ಬೆಂಗಳೂರು: ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಜನರ ಧ್ವನಿಯನ್ನು ದಮನಿಸಿದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಹಾಗೂ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದನ್ನು ಟ್ವೀಟ್ ಮೂಲಕ ಅರವಿಂದ ಕೇಜ್ರಿವಾಲ್ ಖಂಡಿಸಿದ್ದಾರೆ.
ತೆರಿಗೆ ವಂಚನೆ ಮಾಡಿದೆ ಎನ್ನುವ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ಕಚೇರಿ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿತ್ತು. ಬುಧವಾರವೂ ಶೋಧ ಕಾರ್ಯ ಮುಂದುವರಿದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಜನರ ಧ್ವನಿಯನ್ನು ದಮನಿಸಿದಂತೆ. ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ, ಇವರು ಸಿಬಿಐ, ಇಡಿ, ಐಟಿಯನ್ನು ಛೂ ಬಿಡುತ್ತಾರೆ. ಬಿಜೆಪಿಯು ದೇಶದ ಪ್ರಜಾಸತಾತ್ಮಕ ವ್ಯವಸ್ಥೆಯನ್ನು ಬಗ್ಗು ಬಡಿದು, ಇಡೀ ದೇಶವನ್ನು ತಮ್ಮ ಅಡಿಯಾಳಾಗಿ ಮಾಡಲು ಹೊರಟಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
2002ರ ಗುಜರಾತ್ ಗಲಭೆ ಮತ್ತು ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಸಾಕ್ಷ್ಯಚಿತ್ರವನ್ನು ಬಿಬಿಸಿ ಇತ್ತೀಚೆಗೆ ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಐ.ಟಿ ಕಾರ್ಯಾಚರಣೆ ನಡೆದಿದೆ.
ಅಧಿಕಾರಿಗಳ ಜೊತೆಗೆ ಸಂಪೂರ್ಣ ಸಹಕರಿಸುತ್ತಿದ್ದೇವೆ. ಈಗ ಸೃಷ್ಟಿಯಾಗಿರುವ ಸಮಸ್ಯೆಯು ಆದಷ್ಟು ಬೇಗನೆ ಪರಿಹಾರವಾಗುವ ಭರವಸೆ ಇದೆ ಎಂದೂ ಬಿಬಿಸಿ ಹೇಳಿದೆ.