ಕಳೆದ ಎರಡ್ಮೂರು ದಿನದಿಂದ ರಾಜ್ಯದಲ್ಲೀ ಭಾರೀ ಸುದ್ದಿ ಮಾಡಿರುವ ವಿಚಾರ ಅಂದ್ರೆ ಲೋಕಾಯುಕ್ತ ದಾಳಿ. ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿ ಹಾಗು ನಿವಾಸದ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತರು ಬರೋಬ್ಬರಿ 8 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದರು. ಆ ಬಳಿಕ ಐವರನ್ನು ಅರೆಸ್ಟ್ ಮಾಡಿ ಜೈಲಿಗೂ ಕಳುಹಿಸಲಾಗಿದೆ. ಅದರಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಇನ್ನು ವಿಚಾರಣೆ ಮಾಡಿಲ್ಲ, ನೋಟಿಸ್ ಕೂಡ ಕೊಟ್ಟಿಲ್ಲ, ಈ ನಡುವೆ ಲೋಕಾಯುಕ್ತರಿಗೆ ಸಿಕ್ಕಿರುವ 8 ಕೋಟಿ ರೂಪಾಯಿ ಅಂತಹ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಅಲ್ಲವೇ ಅಲ್ಲ. ಕಳೆದ 3 ವರ್ಷಗಳಿಂದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಿಗಮದ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೋಟಿ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
KSDL ಎಂಪ್ಲಾಯೀಸ್ ಯೂನಿಯನ್ ನಿಂದ ಮಾಹಿತಿ ಸ್ಫೋಟ..!
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಲ್ಲಿ ನಡೆದಿರುವ ಅಕ್ರಮಗಳ ಕುರಿತು ಕೆಎಸ್ಡಿಎಲ್ ಎಂಪ್ಲಾಯೀಸ್ ಯೂನಿಯನ್ ಶಿವಶಂಕರ್ ಸುದ್ದಿಗೋಷ್ಟಿ ಕರೆದು ಮಾತನಾಡಿದ್ದು, ಕೆಎಸ್ಡಿಎಲ್ ಚೇರ್ಮನ್ ಆಗಿದ್ದ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಎಫ್ಐಆರ್ ಮಾಡಿದೆ. ತಂದೆಯ ಪರವಾಗಿ ಮಗ ಲಂಚ ಸ್ವೀಕಾರ ಮಾಡಿದರಿಂದ ಬಂಧನ ಮಾಡಲಾಗಿದೆ. ಕೆಎಸ್ಡಿಎಲ್ನಲ್ಲಿ ಕಚ್ಚಾ ವಸ್ತುಗಳನ್ನ ಖರೀದಿಗೆ ಒಂದು ಸ್ಟೋರ್ ಮ್ಯಾನ್ಯುಯಲ್ ಇದೆ. ಕಾರ್ಖಾನೆ ಒಳಗೆ ಯಾರಿಗೆ ಏನು ಅಧಿಕಾರ ಇದೆ ಅನ್ನೋದು ಅದರಲ್ಲಿದೆ. ಈ ವ್ಯವಹಾರ ಬೋರ್ಡ್ ಅಪ್ರೂವಲ್ ನಿಂದ ಆಗಿರುತ್ತದೆ. ಕಾರ್ಖಾನೆ ಕಾಪಾಡಬೇಕಿರುವುದು ಆಡಳಿತ ವ್ಯವಸ್ಥೆ. ವ್ಯವಸ್ಥಾಪಕ ನಿರ್ದೇಶಕರು ಇದರ ಬಗ್ಗೆ ಗಮನ ಇಡಬೇಕು. ಅವರೇ ಈ ಭ್ರಷ್ಟಾಚಾರದ ಜವಾಬ್ದಾರರು ಎಂದು ದೂರಿದ್ದಾರೆ.
ಬಿಡ್ಡಿಂಗ್ ನಲ್ಲೇ ದುಬಾರಿ ಬೆಲೆಗೆ ಖರೀದಿಗೆ ಒಪ್ಪಿಗೆ..!
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಲ್ಲಿ ಪರ್ಚೇಸ್ ಕಮಿಟಿ ಇದೆ. ಉಮಾಶಂಕರ್ ಪರ್ಚೇಸ್ ಕಮಿಟಿ ಚೇರ್ಮನ್ ಆಗಿದ್ದಾರೆ. ಇವರು ಯಾವ ಕಚ್ಚಾ ಸಾಮಗ್ರಿ ಕೊಂಡುಕೊಳ್ಳಬೇಕು. ಅದರ ಬೆಲೆ ಏನು..? ಎಷ್ಟು ಕಚ್ಚಾ ಸಾಮಗ್ರಿ ಬೇಕು..? ಅನ್ನೋದನ್ನ ಈ ಸಮಿತಿ ನಿರ್ಧರಿಸುತ್ತೆ. ಮೈಸೂರ್ ಸ್ಯಾಂಡಲ್ ಸಾಬೂನು ಉತ್ಪಾದನೆಗೆ 125 ವಿವಿಧ ಸಾಮಗ್ರಿ ಬೇಕಾಗುತ್ತದೆ. ಸ್ಯಾಂಡಲ್ ಆಯಿಲ್ ಬೆಲೆ ಓಪನ್ ಮಾರ್ಕೆಟ್ನಲ್ಲಿ 1,550 ರೂಪಾಯಿ ಇದೆ. ಆದರೆ ಟೆಂಡರ್ ದಾರರು 2,625 ರೂಪಾಯಿ ಕೋಟ್ ಮಾಡಿದ್ದಾರೆ. ಸ್ಯಾಂಡಲ್ ಆಯಿಲ್ ಖರೀದಿಯಲ್ಲೇ ಸುಮಾರು 50 ಕೋಟಿ ರೂಪಾಯಿ ನಷ್ಟ ಉಂಟಾಗುತ್ತದೆ. ಈ ಅಧಿಕಾರಿಗಳನ್ನ ಲೋಕಾಯುಕ್ತರು ಮೊದಲು ಅರೆಸ್ಟ್ ಮಾಡಿ ತನಿಖೆ ಮಾಡಿದ್ರೆ, ಇನ್ನಷ್ಟು ಸತ್ಯಾಂಶ ಹೊರ ಬರುತ್ತೆ ಎಂದು ಆಗ್ರಹಿಸಿದ್ದಾರೆ.
