ಯಾವುದೇ ಒಂದು ಭಾಷೆಯ ಸಂಮೃದ್ಧ ಬೆಳವಣಿಗೆಯು ಆಯಾ ಭಾಷೆಗಳಲ್ಲಿ ಪ್ರತಿದಿನ ಹೊಸ ಹೊಸ ಶಬ್ಧಗಳಿಗೆ ನಿರಂತರವಾಗಿ ಜನ್ಮನೀಡಬಲ್ಲ ಪ್ರಯೋಗಾತ್ಮಕ ಪ್ರಕ್ರೀಯೆಗಳನ್ನು ಅವಲಂಬಿಸಿರುತ್ತವೆ. ಭಾಷೆಯೊಂದು ಹುಲುಸಾಗಿ ಬೆಳೆಯಲು ಹೊಸ ಶಬ್ಧಗಳ ಹುಟ್ಟು ಒಂದು ನಿರ್ಣಾಯಕ ಘಟ್ಟ.
ಭಾಷೆಯು ಸದಾ ಚಲನಶೀಲವಾಗಿ ಬಳಕೆಯಾಗುತ್ತಿದ್ದರೆ ಮಾತ್ರ ಸರಿಯಾದ ಪರಿಪೂರ್ಣವಾಗಿ ಬೆಳೆಯಬಲ್ಲುದು. ಸಂಸ್ಕೃತವೆಂಬ ಮಧ್ಯಪ್ರಾಚ್ಯದ ಸಿರಿಯಾ ಮೂಲದ ಭಾಷೆ ಭಾರತಕ್ಕೆ ವಲಸೆ ಬಂದು ಇಲ್ಲಿನ ನೆಲಮೂಲದ ದ್ರಾವಿಡ ಭಾಷೆಗಳ ಸಾರವನ್ನು ಹೀರಿಕೊಂಡು ಬೆಳೆದರೂ ಅದು ಕೇವಲ ಪುರೋಹಿತರ ಹೊಟ್ಟೆಹೊರೆಯುವ ಭಾಷೆಯಾಗಿ ಸಿಮಿತಗೊಂಡಿದ್ದರಿಂದ ಕಾಲಕ್ರಮೇಣ ನಶಿಸಿಹೋಯಿತು.
ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಯಲ್ಲಿ ವಚನ ಚಳುವಳಿಯ ಕೊಡುಗೆ ಅನನ್ಯ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶರಣರು ತಮ್ಮ ವಚನ ಚಳುವಳಿಯ ಮುಖೇನ ಅನೇಕ ಹೊಸ ಪಾರಿಭಾಷಾಕ ಶಬ್ಧಗಳನ್ನು ಪ್ರಯೋಗಿಸಿದರು. “ಕಾಯಕ ” ಮತ್ತು ” ದಾಸೋಹ ” ಎಂಬ ಎರಡು ಅದ್ಭುತ ಪಾರಿಭಾಷಿಕ ಶಬ್ಧಗಳು ವಚನಕಾರರು ನೀಡುವುದರ ಜೊತೆಗೆ ಇನ್ನೂ ಅನೇಕ ಹೊಸ ಶಬ್ಧಗಳನ್ನು ಪ್ರಥಮವಾಗಿ ಬಳಸಿ ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಭಾಷೆಯ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದರು. ಆಯಾ ಕಾಲಘಟ್ಟದ ಲೇಖಕರು ತಮ್ಮ ಕ್ರೀಯಾಶೀಲ ಬರವಣಿಗೆಗಳ ಮೂಲಕ ಆಯಾ ಭಾಷೆಗಳನ್ನು ಶ್ರೀಮಂತಗೊಳಿಸಿದರು.

