• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಆರೋಗ್ಯ ವಲಯದ ನಿರ್ಲಕ್ಷ್ಯವೂ ಸಾರ್ವಜನಿಕ ಸ್ವಾಸ್ಥ್ಯವೂ

ನಾ ದಿವಾಕರ by ನಾ ದಿವಾಕರ
February 11, 2023
in ಅಂಕಣ
0
ಆರೋಗ್ಯ ವಲಯದ ನಿರ್ಲಕ್ಷ್ಯವೂ ಸಾರ್ವಜನಿಕ ಸ್ವಾಸ್ಥ್ಯವೂ
Share on WhatsAppShare on FacebookShare on Telegram

ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ  ಸಾರ್ವಜನಿಕ ಆರೋಗ್ಯ ಆಡಳಿತ ನೀತಿ ಇಂದಿನ ತುರ್ತು

ADVERTISEMENT

ಸಾರ್ವಜನಿಕ ಆರೋಗ್ಯಕ್ಕೆ ಅತಿ ಕನಿಷ್ಠ ವೆಚ್ಚ ಮಾಡುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಪ್ರಕಟವಾದ ಆಕ್ಸ್‌ಫಾಮ್ ವರದಿಯಲ್ಲಿ ಹೇಳಲಾಗಿದೆ. ಇದನ್ನು ಪಿತೂರಿ ಅಥವಾ ವೃಥಾ ಆರೋಪ ಎಂದು ದೂಷಿಸುವ ಮುನ್ನ ಭಾರತದ ಆರೋಗ್ಯ ಕ್ಷೇತ್ರದ ವಾಸ್ತವ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡುವುದೂ ಉಚಿತ ಎನಿಸುತ್ತದೆ. ಕಳೆದ ಮೂರು ದಶಕಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವೈದ್ಯರನ್ನು ಸೃಷ್ಟಿಸುತ್ತಿರುವ ಭಾರತ, ವಿಶ್ವಶ್ರೇಷ್ಠ ಅತ್ಯಾಧುನಿಕ ಆಸ್ಪತ್ರೆಗಳಿಗೂ ಹೆಸರಾಗುತ್ತಿದೆ. ನೆಹರೂ ಯುಗದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (AIIMS) ಇಂದು ಹತ್ತಾರು ಶಾಖೆಗಳನ್ನು ಹೊಂದಿದ್ದು 2014ರ ನಂತರದಲ್ಲಿ ಮೋದಿ ಸರ್ಕಾರವೂ ದೇಶದ ವಿವಿಧ ನಗರಗಳಲ್ಲಿ ಈ ಏಮ್ಸ್‌ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ. ನೆಹರೂ ಯುಗದ ಕೂಸುಗಳೆಂದೇ ಹೇಳಬಹುದಾದ ರಾಮಮನೋಹರ್‌ ಲೋಹಿಯಾ ಆಸ್ಪತ್ರೆ, ಬೆಂಗಳೂರಿನ ಕಿಡ್ವಾಯಿ ಕ್ಯಾನ್ಸರ್‌ ಆಸ್ಪತ್ರೆ, ನಿಮ್ಹಾನ್ಸ್‌ ಮಾನಸಿಕ ರೋಗಗಳ ಆಸ್ಪತ್ರೆ ಇವೆಲ್ಲವೂ ಇಂದಿಗೂ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿವೆ.