ಈಗ ಲೂಟಿ ಮಾಡ್ತಾರೆ, ಮುಂದೆ ಕ್ಲೋಸ್ ಮಾಡ್ತಾರೆ..!
ಈಗಾಗಲೇ ಶಿವಮೊಗ್ಗದ ಭದ್ರಾವತಿಯಲ್ಲಿ VISL (Visvesvaraya Iron And Steel Plant) ಕಂಪನಿಯನ್ನು ಮುಚ್ಚುವ ನಿರ್ಧಾರ ಮಾಡಿದ್ದು, ಅಲ್ಲಿನ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ನಲ್ಲೂ ಹತ್ತು ಸಾವಿರ ಕುಟುಂಬಗಳು ಈ ಸಂಸ್ಥೆಯನ್ನು ಅವಲಂಬಿಸಿವೆ. ಹೀಗೆ ಲೂಟಿ ಮಾಡಿದ್ರೆ ಸಂಸ್ಥೆ ಉಳಿಯುತ್ತಾ..? ಇನ್ನೊಂದು ಸರ್ಕಾರ ಬಂದು ಸಾಬೂನು ಕಾರ್ಖಾನೆ ಲಾಸ್ನಲ್ಲಿದೆ ಅಂತ ಕ್ಲೋಸ್ ಮಾಡ್ತಾರೆ. ಸರ್ ಎಂ ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಈ ಸಂಸ್ಥೆ. ಒಮ್ಮೆ ಸಿಎಂ ಸಂಸ್ಥೆಗೆ ಬಂದಾಗ ಈ ಕಾರ್ಖಾನೆ ಉಳಿಸಿ, ಹತ್ತು ಸಾವಿರ ಕೋಟಿ ಬೇಕಾದರೂ ಕೊಡ್ತೀನಿ ಅಂದ್ರು. ಈಗ ಲೂಟಿ ಮಾಡ್ತಿದ್ದಾರೆ. ಈ ಸಂಸ್ಥೆಯನ್ನೇ ನಂಬಿಕೊಂಡಿರುವ ನಮ್ಮ ಕುಟುಂಬಗಳ ಪರಿಸ್ಥಿತಿ ಏನಾಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪು ಸಂಸ್ಥೆಯಲ್ಲಿ 300 ಕೋಟಿ ಹಗರಣ..!
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ನಲ್ಲಿ ಕಚ್ಚಾ ವಸ್ತುಗಳಿಗೆ ಕಳೆದ ಮೂರು ವರ್ಷದಲ್ಲಿ ಹೆಚ್ಚು ಕಡಿಮೆ 700 ಕೋಟಿ ವೆಚ್ಚ ಮಾಡಿದ್ದಾರೆ. ಇದರಲ್ಲಿ 350 ಕೋಟಿ ಸಂಸ್ಥೆಗೆ ನಷ್ಟ ಆಗಿದೆ. ಸೋಪ್ ನೂಡಲ್ಸ್ ಮತ್ತು ಸ್ಯಾಂಡಲ್ ಆಯಿಲ್ ಗೆ 300 ಕೋಟಿ ಕೊಟ್ಟಿದ್ದಾರೆ ಎಂದು ಕೆಎಸ್ಡಿಎಲ್ ಯೂನಿಯನ್ನ ಮೋಹನ್ ರೆಡ್ಡಿ ಆರೋಪ ಮಾಡಿದ್ದಾರೆ. ಇನ್ನು ಈಗಾಗಲೇ ಮಾರ್ಚ್ ತನಕ ಬೇಕಾದ ಕಚ್ಚಾ ವಸ್ತುಗಳು ಸಂಸ್ಥೆಯಲ್ಲಿ ಇದೆ. ಆದರೂ ಎಲೆಕ್ಷನ್ ಬರ್ತಿದೆ ಅಂತಾ ಈಗ ಅರ್ಜೆಂಟಾಗಿ ಟೆಂಡರ್ ಮಾಡ್ತಿದ್ದಾರೆ. ಲೋಕಾಯುಕ್ತರು ಇದನ್ನ ಕೂಡ ತನಿಖೆ ನಡೆಸಬೇಕು. ಸುಮಾರು 300 ಕೋಟಿ ಅವ್ಯವಹಾರ ಆಗಿದೆ ಎಂದು ಕೆಎಸ್ ಡಿಎಲ್ ಯೂನಿಯನ್ನ ಶಿವಶಂಕರ್ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಸಣ್ಣದಾಗಿ 40 ಲಕ್ಷದ ಡೀಲಿಂಗ್ ಬಗ್ಗೆ ಟ್ರ್ಯಾಪ್ ಮಾಡಿದ ಲೋಕಾಯುಕ್ತರ ಬಲೆಗೆ ತಿಮಿಂಗಲಗಳೇ ಬೀಳುವ ಸಾಧ್ಯತೆ ಇದೆ.