ಚಿಕ್ಕಮಗಳೂರು : ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇದೀಗ ಹೊಸ ಚುನಾವಣೆ ಸಮೀಪಿಸುತ್ತಿದ್ದರೂ ಸಹ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡೋದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಹೋದಲ್ಲಿ ಬಂದಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ತಮಗಾದ ಅನ್ಯಾಯದ ಬಗ್ಗೆ ಮಾತನಾಡುತ್ತಲೇ ಇರುವ ಹೆಚ್.ಡಿ ಕುಮಾರಸ್ವಾಮಿ ಇಂದೂ ಸಹ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಬಗ್ಗೆ ಚರ್ಚೆ ಮಾಡೋಕೆ ಬರಬೇಡಿ ಸಿದ್ದರಾಮಯ್ಯನವರೇ, ಈ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುವ ಹಿಂದೆ ಸಿದ್ದರಾಮಯ್ಯರ ಪಾಲು ಇದೆ ಎಂದು ಆರೋಪಿಸಿದ್ದಾರೆ . ನಾನು ಅಧಿಕಾರಾವಧಿಯಲ್ಲಿ ತಾಜ್ ಹೋಟೆಲ್ನಲ್ಲಿದ್ದೆ ಎನ್ನುತ್ತೀರಾ..? ನಾನು ಬೆಳಗ್ಗೆ 9 ಗಂಟೆಯಿಂದ ಕೆಲಸ ಮಾಡುತ್ತಿದ್ದೆ. ನನಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಬಂಗಲೆಯನ್ನೇ ನೀಡಲಿಲ್ಲ. ಹೀಗಿರುವಾಗ ನಾನು ಎಲ್ಲಿಗೆ ಹೋಗಬೇಕಿತ್ತು..? ಅಂತಾ ಪ್ರಶ್ನೆ ಮಾಡಿದ್ದಾರೆ .
ನನ್ನ ಅಧಿಕಾರಾವಧಿಯಲ್ಲಿ ನಾನು ಕ್ಷೇತ್ರ ಅಭಿವೃದ್ಧಿಗೆಂದು ಕಾಂಗ್ರೆಸ್ ಶಾಸಕರಿಗೂ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದೆ. ಕೊಡಗಿನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದೇನೆ. ನಾನು ಬಡವರನ್ನು ಭೇಟಿ ಮಾಡಿದಷ್ಟು ಇನ್ಯಾರೂ ಭೇಟಿ ಮಾಡಿರಲಿಕ್ಕಿಲ್ಲ. ನಾನು ಎಲ್ಲಾ ರೀತಿಯಲ್ಲಿಯೂ ಸಿಎಂ ಆಗಿ ಸರಿಯಾಗಿಯೇ ಆಡಳಿತವನ್ನು ನಡೆಸಿಕೊಂಡು ಹೋಗಿದ್ದೇನೆ. ನಿಮಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ಮೈತ್ರಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಸಿದ್ದರಾಮಯ್ಯ ಬಿಡುತ್ತಿರಲಿಲ್ಲ ಎಂದು ಹೆಚ್ಡಿಕೆ ಕುಟುಕಿದ್ದಾರೆ.
ಸಿದ್ದರಾಮಯ್ಯನವರೇ ಪದೇ ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ. ರಾಜ್ಯದ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಬರೋಕೆ ಬಿಜೆಪಿಯ ಜೊತೆಯಲ್ಲಿ ನಿಮ್ಮ ಪಾಲೂ ಇದೆ. ಕಳೆದ ಬಾರಿಯ ಚುನಾವಣೆಯ ಮುನ್ನ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ರಿ. ಆದರೆ ಖಜಾನೆಯಲ್ಲಿ ದುಡ್ಡು ಇಟ್ಟಿರಲಿಲ್ಲ. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಹಣ ನೀಡಿದ್ದೇನೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡೋದಕ್ಕೂ ನಾನು ಸಿದ್ಧನಿದ್ದೇನೆ. ನಿಮ್ಮಿಂದ ನಾನು ಆಡಳಿತ ಮಾಡೋದು ಹೇಗೆ ಎಂದು ಕಲಿಯಬೇಕಾಗಿಲ್ಲ. ಕೊಟ್ಟ ಕುದುರೆ ಅಂತೀರಲ್ಲ… ಕುದುರೆ ಕಾಲು ಕತ್ತರಿಸಿದರೆ ಅದನ್ನು ಓಡಿಸೋದು ಹೇಗೆ..? ಜನರು ಯಾರ ಆಡಳಿತ ಯಾವ ರೀತಿ ಇದೆ ಅನ್ನೋದನ್ನ ನೋಡಿದ್ದಾರೆ. ಅಧಿಕಾರ ಇದ್ದರೂ ಇರದೇ ಇದ್ದರೂ ನನ್ನಷ್ಟು ಜನರನ್ನು ಸಮೀಪದಿಂದ ನೋಡಿದವರು ಇನ್ಯಾರೂ ಇಲ್ಲ ಎಂದು ಗುಡುಗಿದ್ದಾರೆ.