ಯಾವುದೇ ದೇಶದಲ್ಲಿ ಜನಸಾಮಾನ್ಯರ ಆರೋಗ್ಯ ಗುಣಮಟ್ಟದ ಸುಧಾರಣೆ ಮತ್ತು ಆರೋಗ್ಯ ಸೇವೆಗಳ ಲಭ್ಯತೆ ಈ ಪ್ರತಿಷ್ಠಿತ-ಅತ್ಯಾಧುನಿಕ ಆಸ್ಪತ್ರೆಗಳಿಂದ ನಿರ್ಧಾರವಾಗುವುದಿಲ್ಲ. ಸರ್ಕಾರಗಳ ಸಾಧನೆಗಳ ಅಳತೆಗೋಲು ಈ ಸಂಸ್ಥೆಗಳ ನಿರ್ಮಾಣವೂ ಆಗುವುದಿಲ್ಲ. ಉದಾಹರಣೆಗೆ ಏಮ್ಸ್‌ ಆಸ್ಪತ್ರೆಯ ಚರಿತ್ರೆಯನ್ನೇ ಗಮನಿಸುತ್ತಾ ಬಂದರೆ ಅತಿ ಹೆಚ್ಚಿನ ಏಮ್ಸ್‌ ಆಸ್ಪತ್ರೆಯನ್ನು 2014ರ ನಂತರದ ಎನ್‌ಡಿಎ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಬೇರೆಯೇ ಆಗಿದೆ. 1956ರಲ್ಲಿ ದೇಶದ ಪ್ರಪ್ರಥಮ ಏಮ್ಸ್‌ ಆಸ್ಪತ್ರೆಯನ್ನು ದೇಶದ ಪ್ರಥಮ ಆರೋಗ್ಯ ಸಚಿವರಾದ ಅಮೃತ್‌ ಕೌರ್‌ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಆನಂತರ 47 ವರ್ಷಗಳ ಕಾಲ ಏಮ್ಸ್‌ ಸಂಸ್ಥೆಯ ವಿಸ್ತರಣೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2003ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಜಾರಿಗೊಳಿಸಿದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ತುತ್ಯಾರ್ಹ ಹೆಜ್ಜೆಯಾಗಿತ್ತು.

2003ರ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ವಾಜಪೇಯಿ “ ಅಭಿವೃದ್ಧಿ ಹೊಂದಿರದ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಸ್ಪತ್ರೆಗಳ ಕೊರತೆ ಇರುವುದು ನನಗೆ ತಿಳಿದಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದಲೇ ಪಿಎಂಎಸ್‌ಎಸ್‌ವೈ ಯೋಜನೆಯಡಿ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಆರು ಆಸ್ಪತ್ರೆಗಳನ್ನು, ದೆಹಲಿಯ ಏಮ್ಸ್‌ ಮಾದರಿಯಲ್ಲಿ ಹಿಂದುಳಿದ ರಾಜ್ಯಗಳಲ್ಲಿ ನಿರ್ಮಿಸಲು ನಿರ್ಧರಿಸಿದೆ ” ಎಂದು ಘೋಷಿಸಿದ್ದರು. ಆದರೆ ಎನ್‌ಡಿಎ ಸರ್ಕಾರ 2004ರ ಚುನಾವಣೆಗಳಲ್ಲಿ ಪದಚ್ಯುತವಾದ ಕಾರಣ ವಾಜಪೇಯಿಯವರ ಆಶಯ ಈಡೇರಲಿಲ್ಲ. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಪಿಎಂಎಸ್‌ಎಸ್‌ವೈ ಯೋಜನೆಯನ್ನು 2006ರಲ್ಲಿ ಅನುಮೋದಿಸಿ ಈ ಯೋಜನೆಯಡಿ ಭೂಪಾಲ್‌, ಭುವನೇಶ್ವರ್‌, ಜೋಧಪುರ್‌, ಪಾಟ್ನಾ, ರಾಯಪುರ್‌ ಮತ್ತು ಋಷಿಕೇಷ್‌ಗಳಲ್ಲಿ ಆರು ಏಮ್ಸ್‌ ಆಸ್ಪತ್ರೆಗಳ ನಿರ್ಮಾಣಕ್ಕೆ ಚಾಲನೆ ನೀಡಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ 2014ರಲ್ಲಿ ನಾಲ್ಕು, 2015ರಲ್ಲಿ ಏಳು ಮತ್ತು  2017ರಲ್ಲಿ ಎರಡು ಏಮ್ಸ್‌ ಆಸ್ಪತ್ರೆಗಳ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು.

