ಬೆಂಗಳೂರು: ‘ಮುಖ್ಯಮಂತ್ರಿ ವಿದ್ಯಾ ಶಕ್ತಿ’ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣವನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕರ್ನಾಟಕ ಬಜೆಟ್ 2023-24 ಹಲವು ರೀತಿಯಲ್ಲಿ ಗಮನ ಸೆಳೆದಿದೆ. ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಹಲವು ಜನಪರ ಹಾಗೂ ಜನಪ್ರಿಯ ಘೋಷಣೆಗಳ ಮೂಲಕ ಮತದಾರರ ಮನಗೆಲ್ಲಲು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯತ್ನಿಸಿದ್ದಾರೆ.
ರೈತರಿಗಾಗಿ ‘ಭೂ ಸಿರಿ’ ನೂತನ ಯೋಜನೆ ಘೋಷಣೆ: ಯೋಜನೆಯಡಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ, ರೈತ ಸಿರಿ’ ಯೋಜನೆ ಅಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್’ಗೆ 10 ಸಾವಿರ ರೂ. ಪ್ರೋತ್ಸಾಹ ಧನ, ‘ಸಹಸ್ರ ಸರೋವರ’ ಯೋಜನೆ ಅಡಿ ರಾಜ್ಯದ 1,000 ಸಣ್ಣ ಸರೋವರಗಳ ಅಭಿವೃದ್ಧಿ, ‘ಸಹ್ಯಾದ್ರಿ ಸಿರಿ’ ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗೆ ಯೋಜನೆ, ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ‘ಒಂದು ತೋಟ ಒಂದು ಬೆಳೆ’ ಯೋಜನೆಗೆ 10 ಕೋಟಿ ರೂ., ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ‘ಮತ್ಸ್ಯ ಸಿರಿ’ ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.