ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನಪ್ರಿಯರಾಗಿರುವ ಹೇಮಂತ್ ಹೆಗ್ಡೆ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ “ನಮ್ ನಾಣಿ ಮದ್ವೆ ಪ್ರಸಂಗ” ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಸಂಗೀತ ನಿರ್ದೇಶಕ ವಿ.ಮನೋಹರ್ ಹವ್ಯಕ ಭಾಷೆಯ ಈ ಹಾಡನ್ನು ಬಿಡುಗಡೆ ಮಾಡಿದರು. ಹೇಮಂತ್ ಹೆಗ್ಡೆ ಅವರೆ ಬರೆದಿರುವ ಈ ಹಾಡಿಗೆ ರವಿ ಮುರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. A2 music ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ನಮ್ ನಾಣಿ ಮದ್ವೆ ಪ್ರಸಂಗ” ಅಪ್ಪಟ ಮನೋರಂಜನೆಯ ಚಿತ್ರ. ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಈಗಿನ ಜ್ವಲಂತ ಸಮಸ್ಯೆ ಈ ಚಿತ್ರದ ಕಥೆಯ ಒಂದು ಭಾಗ. ಆದರೆ ಈ ಚಿತ್ರವನ್ನು ನೋಡಿದ ಪ್ರೇಕ್ಷಕ ನಗೆಗಡಲಲ್ಲಿ ತೇಲುವುದು ನಿಜ. ಅಷ್ಟು ಹಾಸ್ಯ ನಮ್ಮ ಚಿತ್ರದಲ್ಲಿದೆ. ಶಿರಸಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಅಲ್ಲಿನ ಪ್ರಾಂತೀಯ ಭಾಷೆಯಲ್ಲೇ ಹೆಚ್ಚು ಸಂಭಾಷಣೆ ಇರುತ್ತದೆ. ನಾನು ಈ ತನಕ ಕಮರ್ಷಿಯಲ್ ಚಿತ್ರಗಳನ್ನೇ ಮಾಡಿದ್ದೆ. ಆದರೆ, ಒಂದು ಪ್ರಾಂತ್ಯವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿರುವ ಮೊದಲ ಚಿತ್ರವಿದು. ಎರಡು ಹಾಡುಗಳಿದ್ದು, ವಿ.ಮನೋಹರ್ ಹಾಗೂ ರವಿ ಮುರೂರ್ ಸಂಗೀತ ನೀಡಿದ್ದಾರೆ. ಸಂದೀಪ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೃಷ್ಣ ಭಂಜನ್ ಈ ಚಿತ್ರದ ಛಾಯಾಗ್ರಾಹಕರು. ನಾನೇ ನಾಯಕನಾಗಿ ನಟಿಸಿದ್ದೇನೆ. ಶೃತಿ ನಂದೀಶ್, ಶ್ರೇಯಾ ವಸಂತ್ ನಾಯಕಿಯರು. ರಾಜೇಶ್ ನಟರಂಗ, ಪದ್ಮಜಾ ರಾವ್, ಸುನೇತ್ರ ಪಂಡಿತ್, ಮಧು ಹೆಗ್ಡೆ, ರೇವಣ್ಣ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಏಪ್ರಿಲ್ 7 ರಂದು ತೆರೆಗೆ ಬರಲಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ – ನಾಯಕ ಹೇಮಂತ್ ಹೆಗ್ಡೆ.
ನಾನು ಚಿತ್ರ ನೋಡಿದ್ದೀನಿ. ತುಂಬಾ ಚೆನ್ನಾಗಿದೆ. ಇವತ್ತು ಬಿಡುಗಡೆಯಾಗಿರುವ ಹಾಡಿಗೆ ರವಿ ಮುರೂರ್ ಸಂಗೀತ ನೀಡಿದ್ದಾರೆ. ನಾನು ಸಂಗೀತ ನೀಡಿರುವ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು ಸಂಗೀತ ನಿರ್ದೇಶಕ ವಿ.ಮನೋಹರ್.
ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಂದೀಪ್ ನಾಗರಾಜ್.
ಚಿತ್ರದ ನಾಯಕಿಯರಾದ ಶೃತಿ ನಂದೀಶ್, ಶ್ರೇಯಾ ವಸಂತ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಮಧು ಹೆಗ್ಡೆ, ರೇವಣ್ಣ ಸಿದ್ದಯ್ಯ “ನಮ್ ನಾಣಿ ಮದ್ವೆ ಪ್ರಸಂಗ”ದ ಬಗ್ಗೆ ಮಾತನಾಡಿದರು.