ಹಾಸನ : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಯಾತ್ರೆ ಕೈಗೊಂಡಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದರೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾಗಿದೆ. ಇತ್ತ ನಾವೇನು ಕಮ್ಮಿ ಅಂತಾ ಜೆಡಿಎಸ್ ಪಕ್ಷವು ಪಂಚರತ್ನ ಯಾತ್ರೆ ನಡೆಸುವ ಮೂಲಕ ರಾಜ್ಯದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಆದರೆ ಜೆಡಿಎಸ್ನ ಭದ್ರಕೋಟೆ ಎನಿಸಿರುವ ಹಾಸನದಲ್ಲಿಯೇ ಜೆಡಿಎಸ್ ಈ ಯಾತ್ರೆಯನ್ನು ಮಾಡಲು ಮನಸ್ಸು ಮಾಡದೇ ಇರೋದು ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಕೊಡೋದು ಯಾರಿಗೆ ಅನ್ನೋ ಗೊಂದಲ ಬಗೆಹರಿಯುತ್ತಿಲ್ಲ. ಹೀಗಾಗಿ ಟಿಕೆಟ್ ಗೊಂದಲ ಬಗೆಹರಿಯದೇ ಇರೋದ್ರಿಂದ ಕ್ಷೇತ್ರದಲ್ಲಿ ಸದ್ಯಕ್ಕೆ ಬೇಡ ಅನ್ನೋ ನಿರ್ಧಾರಕ್ಕೆ ದಳಪತಿಗಳು ಬಂದಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಟಿಕೆಟ್ ಯಾರಿಗೆ ಎಂದು ಅಂತಿಮ ತೀರ್ಮಾನವಾದ ಬಳಿಕವೇ ಹಾಸನದಲ್ಲಿ ಪಂಚರತ್ನ ಯಾತ್ರೆ ನಡೆಸೋಣ ಎಂದು ದಳಪತಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 10 ರಿಂದ 17ರವರೆಗೆ ಹಾಸನ ಜಿಲ್ಲೆಯಲ್ಲಿ ಪಂಚರತ್ನಯಾತ್ರೆ ನಡೆಯುತ್ತಿದೆ. ಹಾಸನ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಆದರೆ ಹಾಸನ ಕ್ಷೇತ್ರವೊಂದರಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವೆ ಜಟಾಪಟಿ ನಡೆಯುತ್ತಿದೆ. ಪಂಚರತ್ನಯಾತ್ರೆ ನಡೆಸಿದರೆ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆ ಇದೆ. ಅಲ್ಲದೇ ಎರಡೂ ಬಣದವರು ಕಾರ್ಯಕ್ರಮ ಆಯೋಜನೆಗೆ ಪ್ರತ್ಯೇಕ ಸಿದ್ಧತೆ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಇವರಿಬ್ಬರ ಜಟಾಪಟಿಯಿಂದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಗೊಂದಲ ಏರ್ಪಡಬಾರದು ಎಂಬ ಕಾರಣಕ್ಕೆ ಜೆಡಿಎಸ್ ವರಿಷ್ಠರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.