ರಾಜ್ಯ ಬಜೆಟ್ ಮಂಡನೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಶ್ವಾನಗಳ ಮೇಲೆ ಪ್ರೀತಿ ತೋರಿಸಿದ್ದಾರೆ. ಬೀದಿ ನಾಯಿಗಳ ಆರೈಕೆ, ಸಂರಕ್ಷಣೆಗೆ ಕ್ರಮ ಕೈಗೊಳ್ತೇವೆ ಎಂದಿದ್ದಾರೆ. ಬೀದಿ ನಾಯಿಗಳನ್ನು ದತ್ತು ಪಡೆಯಲು ಆನ್ಲೈನ್ ಮೂಲಕ ಸಹಾಯ ಮಾಡುತ್ತೇಬೆ ಎಂದಿದ್ದಾರೆ. ಆನ್ಲೈನ್ ಮೂಲಕ ನಾಯಿಗಳನ್ನ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗ್ತಿದೆ. ಇದರ ಜೊತೆಗೆ ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ಅನುದಾನ ಕೊಡುತ್ತೇವೆ ಅನ್ನೋದ್ರ ಜೊತೆಗೆ ಬೆಂಗಳೂರಲ್ಲಿ ಪ್ರಾಣಿಗಳ ಚಿಕಿತ್ಸೆಗೆ ಸಂಚಾರಿ ಚಿಕಿತ್ಸಾಲಯ ಸ್ಥಾಪನೆ ಮಾಡ್ತೇವೆ ಎಂದಿದ್ದು, ಅದರ ಜೊತೆಗೆ ಇತ್ತೀಚಿಗೆ ಪ್ರಧಾನಿ ಭದ್ರತೆಗೆ ನಿಯೋಜನೆ ಆಗಿರುವ ಮುಧೋಳ್ ಹೌಂಡ್ ಶ್ವಾನ ತಳಿ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡುವುದಕ್ಕೂ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ.
ಮನೆಯ ನಾಯಿ ಸಾವನ್ನಪ್ಪಿದ್ದಾಗ ಕಣ್ಣೀರಿಟ್ಟಿದ್ದ ಸಿಎಂ..!
2021ರಲ್ಲಿ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಪ್ರೀತಿಯಿಂದ ಸಾಕಿದ್ದ ನಾಯಿ ‘ಸನ್ನಿ’ ಸಾವನ್ನಪ್ಪಿತ್ತು. ಕುಟುಂಬದ ಸದಸ್ಯನಂತೆ ಇದ್ದ ಸನ್ನಿ ಸಾವನ್ನಪ್ಪಿದ್ರಿಂದ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇಡೀ ಕುಟುಂಬ ತಮ್ಮ ಮನೆಯ ಸದಸ್ಯನನ್ನೆ ಕಳೆದುಕೊಂಡಂತೆ ಎಲ್ಲರೂ ಭಾವನಾತ್ಮಕವಾಗಿ ಕಣ್ಣೀರು ಹಾಕುತ್ತ, ನಾಯಿ ಸನ್ನಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ರು. ಅಂದು ಟ್ವಿಟ್ಟರ್ನಲ್ಲೂ ಸಂತಾಪ ಸೂಚಿಸಿದ್ದ ಬಸವರಾಜ ಬೊಮ್ಮಾಯಿ ನಮ್ಮ ಮನೆಯ ಮುದ್ದಿನ ನಾಯಿ “ಸನ್ನಿ” ವಯೋಸಹಜವಾಗಿ ಸಾವನ್ನಪ್ಪಿದೆ. ಇದು ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು ಸನ್ನಿ ಎಂದು ಬರೆದುಕೊಂಡಿದ್ದರು.
ದೇವರ ಮೇಲೆ ಪ್ರೀತಿ ತೋರಿದ ರಾಜ್ಯ ಬಜೆಟ್..!

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಲು ಬರೋಬ್ಬರಿ 100 ಕೋಟಿ ಯೋಜನೆ ಜಾರಿಗೆ ಬಜೆಟ್ನಲ್ಲಿ ಹಣ ಹೊಂದಿಸಿದ್ದಾರೆ. ಇನ್ನು ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಈಗಾಗಲೇ ಬಿಜೆಪಿ ಘೋಷಣೆ ಮಾಡಿದ್ದು, ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮೈಸೂರಿನ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಅನುದಾನ ನೀಡಲು ನಿರ್ಧಾರ ಮಾಡಿದ್ದು, 10 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಪಾರ್ಕ್ ನಿರ್ಮಾಣ ಮಾಡಲು ಬಜೆಟ್ನಲ್ಲಿ ಹಣ ಒದಗಿಸಲು ನಿರ್ಧಾರ ಮಾಡಲಾಗಿದೆ. ದೇವಸ್ಥಾನ ಹಾಗು ಮಠಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ನೀಡಲಾಗುವುದು ಎಂದಿದ್ದಾರೆ. ಇನ್ನು ನಂದಿಬೆಟ್ಟ ರೂಪ್ವೇಗೆ ಅನುದಾನ ಕಲ್ಪಿಸಲು ರಾಜ್ಯ ಬಜೆಟ್ನಲ್ಲಿ ನಿರ್ಧಾರ ಮಾಡಲಾಗಿದೆ.
ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ ಯತ್ನ..!

ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯವನ್ನು ಸದಾ ಕಾಲ ಹೀಗಳೆಯುತ್ತಲೇ ಇರುತ್ತದೆ. ಸದಾ ಕಾಲ ಮುಸ್ಲಿಂ ಸಮುದಾಯದ ಮತಗಳು ನಮಗೆ ಬೇಡ, ಹಿಂದೂಗಳ ಮತಗಳು ಮಾತಗ್ರ ಸಾಕು ಎಂದು ಬಹುತೇಕ ಬಾರಿ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಮಂಡನೆ ಆಗಿರುವ ರಾಜ್ಯ ಬಜೆಟ್ನಲ್ಲಿ ಅಲ್ಪ ಸಂಖ್ಯಾತರನ್ನು ಓಲೈಸಲು ಸರ್ಕಸ್ ಮಾಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ 306 ಕೋಟಿ ರೂಪಾಯಿ ನೀಡುತ್ತಿದ್ದು, ಅಬ್ದುಲ್ ಕಲಾಂ ಹೆಸರಲ್ಲಿ 31 ವಸತಿ ಶಾಲೆ ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿದೆ. ಇನ್ನು ವಕ್ಫ್ ಆಸ್ತಿ ರಕ್ಷಣೆ, ಖಬರಿಸ್ತಾನದ ಅಭಿವೃದ್ಧಿ ಮಾಡುವುದಾಗಿಯೂ ತಿಳಿಸಿದ್ದಾರೆ. ಇನ್ನು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ 20 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ನೀಡುವುದಾಗಿ ತಿಳಿಸಿದ್ದಾರೆ.