ಸಾಂಸ್ಥಿಕ ಬೆಳವಣಿಗೆಯ ಚೌಕಟ್ಟಿನಲ್ಲಿ

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 15 ಏಮ್ಸ್‌ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದರೂ ಏಪ್ರಿಲ್‌ 2021ರ ವೇಳೆಗೆ ಏಳು ಏಮ್ಸ್‌ ಆಸ್ಪತ್ರೆಗಳು ಮಾತ್ರವೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಅಧಿಕೃತ ವರದಿಗಳೇ ಹೇಳುತ್ತವೆ. ಇವುಗಳ ಪೈಕಿ 1956ರಲ್ಲಿ ಸ್ಥಾಪಿಸಿದ ಏಮ್ಸ್‌ ಹೊರತುಪಡಿಸಿ, ಮೊದಲ ಹಂತದಲ್ಲಿ ನಿರ್ಮಿಸಲಾದ ಆರು ಆಸ್ಪತ್ರೆಗಳಿವೆ. ಒಟ್ಟಾರೆಯಾಗಿ ಪಿಎಂಎಸ್‌ಎಸ್‌ವೈ ಯೋಜನೆಯಡಿ 22 ಏಮ್ಸ್‌ ಆಸ್ಪತ್ರೆಗಳನ್ನು ನಿರ್ಮಿಸಲು ಮಂಜೂರು ಮಾಡಲಾಗಿದೆಯಾದರೂ 16 ಆಸ್ಪತ್ರೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. 2025ರ ವೇಳೆಗೆ ಪೂರ್ಣಗೊಳ್ಳುವ ಆಶಯವೂ ಇದೆ.  6 ಆಸ್ಪತ್ರೆಗಳಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಹೊರರೋಗಿಗಳ ಚಿಕಿತ್ಸೆ ಲಭ್ಯವಾಗುತ್ತಿದೆ. 2 ಆಸ್ಪತ್ರೆಗಳಲ್ಲಿ ವೈದ್ಯಕೀಯ ಶಿಕ್ಷಣ ಮಾತ್ರ ಲಭ್ಯವಾಗುತ್ತಿದೆ. 8 ಆಸ್ಪತ್ರೆಗಳ ಕಾಮಗಾರಿ ಪ್ರಗತಿಯ ಹಂತದಲ್ಲಿದೆ.

AIIMS ಆಸ್ಪತ್ರೆಗಳ ನಿರ್ಮಾಣ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಡನೆ ಸಾಧಿಸಿದ ಮುನ್ನಡೆಯ ಸಂಕೇತವಾಗಬಹುದೇ ಹೊರತು ದೇಶದ ಒಟ್ಟಾರೆ ಆರೋಗ್ಯ ವಲಯದ ಸ್ವಾಸ್ಥ್ಯವನ್ನು ಸೂಚಿಸುವುದಿಲ್ಲ. ಆದರೂ ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಪ್ರಗತಿಯ ಸೂಚಕವಾಗಿ ಕಾಣುವ ಈ ಪ್ರತಿಷ್ಠಿತ ಸಾಂಸ್ಥಿಕ ವಲಯದಲ್ಲಿ 1956 ರಿಂದ 2003ರವರೆಗೆ  47 ವರ್ಷಗಳ ಕಾಲ ಯಾವುದೇ ಪ್ರಗತಿ ಸಾಧಿಸದೆ ಇರುವುದು ಅಚ್ಚರಿ ಮೂಡಿಸುತ್ತದೆ. ಈ ಅವಧಿಯಲ್ಲಿ ದೇಶವನ್ನಾಳಿದ ಸರ್ಕಾರಗಳು ಉತ್ತರದಾಯಿಯಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುವಂತಹ ಅತ್ಯಾಧುನಿಕ ಆಸ್ಪತ್ರೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದನ್ನೂ ಸಹ ಮುಕ್ತ ಮನಸಿನಿಂದ ಸ್ವಾಗತಿಸಬೇಕಿದೆ.

