ಕಲಬುರಗಿ: ಹೋಳಿ ಹಬ್ಬದ ಕಾಮ ದಹನ ವೇಳೆ ನಡೆದ ಗಲಾಟೆಯಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ರವಿ ಸಾಬಣ್ಣ ಓಚರ(25) ಮೃತ ಯುವಕ.
ಗ್ರಾಮದ ಮರಗಮ್ಮನ ದೇವಸ್ಥಾನ ಆವರಣದಿಂದ ಬೆಂಕಿಯ ಕಿಡಿ ಹೊತ್ತೊಯ್ದು ವಿವಿಧೆಡೆ ಕಾಮದಹನ ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಒಂದೆಡೆ ಸೇರಿದ್ದರು. ಬೆಂಕಿಯ ಕಿಡಿ ತೆಗೆದುಕೊಂಡು ಹೋಗುವ ವಿಚಾರವಾಗಿ ಕೆಲವರ ನಡುವೆ ಜಗಳವಾಗಿದೆ
ಈ ವೇಳೆ ರವಿ ಎಂಬಾತನನ್ನು ಜೋರಾಗಿ ತಳ್ಳಿದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತನ ಕುಟುಂಬಸ್ಥರು ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.