ಅದೇ ರೀತಿ ಸರ್ವಜ್ಞಮೂರ್ತಿಯು ತನ್ನ ಅನುಪಮ ತ್ರಿಪದಿಗಳಲ್ಲಿ ಹೊಸ ಪಾರಿಭಾಷಿಕ ಶಬ್ಧಗಳನ್ನು ಹುಟ್ಟುಹಾಕಿದ ಅಪರೂಪದ ವಿದ್ವಾಂಸ. ಸರ್ವಜ್ಞನ ಪ್ರತಿಯೊಂದು ತ್ರಿಪದಿಯೂ ವಿನೂತನ ಭಾಷಾ ಪ್ರಯೋಗದಿಂದ ಹೆಣೆದ ಅತ್ಯುನ್ನತ ಅಕ್ಷರ ಗೊಂಚಲುಗಳು. ಹೆಣ್ಣಿನ ಜನನೇಂದ್ರಿಯವನ್ನು ತನ್ನ ಕೆಲವು ತ್ರಿಪದಿಗಳಲ್ಲಿ ಸರ್ವಜ್ಞಮೂರ್ತಿ “ಕಾಮನಕೆರೆ ” ಹಾಗೂ “ಉಚ್ಚೆಯಬಚ್ಚಲು ” ಎಂಬ ಹೊಚ್ಚ ಹೊಸ ಪಾರಿಭಾಷಿಕ ಶಬ್ಧಗಳ ಮೂಲಕ ಗುರುತಿಸಿದ್ದನ್ನು ಸರ್ವಜ್ಞನನ್ನು ಓದಿದವರಿಗೆಲ್ಲ ತಿಳಿದಿರುವ ವಿಷಯ. ಈ ದಿಸೆಯಲ್ಲಿ ಇನ್ನೂ ಅನೇಕ ಜನ ಬರಹಗಾರರು ಅನೇಕ ಬಗೆಯ ಹೊಸ ಹೊಸ ಶಬ್ಧಗಳನ್ನು ಬಳಸುವ ಮೂಲಕ ತಮ್ಮ ತಮ್ಮ ಭಾಷೆಯ ಬೆಳವಣಿಗೆಗೆ ದುಡಿದ ಉದಾಹರಣೆಗಳಿವೆ.
ಎಂಬತ್ತರ ದಶಕದಲ್ಲಿ ಆರಂಭವಾದ ಕನ್ನಡದ ಪ್ರಥಮ ವಿನೂತನ ಮಾದರಿಯ ಟ್ಯಾಬ್ದಾಯಿಡ್ ನಿಯತಕಾಲಿಕ ಪಿ. ಲಂಕೇಶ್ ಅವರ ಲಂಕೇಶ ಪತ್ರಿಕೆ. ಆ ಪತ್ರಿಕೆಯ ಎಲ್ಲ ನಿಯಮಿತ ಬರಹಗಾರರು ಅದರಲ್ಲೂ ಸ್ವತಃ ಲಂಕೇಶ ಅವರು ಅನೇಕ ಹೊಸ ಪಾರಿಭಾಷಿಕ ಶಬ್ಧಗಳನ್ನು ಬಳಸುವ ಹೊಸ ಪ್ರಯೋಗವೊಂದು ಕನ್ನಡ ಪತ್ರಿಕೊದ್ಯಮದಲ್ಲಿ ಆರಂಭಿಸಿದರು. ಪುಂಡಲಿಕ ಶೇಟ್ ಎಂಬ ಹಾಸ್ಯ ಬರಹಗಾಗರು ಉತ್ತರ ಕರ್ನಾಟಕದ ಜೀವಂತ ಆಡು ಭಾಷೆ ಬಳಸಿ ನಗೆತರಿಸುವ ಲೇಖನಗಳು ತಮ್ಮ “ಹುಬ್ಬಳ್ಳಿಯಾವ” ಅಂಕಣದಲ್ಲಿ ಬರೆಯುತ್ತಿದ್ದರು. ಶೇಟ್ ಅವರ “ಡಿಂಗಡಾಂಗ್” ಶಬ್ಧ ಇನ್ನೂ ಪ್ರಸಿದ್ಧವಾಗಿದೆ. ದಿ. ಲಂಕೇಶ್ ಅವರ ಅತ್ಯಂತ ಪ್ರಸಿದ್ಧ ಪಾರಿಭಾಷಿಕ ಶಬ್ಧ ಹುಸಿ ದೇಶ ಭಕ್ತ ಸಂಘಟನೆಯೊಂದರ ಅನುಯಾಯಿಗಳನ್ನು ಅವರು ಉಡುವ ಸಮವಸ್ತ್ರದ ಆಧಾರದ ಮೇಲೆ “ಚಡ್ಡಿಗಳು” ಎಂದು ಸಂಭೋದಿಸಿದ್ದು. ಈ ಚಡ್ಡಿಗಳು ಶಬ್ಧವು ಸುಮಾರು ನಾಲ್ಕು ದಶಗಳಿಂದ ಇಂದಿಗೂ ಚಾಲ್ತಿಯಲ್ಲಿರುವ ಜನಪ್ರೀಯ ಪಾರಿಭಾಷಿಕ ಶಬ್ಧ. ಬಹುಶಃ ಆ ಶಬ್ಧದ ವ್ಯಾಪಕ ಪ್ರಯೋಗಕ್ಕೆ ನಾಚಿಯೇ ಆ ಸಂಘಟನೆ ತನ್ನ ಸಮವಸ್ತ್ರದ ಮಾದರಿಯನ್ನು ಇತ್ತೀಚಿಗೆ ಬದಲಿಸಿಕೊಂಡಿತೇನೊ.