ಆದರೆ ಭಾರತವನ್ನು ಕಾಡುತ್ತಿರುವ ಆರೋಗ್ಯ ವಲಯದ ಸಮಸ್ಯೆಯನ್ನು ಭಿನ್ನ ನೆಲೆಯಲ್ಲೇ ನೋಡಬೇಕಿದೆ. ಶೇ 80ಕ್ಕೂ ಹೆಚ್ಚು ಜನರಿಗೆ ನಿಲುಕದ ಏಮ್ಸ್‌ ಅಥವಾ ಮತ್ತಾವುದೇ ಸ್ವರೂಪದ ಅತ್ಯಾಧುನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಆರೋಗ್ಯ ಕ್ಷೇತ್ರದಲ್ಲಿ ದೇಶದ ಮುನ್ನಡೆಯ ಸೂಚಕವಾಗುವುದೇ ಹೊರತು, ತಳಮಟ್ಟದ ಜನಸಾಮಾನ್ಯರಿಗೆ ನಿಲುಕುವಂತಹ ಆರೋಗ್ಯ ಸೇವೆ ಮತ್ತು ಸೌಲಭ್ಯಗಳ ಸೂಚಕವಾಗುವುದಿಲ್ಲ. ಕಳೆದ ಮೂರು ದಶಕಗಳಲ್ಲಿ ಭಾರತ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿರುವುದು ಢಾಳಾಗಿ ಗೋಚರಿಸುತ್ತದೆ. ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ನಡುವೆ ಇರುವ ಅಂತರದಂತೆಯೇ ಪ್ರಾಥಮಿಕ ಆರೋಗ್ಯ ಮತ್ತು ಉನ್ನತ ಮಟ್ಟದ ಆರೋಗ್ಯದ ನಡುವೆಯೂ ಅಪಾರ ಅಂತರವನ್ನು ಗುರುತಿಸಬಹುದು. ಆಡಳಿತಾರೂಢ ಸರ್ಕಾರಗಳು ಮೂಲತಃ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಾಗಲೇ, ಆರೋಗ್ಯ ಸೇವೆಗಳು ತಳಮಟ್ಟದ ಜನಸಾಮಾನ್ಯರಿಗೂ ಸುಲಭವಾಗಿ ದಕ್ಕುವಂತಾಗುತ್ತದೆ. ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದರ ಮೂಲಕವೇ ಭಾರತ ಒಂದು ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ.

ಈ ದೃಷ್ಟಿಯಿಂದ ನೋಡಿದಾಗ, ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಸೇವೆಯೂ ಕ್ರಮೇಣ ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳನ್ನು ಪೋಷಿಸುವ ನಿಟ್ಟಿನಲ್ಲೇ ಪ್ರಗತಿ ಸಾಧಿಸುತ್ತಿರುವುದನ್ನು ಗಮನಿಸಬಹುದು. ವೈದ್ಯಕೀಯ ಸೇವೆಗಳ ಖಾಸಗೀಕರಣ ಮತ್ತು ಚಿಕಿತ್ಸಾ ಸೌಲಭ್ಯಗಳ ಕಾರ್ಪೋರೇಟೀಕರಣ ಪ್ರಕ್ರಿಯೆ ಪರಾಕಾಷ್ಠೆ ತಲುಪುತ್ತಿದ್ದು, ಬಹುಪಾಲು ಭಾರತೀಯರ ಪಾಲಿಗೆ ವೈದ್ಯಕೀಯ ವೆಚ್ಚಗಳು ಹೊರೆಯಾಗಿ ಪರಿಣಮಿಸುತ್ತಿದೆ. ದೇಶದ ಎಲ್ಲ ನಗರಗಳಲ್ಲೂ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಕಾರ್ಪೋರೇಟ್‌ ಆಸ್ಪತ್ರೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಆದರೆ ಈ ಕಾರ್ಪೋರೇಟ್‌ ಔದ್ಯಮಿಕ ಕೇಂದ್ರಗಳು ಜನಸಾಮಾನ್ಯರ ಯೋಗಕ್ಷೇಮಕ್ಕಿಂತಲೂ ಹೆಚ್ಚಿನ ಆದ್ಯತೆಯನ್ನು ತಮ್ಮ ಮಾರುಕಟ್ಟೆ ಲಾಭ ಮತ್ತು ವಿಸ್ತರಣೆಗೆ ನೀಡುತ್ತವೆ. ಕೋವಿದ್‌ ಸಾಂಕ್ರಾಮಿಕ ಇಡೀ ದೇಶದ ಸಾಮಾನ್ಯ ಜನತೆಯನ್ನು ಸಂಕಷ್ಟದ ಬವಣೆಗೆ ದೂಡಿದ್ದಾಗ ಈ ಆಸ್ಪತ್ರೆಗಳು ನಡೆಸಿದ ಸುಲಿಗೆ ಮತ್ತು ಈ ವೈದ್ಯಕೀಯ ಕೇಂದ್ರಗಳು ತೋರಿದ ನಿರ್ಲಕ್ಷ್ಯವನ್ನು ಇಡೀ ದೇಶವೇ ಗಮನಿಸಿದೆ.

