ರಾಜ್ಯ ವಿಧಾನಸಭೆ (State Assembly) ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಬಂದೆರಗಿದೆ, ಹಳೇ ಮೈಸೂರು ಭಾಗದ ಪ್ರಬಲ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಆರ್ ಧ್ರುವನಾರಾಯಣ (Senior Congress leader R Dhruvanarayan) ಅಕಾಲಿಕ ಮರಣ ರಾಜ್ಯ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ. ಧ್ರುವನಾರಾಯಣ್ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. 1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ (As the working president of KPCC) ಕೆಲಸ ಮಾಡುತ್ತಿದ್ದರು. 1983 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಧ್ರುವನಾರಾಯಣ್ 1984 ರಲ್ಲಿ ಜಿಕೆವಿಕೆಯ ಎನ್ ಎಸ್ ಯುಐ ಅಧ್ಯಕ್ಷನಾಗಿ ಆಯ್ಕೆಯಾದರು. ನಂತರ 1986 ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಆದರೆ 1999ರಲ್ಲಿ ಮೊದಲ ಬಾರಿಗೆ ಸಂತೆಮಾರಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು.
ಆದರೆ 2004 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1 ಮತದ ಅಂತರದ ಗೆಲುವು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದರು.ನಂತರ 2008ರಲ್ಲಿ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ 2009 ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ ಒಂದು ಮತದಿಂದ ರೋಚಕವಾಗಿ ಗೆದ್ದು ದೇಶದಾದ್ಯಂತ ಧ್ರುವನಾರಾಯಣ ಸುದ್ದಿಯಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ರಾಜಕೀಯ ಜೀವನವನ್ನು ಈ ಗೆಲುವಿನೊಂದಿಗೆ ಭದ್ರಪಡಿಸಿದ್ದರು. ಕ್ಷೇತ್ರ ಮರುವಿಂಗಡಣೆಯ ನಂತರ ಸಂತೇಮರಹಳ್ಳಿ ಕ್ಷೇತ್ರ ಇರಲಿಲ್ಲ. 2008ರ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
2009ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಧ್ರುವನಾರಾಯಣ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ವಿರುದ್ಧ 4,002 ಮತಗಳ ಅಂತರದಿಂದ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋದರು. ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರು.
ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ 1,817 ಮತಗಳ ಅಂತರದಲ್ಲಿ ಸೋತು, ನಿರಾಸೆ ಅನುಭವಿಸಿದ್ದರು. ಫಲಿತಾಂಶದ ಬಳಿಕ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ವರಿಷ್ಠರು ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊರಿಸಿತ್ತು. ಮತ್ತೆ ರಾಜ್ಯ ರಾಜಕಾರಣಕ್ಕೆ ಬರಲು ಇಚ್ಛಿಸಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದರು. ಅವರಿಗೆ ಟಿಕೆಟ್ ನೀಡುವುದು ನಿಚ್ಚಳವೂ ಆಗಿತ್ತು.