ಕನ್ನಡದ ಬಹುತೇಕ ದೃಶ್ಯ ಮತ್ತು ಮುದ್ರಣ ಮಾದ್ಯಮಗಳು ಸಾಫ್ಟವೇರ್ ಇಂಜನಿಯರಗಳನ್ನು “ಟೆಕ್ಕಿ” ಎಂದು ಕರೆಯುತ್ತಿರುವುದು ಸರ್ವೇಸಾಮಾನ್ಯವಾದ ಸಂಗತಿ. ಇಲ್ಲಿ ನಮ್ಮ ಮಾದ್ಯಮಗಳಿಗೆ ಇಡೀ ಇಂಜಿನಿಯರಗಳನ್ನೆಲ್ಲ ಟೆಕ್ಕಿ ಅನ್ನಬೇಕು ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಸಾಫ್ಟವೇರ್ ಇಂಜಿನಿಯರಿಂಗ್ ಮೂಲ ತಂತ್ರಜ್ಞಾನ ಕೋರ್ಸನ ಒಂದು ವಿಭಾಗವಷ್ಟೆ ಅನ್ನುವ ಪರಿಜ್ಞಾನ ಆ ಪದವನ್ನು ಬಳಸುವವರು ತಿಳಿದುಕೊಂಡರೆ ಒಳಿತು. ಭಾಷಾ ಪ್ರಯೋಗ ಕ್ರೀಯಾಶೀಲವಾಗಿದ್ದು ಅದು ಪ್ರಯೋಗಾತ್ಮಕವೂ ಆಗಿದ್ದರೆ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬಲ್ಲದು ಎಂಬ ಕನಿಷ್ಠ ಅರಿವು ನಮ್ಮ ಲೇಖಕರುˌ ಸಾಹಿತಿಗಳು ಹಾಗೂ ಅದರಲ್ಲೂ ವಿಶೇಷವಾಗಿ ಮಾದ್ಯಮದ ಜನರಿಗೆ ಇದ್ದರೆ ಒಳಿತು.
ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಹಲವಾರು ತಮಾಷೆಯ ಶಬ್ಧಗಳು ರಾಜಕೀಯ ವಿಡಂಬನೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಅವುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಂಧಾನುಕರಣೆ ಮಾಡುವ ಅನುಯಾಯಿಗಳನ್ನು “ಭಕ್ತರು” ಎಂದು ಕರೆಯಲಾಗುತ್ತಿದೆ. ಈ ಭಕ್ತರು ಎಂಬ ಮೌಲಿಕ ಶಬ್ಧವನ್ನು ಯಕಕ್ಷಿತ ರಾಜಕಾರಣಿಯೊಬ್ಬರ ಮೂಢಾಭಿಮಾನಿಗಳಿಗೆ ಸಂಭೋದಿಸುವುದು ಉಚಿತವಲ್ಲ ಎಂದು ಕೆಲ ದಿನಗಳ ಹಿಂದೆ ಜಾಲತಾಣದ ಸ್ನೇಹಿತರೊಬ್ಬರು ತಕರಾರು ಮಾಡಿದ್ದರು. ಅವರು ಆ ಭಕ್ತ ಶಬ್ಧಕ್ಕೆ ಪರ್ಯಾಯವಾಗಿ “ಮೋದಿಪ್ಯಾದೆ” ಎಂಬ ಹಗುರ ಅರ್ಥದ ಶಬ್ಧ ಬಳಸಲು ಸೂಚಿಸಿದ್ದರು. ಅದರಂತೆ “ಮಿತ್ರೋ”, “ಮಂಕಿಬಾತ್” ಮುಂತಾದವುಗಳು ತಮ್ಮ ಗಂಭೀರ ಉದ್ದೇಶಗಳನ್ನು ಮುಟ್ಟಲಾರದ ಕಾರಣಕ್ಕೆ ಜನರ ಲೇವಡಿಯ ಶಬ್ಧಗಳಾಗಿ ಪ್ರಯೋಗಿಸ್ಪಡುತ್ತಿರುವುದು ನೋಡುತ್ತಿದ್ದೇವೆ.