ವೈದ್ಯಕೀಯ ಸೇವೆ ಮತ್ತು ಮಾರುಕಟ್ಟೆ

ವೈದ್ಯರ ನಿಸ್ವಾರ್ಥ ಸೇವೆ ಮತ್ತು ಸಂವೇದನಾಶೀಲ ಜನಸ್ಪಂದನೆ ಇವೆರಡೂ ಲಕ್ಷಣಗಳಿಂದ ಹೊರತಾಗಿರುವ ಕಾರ್ಪೋರೇಟ್‌ ಅಸ್ಪತ್ರೆಗಳಲ್ಲಿ ದುಡಿಯುವ ವೈದ್ಯರೂ ಸಹ ಮಾರುಕಟ್ಟೆ ನಿಬಂಧನೆಗಳಿಗೆ ಒಳಗಾಗಿರುತ್ತಾರೆ. ವೈದ್ಯರ ವ್ಯಕ್ತಿಗತ ತಾತ್ವಿಕ ಸಂವೇದನೆಗಳನ್ನು, ವೈಯುಕ್ತಿಕ ಜೀವನದ ಹಿತಾಸಕ್ತಿಗಳು ನುಂಗಿಹಾಕಿರುತ್ತವೆ. ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವ ಮೂಲಕ, ಪ್ರಾಣಾಂತಿಕ ಖಾಯಿಲೆಗಳನ್ನು ಗುಣಪಡಿಸುವ ಮೂಲಕ ಮತ್ತು ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಗಳ ಮೂಲಕ ಸಾವಿರಾರು ಜನರ ಪ್ರಾಣ ಉಳಿಸುವ ಮೂಲಕ ಇಂದಿಗೂ ಜನರ ನಡುವೆ              “ ವೈದ್ಯೋ ನಾರಾಯಣೋ ಹರಿ ” ಎಂಬ ಉದಾತ್ತ ಅಭಿಪ್ರಾಯವನ್ನು ಉಳಿಸಿಕೊಂಡಿದ್ದರೂ, ಈ ವೈದ್ಯರು ತಮ್ಮ ಬದುಕು ರೂಪಿಸಿಕೊಳ್ಳುವ ಹಾದಿಯಲ್ಲಿ ಧನಾರ್ಜನೆಯತ್ತಲೇ ಸಾಗುತ್ತಿರುವುದನ್ನು ಗಮನಿಸಬಹುದು. ಕಾರ್ಪೋರೇಟ್‌ ಆಸ್ಪತ್ರೆಗಳು ವೈದ್ಯರೊಳಗೆ ವ್ಯಕ್ತಿಗತವಾಗಿ ಇರಬಹುದಾದ ಸಂವೇದನೆಗಳನ್ನೂ ನಿಷ್ಕ್ರಿಯವಾಗಿಸಿ, ಅವರನ್ನು ಧನಾರ್ಜನೆಯ ಸಾಧನಗಳನ್ನಾಗಿ ಮಾಡಿಬಿಡುತ್ತವೆ. ಲಕ್ಷಗಳಲ್ಲಿ, ಕೋಟಿಗಳಲ್ಲಿ ಹಣ  ವೆಚ್ಚ ಮಾಡಿ, ತಮ್ಮ ಬದುಕಿನ ಬಹುಮುಖ್ಯ ಭಾಗವನ್ನು ವೈದ್ಯಕೀಯ ಜ್ಞಾನಾರ್ಜನೆಯಲ್ಲೇ ಕಳೆದು, ಜನರ ಆರೋಗ್ಯ ರಕ್ಷಣೆಗೆ ಮುಂದಾಗುವ ವೈದ್ಯರು ಈ ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯ ಫಲಾನುಭವಿಗಳಾಗುವುದು ನವ ಉದಾರವಾದದ ಒಂದು ಪ್ರಧಾನ ಲಕ್ಷಣವಾಗಿಯೇ ಕಾಣುತ್ತದೆ. ಅತ್ಯುತ್ತಮ ವೈದ್ಯರ ಚಿಕಿತ್ಸೆಯಿಂದ ಗುಣಮುಖರಾಗಿ ಮರುಜೀವ ಪಡೆಯುವ ಸಾಮಾನ್ಯ ಜನತೆಯೂ, ಮತ್ತೊಂದು ಬದಿಯಲ್ಲಿ ತಮ್ಮ ಜೀವಮಾನದ ಉಳಿತಾಯವನ್ನು ಕಾರ್ಪೋರೇಟ್‌ ಮಾರುಕಟ್ಟೆಯಲ್ಲಿ ವ್ಯಯಿಸುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಒಂದೆಡೆ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಆಡಳಿತ ನೀತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸುತ್ತಿದ್ದರೂ, ಈ ಸೌಲಭ್ಯಗಳು ತಳಮಟ್ಟದ ಜನತೆಯನ್ನು ತಲುಪುತ್ತಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. ದೇಶದಲ್ಲಿ ಇರುವ ಒಟ್ಟು 596 ವೈದ್ಯಕೀಯ ಕಾಲೇಜುಗಳು, ಭಾರತದ ತಳಮಟ್ಟದ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎನ್ನುವುದನ್ನು ಅಂಕಿಅಂಶಗಳೇ ನಿರೂಪಿಸುತ್ತವೆ. ಈ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ವೈದ್ಯಕೀಯ ಜ್ಞಾನಾರ್ಜನೆಯೊಂದಿಗೆ, ಧನಾರ್ಜನೆಯ ಮಾರ್ಗಗಳನ್ನು ಶೋಧಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ, ಸಾಮಾನ್ಯ ಜನತೆ ಸರ್ಕಾರಗಳ ವಿಮಾ ಯೋಜನೆಗಳ ಮೊರೆ ಹೋಗಬೇಕಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಜನಸಾಮಾನ್ಯರ ಕೈಗೆಟುಕದಿರುವುದರಿಂದ, ಹೆಚ್ಚಿನ ಸಂಖ್ಯೆಯ ಜನರು ಕಾರ್ಪೋರೇಟ್‌ ಆಸ್ಪತ್ರೆಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಒಂದು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕಾಗಿದೆ. ಆದರೆ ಭಾರತದಲ್ಲಿ  1655 ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಐದು ವೈದ್ಯರು ಇರುತ್ತಾರೆ. 

