ಬೆಂಗಳೂರು : ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಗುರುಪೀಠದ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಆಗಮಿಸದ ಕಾರಣಕ್ಕೆ ಅಭಿಮಾನಿಗಳು ಆಕ್ರೋಶ ಹೊರ ಹಾಕಿರುವ ಬೆನ್ನಲ್ಲೆ ಸುದೀಪ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
“ಸ್ನೇಹಿತರಿಗೆ ನಲ್ಮೆಯ ನಮಸ್ಕಾರ – ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ.” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
”ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ.ಶಾಂತರೀತಿಯಿಂದ ವರ್ತಿಸಿ …ಪ್ರೀತಿಯೊಂದಿಗೆ ನಿಮ್ಮ ಕಿಚ್ಚ….” ಎಂದು ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.
ವಾಲ್ಮೀಕಿ ಜಾತ್ರೆಗೆ ಬರುವಂತೆ ನಟ ಕಿಚ್ಚ ಸುದೀಪ್ ಅವರಿಗೆ ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನಿಸಿದ್ದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.ಸುದೀಪ್ ಅವರು ಮನೆಯಲ್ಲಿ ಇಲ್ಲದ ಕಾರಣ ಅವರ ತಂದೆ ಸಂಜೀವ್ ಅವರಿಗೆ ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ಪತ್ರಿಕೆ ನೀಡಿದ್ದರು ಎನ್ನಲಾಗಿದೆ.
ಆಹ್ವಾನ ಪತ್ರಿಕೆ ನೀಡಲಾಗಿತ್ತು
ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಜಗಳೂರಿನ ಶಾಸಕ ಎಸ್ ವಿ.ರಾಮಚಂದ್ರಪ್ಪ ಅವರು ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದರು. ಸುದೀಪ್ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅವರ ತಂದೆಯವರಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು ಎಂದು ಕೆ.ಎಂ. ರಂಗನಾಥ್ ಟ್ವೀಟ್ ಮಾಡಿದ್ದಾರೆ.