ಕರ್ನಾಟಕದ ಕರಾವಳಿ ಹಾಗು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವ ಭಾರತೀಯ ಜನತಾ ಪಾರ್ಟಿ, ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ರಾಮನಗರ, ಹಾಸನ ಭಾಗದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಲು ಸಾಧ್ಯವಾಗಿಲ್ಲ. ಆದರೆ ಕಳೆದ ಬಾರಿ ಅಂದರೆ 2018ರ ವಿಧಾನಸಭಾ ಚುನಾವಣೆ ನಡೆದು ಒಂದು ವರ್ಷದ ಬಳಿಕ ಜೆಡಿಎಸ್ನಿಂದ ಗೆದ್ದು ಶಾಸಕರಾಗಿದ್ದ ಕೆ.ಆರ್ ಪೇಟೆಯ ಶಾಸಕ ನಾರಾಯಣಗೌಡ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆಗಿದ್ದರು. ಆ ಬಳಿಕ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣಗೌಡ ಸುಮಾರು 9 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ರಾಜ್ಯ ಸರ್ಕಾರದ ನಾಲ್ಕಾರು ಸಚಿವರು ಕ್ಷೇತ್ರದಲ್ಲಿ ಇದ್ದುಕೊಂಡು ಚುನಾವಣೆ ಮಾಡಿದರೂ ಜೆಡಿಎಸ್ ಅಭ್ಯರ್ಥಿ ಕಠಿಣ ಸವಾಲು ಒಡ್ಡಿದ್ದರು. ಆದರೆ ಇದೀಗ ಭಾರತೀಯ ಜನತಾ ಪಾರ್ಟಿಗೆ ಗೆಲುವು ಅಷ್ಟೊಂದು ಸಲೀಸು ಇಲ್ಲ. ಇದೇ ಕಾರಣಕ್ಕೆ ಸಚಿವ ನಾರಾಯಣಗೌಡ, ಒಂದು ಕಾಲನ್ನು ಕೇಸರಿ ಮನೆಯಿಂದ ಹೊರಕ್ಕೆ ಇಟ್ಟಿದ್ದಾರೆ.
ಬಿಜೆಪಿ ಬಿಟ್ಟು ಹೊರಡಲು ಸಜ್ಜಾದ ಸಚಿವ ನಾರಾಯಣಗೌಡ..!

ಈ ಬಗ್ಗೆ ಸ್ವತಃ ಸಚಿವ ನಾರಾಯಣಗೌಡ ಮಂಡ್ಯದಲ್ಲಿ ಮಾಹಿತಿ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಬೇಕಾ..? ಅಥವಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾ ಅನ್ನೋ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಈ ಬಗ್ಗೆ ಆದಷ್ಟು ಶೀಘ್ರವಾಗಿ ತೀರ್ಮಾನ ಮಾಡಿ ಜನತೆ ಮುಂದೆ ಹೇಳ್ತೀನಿ ಎಂದು ಸಚಿವ ಕೆ.ಸಿ ನಾರಾಯಣಗೌಡ ಹೇಳಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಸಚಿವ ನಾರಾಯಣಗೌಡರ ಈ ಮಾತು ಭಾರತೀಯ ಜನತಾ ಪಾರ್ಟಿಯ ನಾಯಕರಲ್ಲಿ ಅಚ್ಚರಿ ಉಂಟು ಮಾಡಿದೆ. ಅಷ್ಟಕ್ಕೂ ಈ ಮಾತು ಹೇಳುತ್ತಿರುವುದು ಯಾಕೆ..? ಎನ್ನುವ ಚರ್ಚೆ ಶುರುವಾಗಿದೆ. ಇನ್ನು ಕಳೆದ ಬಾರಿ ಜೆಡಿಎಸ್ನಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದ ನನಗೆ ಸಾಕಷ್ಟು ಕಾಟ ಕೊಡಲಾಯ್ತು. ಅದೇ ಕಾರಣಕ್ಕೆ ನಾನು ಜೆಡಿಎಸ್ ಬಿಟ್ಟು ಹೊರಕ್ಕೆ ಬರಬೇಕಾದ ಸನ್ನಿವೇಶ ನಿರ್ಮಾಣ ಆಯ್ತು ಎಂದು ನಾನೇಕೆ ತಪ್ಪು ಮಾಡಿದೆ ಅನ್ನೋದನ್ನು ಮೆಲುಕು ಹಾಕಿದ್ದಾರೆ. ಆದರೆ ಸಚಿವರು ಈಗ ಇದೆಲ್ಲವನ್ನು ಹೇಳ್ತಿರೋದು ಯಾಕೆ ಅನ್ನೋ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
ನಾರಾಯಣಗೌಡ ಅಚ್ಚರಿ ನಿರ್ಧಾರದ ಹಿಂದಿನ ತಂತ್ರವೇನು..?