2021ರ ನೀಟ್‌ ಪರೀಕ್ಷೆಯಲ್ಲಿ 16 ಲಕ್ಷ ಅಭ್ಯರ್ಥಿಗಳಿದ್ದರೂ, ತೇರ್ಗಡೆಯಾದ ಅಭ್ಯರ್ಥಿಗಳ ಸಂಖ್ಯೆ ಎಂಟು ಲಕ್ಷ. ಇವರ ಪೈಕಿ 80 ಸಾವಿರ ಅಭ್ಯರ್ಥಿಗಳಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಲಭಿಸುತ್ತದೆ. ಮುಂದಿನ ವರ್ಷದಲ್ಲಿ ಇದನ್ನು ಒಂದು ಲಕ್ಷಕ್ಕೆ ಏರಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಇದರಲ್ಲಿ 42 ಸಾವಿರ ಸೀಟುಗಳು ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಾಗುತ್ತದೆ. ಉಳಿದವರು ಖಾಸಗಿ ಕಾಲೇಜುಗಳ ಮೊರೆ ಹೋಗಬೇಕಾಗುತ್ತದೆ.  ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಲು ಕನಿಷ್ಠ 75 ಲಕ್ಷದಿಂದ ಒಂದು ಕೋಟಿ ರೂ ಖರ್ಚಾಗುತ್ತದೆ. ಡೊನೇಷನ್‌ ಪಡೆಯುವ ಕಾಲೇಜುಗಳಿಗೆ ಕೋಟಿಗಟ್ಟಲೆ ಹಣ ಸುರಿಯಬೇಕಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಐದು ಲಕ್ಷ ರೂಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರೈಸುವ ಸಾಧ್ಯತೆಗಳಿರುತ್ತವೆ. ಒಂದು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 1000 ಕೋಟಿ ರೂ ಬಂಡವಾಳ ಹೂಡಬೇಕಾಗುತ್ತದೆ. ಈ ಬೃಹತ್‌ ಬಂಡವಾಳದ ಪರಿಣಾಮವೇ ವೈದ್ಯಕೀಯ ಶಿಕ್ಷಣ ಲಾಭ ನಷ್ಟಗಳ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಸಿಲುಕಲು ಕಾರಣವೂ ಆಗಿದೆ.

