜನ ಮೋದಿ ನೋಡಲು ಬಂದಿದ್ದರೋ..? ಹಣ ಕೊಡುತ್ತೇವೆ ಎಂದು ಭರವಸೆ ಕೊಟ್ಟು ಕರೆದುಕೊಂಡು ಬಂದಿದ್ದರೋ..? ಎನ್ನುವುದು ಬೇರೆ ವಿಚಾರ. ಆದರೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗಲೇ ಖಾಲಿ ಚೇರುಗಳು ಕಾಣಿಸಿಕೊಂಡಿದೆ. ಪ್ರಧಾನಿ ಭಾಷಣಕ್ಕೆ ಜನರ ಕೊರತೆ ಕಾಣಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಹಾಸ್ಯ ಮಾಡಿದೆ. ಮಂಡ್ಯ ಜಿಲ್ಲೆ ಭಾವನಾತ್ಮಕವಾಗಿ ಸೂಕ್ಷ್ಮತೆ ಇರುವ ಜಿಲ್ಲೆ. ಕಳೆದ ಭಾರಿ ಸುಮಲತಾ ಗೆಲುವು ನೋಡಿದ ಬಳಿಕ ಆದರೂ ರಾಜಕೀಯ ಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಮಂಡ್ಯ ಜನ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಅಲ್ಲಿನ ಜನರ ಮನಸ್ಸಿಗೆ ಘಾಸಿ ಆಗುವಂತಹ ಕೆಲಸ ಮಾಡಬಾರದು ಅನ್ನೋದನ್ನು ಬಿಜೆಪಿ ನಾಯಕರು ಮುಂದಾದರೂ ಪಾಲಿಸಬೇಕಿದೆ. ಇಲ್ಲದಿದ್ದರೆ ಈಗ ಕೆ.ಆರ್ ಪೇಟೆಯಲ್ಲಿ ಆರಂಭವಾಗಿರುವ ರಾಜಕೀಯ ಅಂಗಡಿ ಬಾಗಿಲು ಬಂದ್ ಮಾಡುವ ಕಾಲ ದೂರವಿಲ್ಲ.
ಕೃಷ್ಣಮಣಿ











