ಬೆಂಗಳೂರು: ಲೋಕಾಯುಕ್ತ ಇರುವುದೇ ಭ್ರಷ್ಟಾಚಾರ ನಿಗ್ರಹಕ್ಕೆ, ಅದು ಸರ್ವಸ್ವತಂತ್ರವಾಗಿದೆ. ಲೋಕಾಯುಕ್ತ ಮುಕ್ತವಾಗಿ ಸಮಗ್ರ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಕುರಿತು ಮಾತನಾಡಿದ ಅವರು, ಶಾಸಕರ ಪುತ್ರನ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ, ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಎಸಿಬಿ ರಚಿಸಿ ಲೋಕಾಯುಕ್ತ ಹಲ್ಲು ಕೀಳುವ ಪ್ರಯತ್ನ ನಾವು ಮಾಡಿಲ್ಲ, ಅದನ್ನು ಮಾಡಿರುವುದು ಕಾಂಗ್ರೆಸ್. ಲೋಕಾಯುಕ್ತಕ್ಕೆ ಸಂಪೂರ್ಣ ಮುಕ್ತ ಅಧಿಕಾರ ನೀಡುವ ಮರು ಆದೇಶ ನೀಡಿ ಲೋಕಾಯುಕ್ತವನ್ನು ಮರುಸ್ಥಾಪಿಸಿದ್ದೇ ಬಿಜೆಪಿ ಸರ್ಕಾರ ಎಂದು ತಿಳಿಸಿದರು.

ಮುಕ್ತವಾಗಿ ತನಿಖೆ ನಡೆದು ಹಣ ಯಾರಿಗೆ ಸೇರಿದೆ ಎನ್ನುವ ಮಾಹಿತಿ ಹೊರಗೆ ಬರಲಿ, ಸತ್ಯ ಜನರಿಗೆ ತಿಳಿದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿವೆ ಮತ್ತು ಅಲ್ಲಲ್ಲೇ ಮುಚ್ಚಿಹೋಗಿವೆ. ಇಂದು ಬಿಜೆಪಿ ವಿರುದ್ಧ ಇನ್ನಿಲ್ಲದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅಂದು ಎಸಿಬಿ ರಚಿಸಿ ಇಂತಹ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇ ಕಾಂಗ್ರೆಸ್ ನವರು, ಹೀಗಾಗಿ ಇಂದು ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆಲ್ಲಿದೆ ಎಂದು ಪ್ರಶ್ನಿಸಿದರು.