ಅಪೌಷ್ಟಿಕತೆ, ಹಸಿವು, ಬಡತನ ಮತ್ತು ನಿರುದ್ಯೋಗ ಭಾರತದ ಸಾಮಾಜಿಕ ಜೀವನವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಸರ್ಕಾರಗಳ ಪ್ರಥಮ ಆದ್ಯತೆಯಾಗಬೇಕಿದೆ. ಇಂದಿಗೂ ಶೇ 60ಕ್ಕೂ ಹೆಚ್ಚು ಜನರು ಗ್ರಾಮೀಣ ಆರ್ಥಿಕತೆಯನ್ನೇ ಅವಲಂಬಿಸುವ ದೇಶದಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಸಮಗ್ರ ನೀತಿಗಳ ಮೂಲಕ ತಳಮಟ್ಟದ ದುಡಿಯುವ ಜನತೆಗೆ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟುಕುವ ದರಗಳಲ್ಲಿ ಒದಗಿಸುವುದು ಸರ್ಕಾರಗಳ ಆದ್ಯತೆಯಾಗಬೇಕಿದೆ. ಆಯುಷ್ಮಾನ್‌, ಯಶಸ್ವಿನಿ ಮುಂತಾದ ವಿಮಾ ಯೋಜನೆಗಳು ರೋಗಕ್ಕೆ ತುತ್ತಾದ ಜನತೆಯ ರಕ್ಷಣೆಗೆ ಧಾವಿಸುವ ಹಣಕಾಸಿನ ಸಾಧನಗಳು. ಆದರೆ ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ರೋಗಮುಕ್ತ ಜನಸಂಖ್ಯೆಯ ಪ್ರಮಾಣದಿಂದ ಅಲ್ಲವೇ ?

ವಿಮಾ ಯೋಜನೆಯನ್ನು ಹೆಚ್ಚು ಜನರು ಬಳಸಿಕೊಳ್ಳುತಿದ್ದಾರೆ ಎಂದರೆ ಹೆಚ್ಚಿನ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದೇ ಅರ್ಥ. ಜನರನ್ನು ಅನಾರೋಗ್ಯದಿಂದ ಕಾಪಾಡುವುದು ಪ್ರಭುತ್ವದ ಆದ್ಯತೆ ಮತ್ತು ಸಾಂವಿಧಾನಿಕ ಕರ್ತವ್ಯವೂ ಹೌದು. ಹೀಗೆ ಕಾಪಾಡಬೇಕಾದರೆ ಭಾರತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಶಿಶುಮರಣ, ಗರ್ಭಿಣಿ ಸ್ತ್ರೀಯರ ಸಮಸ್ಯೆಗಳು, ತಾಯಂದಿರ ಮರಣ ಇವೇ ಮುಂತಾದ ಸಮಸ್ಯೆಗಳ ವಿರುದ್ಧ ಸಮರ ಸಾರಬೇಕಿದೆ. ಪ್ರತಿಯೊಂದು ಗ್ರಾಮದಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ, ಸೂಕ್ತ ತಜ್ಞರನ್ನು, ವೈದ್ಯಕೀಯ ಸಿಬ್ಬಂದಿಯನ್ನು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು, ಶುಶ್ರೂಷಕರನ್ನು ಒದಗಿಸುವುದು ಸರ್ಕಾರಗಳ ಆದ್ಯತೆಯಾಗಬೇಕಿದೆ. ಈ ಆದ್ಯತೆಯನ್ನು ಮನಗಾಣಬೇಕಾದರೆ ಆಡಳಿತಾರೂಢ ಸರ್ಕಾರಗಳು ಕಲ್ಯಾಣ ಪ್ರಭುತ್ವ ವ್ಯವಸ್ಥೆಯ ಜನಕಲ್ಯಾಣ ನೀತಿಗಳನ್ನು ಜಾರಿಗೊಳಿಸಬೇಕಾಗುತ್ತದೆ.