ದೇಶಭಕ್ತಿಯ ಹೆಸರಲ್ಲಿ ಕರಾವಳಿ ಕಡೆಯ ಕುಖ್ಯಾತ ಬಾಡಿಗೆ ಭಾಷಣಕಾರನೊಬ್ಬ ಮಾತುಮಾತಿಗೆ ನನ್ನ “ಕರಳು ಕಿತ್ತಿ ಬರುತ್ತೆ ಕಣ್ರಿ” ಎನ್ನುವ ಮಾತಂತೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ವಿಡಂಬನೆಗೊಳಗುತ್ತಿದೆ. ಆ ಭಾಷಣಕಾರನನ್ನು “ಕಕಿಬಕ” ಎಂದೇ ಹಾಸ್ಯವಾಗಿ ಕರೆಯುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿಬಿಟ್ಟಿದೆ. ವಿವೇಕಾನಂದರ ಪಟವಿಟ್ಟುಕೊಂಡು ಒಂದು ರಾಜಕೀಯ ಪಕ್ಷ ಮತ್ತು ಜಾತಿ ಸಂಘಟನೆಗಾಗಿ ಕೆಲಸ ಮಾಡುವ ಇಂಥ ಅನೇಕ ಡೋಂಗಿ ದೇಶಭಕ್ತರ ಅನಾಗರಿಕ ಭಾಷೆ ದೇಶದಾದ್ಯಂತ ಇತ್ತೀಚಿಗೆ ಮಿತಿ ಮೀರಿ ಪ್ರದರ್ಶನವಾಗುತ್ತಿರುವುದು ನಮ್ಮ ಭಾಷೆಯ ಸಭ್ಯತೆಗೆ ಕೊಡಲಿಪೆಟ್ಟು ನೀಡುತ್ತಿರುವುದಂತು ಸತ್ಯ.
ನಮ್ಮ ರಾಜಕಾರಣಿಗಳ ಭಾಷೆಯಂತೂ ಇನ್ನೂ ಕೊಳಕು ಮತ್ತು ಹಾಸ್ಯಾಸ್ಪದ. ಅವರು ಬಳಸುವ ಕನಿಷ್ಠ ಮಟ್ಟದ ಭಾಷೆ ಅವರ ಖಾಸಗಿ ಕೊಠಡಿಯಿಂದ ಸಾರ್ವಜನಿಕ ವೇದಿಕೆಯ ವರೆಗೂ ಬಂದಿರುವುದು ನಾವು ಸಾಗುತ್ತಿರುವ ಅಧಪತನದ ಹಾದಿಯನ್ನು ತೋರಿಸುತ್ತದೆ. ಇತ್ತೀಚೆಗೆ ಕರ್ನಾಟಕ ಮೂಲದ ಕರಾವಳಿ ಜಿಲ್ಲೆಗೆ ಸೇರಿಸುವ ಕೇಂದ್ರದ ಮಾಜಿ ಮಂತ್ರಿವೊಬ್ಬ ಸಾರ್ವಜನಿಕ ವೇದಿಕೆಗಳ ಮೂಲಕ ವಿಷಪೂರಿತ ಮನಸ್ಥಿತಿಯ ವಿಚಾರಗಳನ್ನು ತನ್ನ ವಿಕಾರವಾದ ಭಾಷೆಯ ಮಾದ್ಯಮದಿಂದ ಹರಿಬಿಡುತ್ತಿರುವುದು ಒಂದು ದೊಡ್ಡ ಪಿಡುಗಿನ ರೀತಿಯಲ್ಲಿ ಸುದ್ದಿಯಾಗುತ್ತಿರುವುದು ನಮ್ಮ ರಾಜಕಾರಣಿಗಳು ಮುಟ್ಟಿದ ನೈತಿಕ ಅಧಪತನದ ಸಂಕೇತವೆಂದರೆ ತಪ್ಪಿಲ್ಲ. ಈ ರೀತಿಯಾಗಿ ಭಾಷೆಯು ಅನೇಕ ಮಜಲುಗಳಲ್ಲಿˌವಿವಿಧ ಕಾಲಘಟ್ಟ ಮತ್ತು ಸಂದರ್ಭಗಳನುಸಾರ ಶಬ್ಧಗಳ ಉತ್ಪತ್ತಿಯೊಂದಿಗೆ ಬೆಳವಣಿಗೆ ಸಾದಿಸುತ್ತದೆ ಮತ್ತು ಅವಗಣನೆಗೂ ತುತ್ತಾಗುತ್ತದೆ ಎನ್ನುವುದಕ್ಕೆ ಈ ಮೇಲಿನ ಸಂಗತಿಗಳೇ ಸಾಕ್ಷಿ.