ಭಾರತೀಯ ಜನತಾ ಪಾರ್ಟಿಯಲ್ಲೇ ನಾನು ಚುನಾವಣೆ ಗೆಲ್ತೀನಿ ಎಂದಿದ್ದ ನಾರಾಯಣಗೌಡ, ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ನಿಮ್ಮ ವಿರುದ್ಧ ರೇವಣ್ಣ ಸ್ಪರ್ಧೆ ಮಾಡ್ತಾರಂತೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉದ್ದಟತನದಲ್ಲಿ ಮಾತನಾಡಿದ್ದ ಸಚಿವ ನಾರಾಯಣಗೌಡ, ರೇವಣ್ಣನಾದರೂ ಸ್ಪರ್ಧೆ ಮಾಡಲಿ, ಅವರಪ್ಪನಾದರೂ ಸ್ಪರ್ಧೆ ಮಾಡಲಿ, ನಾನು ಚುನಾವಣೆಯಲ್ಲಿ ಗೆದ್ದು ಬರ್ತೇನೆ ಎಂದು ಮೀಸೆ ಮೇಲೆ ಕೈ ಹಾಕಿದ್ದರು. ಜನರಿಗೆ ಇಷ್ಟು ಸಾಕಿತ್ತು ಸಚಿವ ನಾರಾಯಣಗೌಡರ ಸೊಕ್ಕು ಅಡಗಿಸುವ ನಿರ್ಧಾರ ಮಾಡಲು. ಕೆ.ಆರ್ ಪೇಟೆ ತಾಲೂಕಿನಾದ್ಯಂತ ವೀಡಿಯೋ ವೈರಲ್ ಆಗಿದ್ದು, ಜೆಡಿಎಸ್ ಬಿಟ್ಟು ಅಧಿಕಾರದ ಆಸೆಗಾಗಿ ಭಾರತೀಯ ಜನತಾ ಪಾರ್ಟಿ ಸೇರಿದ್ದ ನಾರಾಯಣಗೌಡರಿಗೆ ಬುದ್ಧಿ ಕಲಿಸುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಅಷ್ಟೇ ಅಲ್ಲದೆ ಕಳೆದ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಎನ್. ಚಲುವರಾಯಸ್ವಾಮಿ ತೆರೆಮರೆಯಲ್ಲಿ ಸಹಾಯ ಮಾಡಿದ್ದರ ಪರಿಣಾಮ ನಾರಾಯಣಗೌಡ ಗೆಲುವು ಸಾಧ್ಯವಾಯ್ತು. ಇಲ್ಲದಿದ್ದರೆ ಕಳೆದ ಬಾರಿ ಉಪಚುನಾವಣೆಯಲ್ಲೇ ನಾರಾಯಣಗೌಡ ಬಾಂಬೆ ಬಸ್ ಹತ್ತಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇದೀಗ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ದಕ್ಕುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ ಎನ್ನಲಾಗ್ತಿದೆ.
ಕಾಂಗ್ರೆಸ್ ಸೇರಿ ಗೆದ್ದು ಬರುವ ಲೆಕ್ಕಾಚಾರದಲ್ಲಿ ಬಾಂಬೆ ಗೌಡ್ರು..!
ಕೆ.ಆರ್ ಪೇಟೆ ಕಾಂಗ್ರೆಸ್ನಲ್ಲಿ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅಸ್ತಿತ್ವ ಕಳೆದುಕೊಳ್ಳುತ್ತಾ ಸಾಗಿದ್ದಾರೆ. ಜೆಡಿಎಸ್ ಹಾಗು ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಬಲ ಆಗಿದ್ದಾರೆ. ಕಳೆದ ಬಾರಿ ಬೆಂಬಲ ಕೊಟ್ಟ ಕಾಂಗ್ರೆಸ್ ಈ ಬಾರಿ ನಾರಾಯಣಗೌಡರ ಕೈ ಹಿಡಿಯುವುದಿಲ್ಲ. ಕಾರಣ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೆ ಬರುವ ಹಂಬಲದಲ್ಲಿ ಕಾಂಗ್ರೆಸ್ ಪಕ್ಷವಿದೆ. ಇನ್ನು ಬಿಜೆಪಿಯಿಂದ ಸ್ಪರ್ಧೆ ಮಾಡಿ ಕೋಟಿ ಕೋಟಿ ವೆಚ್ಚ ಮಾಡಿದರೂ ದೇವೇಗೌಡರನ್ನು ಹಿಯ್ಯಾಳಿಸಿ ಅಖಾಡಕ್ಕೆ ಕರೆದಿದ್ದರಿಂದ ನಾರಾಯಣಗೌಡರಿಗೆ ವಿರುದ್ಧವಾದ ಅಲೆ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿದೆ. ಇನ್ನು ಸೋಲನ್ನು ಅನುಭವಿಸಿ ಬಾಂಬೆ ಉದ್ಯಮಕ್ಕೆ ವಾಪಸ್ ಆಗುವ ಬದಲು ಸಮರ್ಥ ಅಭ್ಯರ್ಥಿ ಇಲ್ಲದೆ ಬಳಲಿರುವ ಕಾಂಗ್ರೆಸ್ ಪಕ್ಷದಲ್ಲೇ ಆಶ್ರಯ ಪಡೆದು ಗೆದ್ದು ಬರುವ ಲೆಕ್ಕಾಚಾರ ಮಾಡಿದ್ದಾರೆ ಹಾಲಿ ಸಚಿವ ನಾರಾಯಣಗೌಡ. ಕಳೆದ ಬಾರಿ ಜೆಡಿಎಸ್ ಬಿಡುವುದಕ್ಕೆ ಕಾರಣ ಅಲ್ಲಿ ಕೊಟ್ಟಂತ ನೋವುಗಳು ಎಂದು ಜನರ ಬಳಿ ಕನಿಕರ ಹುಟ್ಟಿಸುವ ನಾಟಕ ಆಡುವುದಕ್ಕೆ ಶುರು ಮಾಡಿದ್ದಾರೆ. ಆದರೆ ಮಂಡ್ಯದಲ್ಲಿ ಪಕ್ಷಾಂತರ ಮಾಡುವ ನಾಯಕರನ್ನು ಗೆಲ್ಲಿಸುವುದು ತೀರಾ ಕಷ್ಟ. ಘಟಾನುಘಟಿ ನಾಯಕ ಚಲುವರಾಯಸ್ವಾಮಿಯನ್ನೇ ನಾಗಮಂಗಲದ ಜನ ಸೋಲಿಸಿ ಮನೆಗೆ ಕಳುಹಿಸಿದ್ದರು. ಇದೀಗ ದೇವೇಗೌಡರನ್ನೇ ಅಖಾಡಕ್ಕೆ ಕರೆದ ನಾರಾಯಣಗೌಡರಿಗೆ ಕೆ.ಆರ್ ಪೇಟೆ ಜನರು ಏನು ಉತ್ತರ ಕೊಡ್ತಾರೆ ಅನ್ನೋ ಕುತೂಹಲ ಎದುರಾಗಿದೆ.