ಈ ಜನಕಲ್ಯಾಣ ನೀತಿಗಳ ಪ್ರತಿಫಲನವನ್ನು ವಾರ್ಷಿಕ ಬಜೆಟ್‌ಗಳಲ್ಲಿ ನಾವು ಗುರುತಿಸಬೇಕಾಗುತ್ತದೆ. ಸರ್ಕಾರಗಳು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡುವ ಬಂಡವಾಳ ಮತ್ತು ನಿಯೋಜಿಸುವ ಹಣಕಾಸು ಮೊತ್ತ ಆರೋಗ್ಯ ರಕ್ಷಣೆಯ ಕ್ಷೇತ್ರವನ್ನು ವಿಸ್ತರಿಸಿ ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ. ಜನಸಾಮಾನ್ಯರ ಅನಾರೋಗ್ಯಕ್ಕೆ ಪರಿಹಾರ ಸಾಧನಗಳನ್ನು ರೂಪಿಸುವುದಕ್ಕೂ ಮುನ್ನ, ಸಾರ್ವಜನಿಕ ಆರೋಗ್ಯ ರಕ್ಷಣೆಯ ವಲಯದಲ್ಲಿ ಬಡಜನತೆಯನ್ನು ರೋಗಗಳಿಂದ ದೂರ ಇರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ , ಸಾರ್ವಜನಿಕ ನೈರ್ಮಲ್ಯ ಈ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಪೂರಕವಾಗಿದ್ದರೂ, ವೈದ್ಯಕೀಯ ಸೌಲಭ್ಯಗಳು ಬಡಜನತೆಯ ಪಾಲಿಗೆ ಗಗನ ಕುಸುಮದಂತಾಗಿರುವುದು ಯೋಚಿಸಬೇಕಾದ ವಿಚಾರ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಮತ್ತು ಧನಸಹಾಯವನ್ನು ಒದಗಿಸುದ ಮೂಲಕವೇ ಈ ಜಟಿಲ ಸಮಸ್ಯೆಯನ್ನು ನಿವಾರಿಸಲೂ ಸಾಧ್ಯ. ಈ ದೃಷ್ಟಿಯಿಂದಲೇ 2023-24ರ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ವಲಯದ ನಿರ್ಲಕ್ಷ್ಯವನ್ನು ಪರಾಮರ್ಶಿಸಬೇಕಿದೆ.

(ಮುಂದಿನ ಭಾಗದಲ್ಲಿ ಆಕ್ಸ್‌ಫಾಮ್‌ ವರದಿಯ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಬಜೆಟ್‌ )

-೦-೦-೦-೦-

Tags: BJPಕೋವಿಡ್-19ನರೇಂದ್ರ ಮೋದಿ
Previous Post

ಜನರ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿ ಪ್ರಣಾಳಿಕೆ: ಸಚಿವ ಡಾ.ಕೆ.ಸುಧಾಕರ್‌

Next Post

ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪರಮಾಣು ಬಿಕ್ಕಟ್ಟುಗಳ ನಿರಂತರ ಬೆದರಿಕೆ ಇದೆಯೇ? (ಭಾಗ-2)

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪರಮಾಣು ಬಿಕ್ಕಟ್ಟುಗಳ ನಿರಂತರ ಬೆದರಿಕೆ ಇದೆಯೇ? (ಭಾಗ-2)

ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪರಮಾಣು ಬಿಕ್ಕಟ್ಟುಗಳ ನಿರಂತರ ಬೆದರಿಕೆ ಇದೆಯೇ? (ಭಾಗ-2)

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada